ಮೂಡುಬಿದಿರೆ: ಎಪಿಎಂಸಿ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ವಿಜಯೋತ್ಸವ ಸಂದರ್ಭದಲ್ಲಿ ಮಾಸ್ತಕಟ್ಟೆಯಲ್ಲಿ ಶನಿವಾರ ಸೋತ ಅಭ್ಯರ್ಥಿ, ವಲೇರಿಯನ್ ಕುಟಿನ್ಹಾ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮುಖಂಡರು ಭಾನುವಾರ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.
ಎಪಿಎಂಸಿ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ನಾವು ಚುನಾವಣೆಯ ವಿಜಯೋತ್ಸವ ಆಚರಿಸುತ್ತಾ ಹೊಸಬೆಟ್ಟು ಪಂಚಾಯಿತಿ ಕಚೇರಿ ಬಳಿ ತಲುಪುತ್ತಿದ್ದಾಗ ಅಲ್ಲಿಗೆ ಬಂದಿದ್ದ ವಲೇರಿಯನ್ ಕುಟಿನ್ಹಾ ಮತ್ತು ಬಿಜೆಪಿಯ ಇತರ ಕಾರ್ಯಕರ್ತರು ನಮ್ಮ ಪಕ್ಷದ ವಿರುದ್ಧ ಘೋಷಣೆ ಕೂಗಿದ್ದಾರೆ. ಅದಕ್ಕೆ ನಾವು ಆಕ್ಷೇಪಿಸಿದಕ್ಕೆ ನನಗೆ ಹಾಗೂ ನನ್ನ ಕಾರು ಚಾಲಕನಿಗೆ ಹಲ್ಲೆ ನಡೆಸಿ ನಮಗೆ ಜೀವಬೆದರಿಕೆಯೊಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಚಂದ್ರಹಾಸ್ ಸನಿಲ್ ದೂರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಚಂದ್ರಹಾಸ್ ಸನಿಲ್ ನೀಡಿದ ದೂರಿನಂತೆ ಪೊಲೀಸರು ಬಿಜೆಪಿಯ ಜಗದೀಶ್ ಅಧಿಕಾರಿ, ಉಮನಾಥ ಕೋಟ್ಯಾನ್, ಈಶ್ವರ ಕಟೀಲು, ಭರತ್ ಶೆಟ್ಟಿ, ಸಮಿತ್ರಾಜ್ ವಿರುದ್ಧ ದೂರು ದಾಖಲಿಸಿದ್ದಾರೆ. ಚಂದ್ರಹಾಸ್ ಸನಿಲ್ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.

