ಬಂಟ್ವಾಳ : ತಾಲೂಕಿನ ತುಂಬೆ ವೆಂಟೆಡ್ ಡ್ಯಾಂ ಮುಳುಗು ಪ್ರದೇಶಗಳ ಸಂತ್ರಸ್ತ ರೈತರಿಗೆ ನ್ಯಾಯೋಚಿತ ಪರಿಹಾರ ನೀಡುವ ಬಗ್ಗೆ ರೈತರ ಪರವಾಗಿ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ನೇತೃತ್ವದ ನಿಯೋಗ ಇತ್ತೀಚೆಗೆ ಸರಕಾರದ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ಚರ್ಚಿಸಿತು.

tumbe 2

ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಈ ಸಭೆಯಲ್ಲಿ ಈ ಬಾರಿ ತುಂಬೆಯ ನೂತನ ಡ್ಯಾಂನಲ್ಲಿ 4.5 ಮೀಟರ್ ನೀರು ಸಂಗ್ರಹಿಸಲಾಗಿದೆ. ಈ ಸಂಬಂಧ ಮುಳುಗಡೆಗೊಂಡ ಜಮೀನಿನ ಸಂತ್ರಸ್ತರಿಗೆ ಈ ವರ್ಷವೇ ನ್ಯಾಯೋಚಿತ ಪರಿಹಾರ ನೀಡಲಾಗುವುದು ಹಾಗೂ ಮುಂದಿನ ವರ್ಷ 5 ಮೀಟರ್ ನೀರು ಸಂಗ್ರಹಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧವೂ ಸಂತ್ರಸ್ತ ರೈತರಿಗೆ ಅದೇ ವರ್ಷ ಶಾಶ್ವತ ಪರಿಹಾರ ನೀಡುವ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ.

ತುಂಬೆ ನೂತನ ವೆಂಟೆಡ್ ಡ್ಯಾಂನಲ್ಲಿ ಸಂಗ್ರಹಿಸುವ ನೀರಿನಿಂದ ಒಟ್ಟು 488 ಎಕ್ರೆ ಜಮೀನು ಮುಳುಗಡೆಯಾಗುವ ಬಗ್ಗೆ ಈಗಾಗಲೇ ಸರ್ವೆ ನಡೆಸಲಾಗಿದ್ದು, ಈ ಜಮೀನುಗಳ ಸಂತ್ರಸ್ತರಿಗೆ ಒಟ್ಟು ಪರಿಹಾರ ಮೊತ್ತ 125 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಪರಿಹಾರ ಮೊತ್ತವನ್ನು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಹಣಕಾಸು ಇಲಾಖೆ ಜಂಟಿಯಾಗಿ ಠೇವಣಿ ಇಟ್ಟು ವಿತರಿಸುವುದು ಎಂಬ ತೀರ್ಮಾನಕ್ಕೂ ಸಭೆಯಲ್ಲಿ ಬರಲಾಗಿದೆ.

tumbe

ಸಭೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್ ಕುಂಟಿ, ನಗರಾಭಿವೃದ್ದಿ ಇಲಾಖೆ ಅಪರ ಕಾರ್ಯದರ್ಶಿ ಪೊನ್ನುರಾಜ್, ಹಣಕಾಸು ಯೋಜನೆ ಇಲಾಖೆ ಕಾರ್ಯದರ್ಶಿ ಅರವಿಂದ ಶ್ರೀವಾಸ್ತವ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಮಣ ರೆಡ್ಡಿ, ರಾಜ್ಯ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಪದನಿಮಿತ್ತ ಆಯುಕ್ತ ಹಾಗೂ ಪೌರಾಡಳಿತ ಇಲಾಖೆ ನಿರ್ದೇಶಕ ಶಿವಸ್ವಾಮಿ ಕಳಸದ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಜಗದೀಶ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ಕಾರ್ಯನಿರ್ವಾಹಕ ಇಂಜಿನಿಯರ್ ಮಳವಳ್ಳಿ ಮೊದಲಾದ ಅಧಿಕಾರಿಗಳು ಭಾಗವಹಿಸಿದ್ದರು.

ಸಂತ್ರಸ್ತ ರೈತರ ಪರವಾಗಿ ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಜಿಪಮುನ್ನೂರು ಗ್ರಾ ಪಂ ಸದಸ್ಯರಾದ ಯೂಸುಫ್ ಕರಂದಾಡಿ, ಅಹ್ಮದ್ ಕಬೀರ್, ಗ್ರಾ ಪಂ ಮಾಜಿ ಅಧ್ಯಕ್ಷ ಎಂ ಪರಮೇಶ್ವರ, ಸಂತ್ರಸ್ತ ರೈತರಾದ ಇಕ್ಬಾಲ್ ಪಡ್ಪು, ಕೆ ಎಂ ಅಬ್ದುಲ್ ರಹಿಮಾನ್ ಉದ್ದೋಟ್ಟು, ಆದಂ ಬಾಳಿಕೆ, ಧನಂಜಯ ಶೆಟ್ಟಿ ಪರಾರಿ, ಮುಹಮ್ಮದ್ ರಫೀಕ್ ಕರಂದಾಡಿ, ಹಸನಬ್ಬ ಉದ್ದೊಟ್ಟು, ಅಬ್ದುಲ್ ಕರೀಂ ಮೊದಲಾದವರು ಉಸ್ತುವಾರಿ ಸಚಿವರ ನಿಯೋಗದಲ್ಲಿದ್ದರು.

By suddi9

Leave a Reply

Your email address will not be published. Required fields are marked *