ಮೂಡುಬಿದಿರೆ: ವಿದ್ಯಾರ್ಥಿಗಳು ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ಕ್ರಿಯಾಶೀಲತೆ ತೋರ್ಪಡಿಸಿದಲ್ಲಿ ಜೀವನದ ಯಶಸ್ಸು ಸಾಧ್ಯವಾಗುತ್ತದೆ. ಇಲ್ಲಿ ಗಳಿಸಿದ ಕೀರ್ತಿ, ಯಶಸ್ಸುಗಳು ಜೀವನದ ಕೊನೆತನಕ ಇರುತ್ತದೆ ಎಂದು ಮಣಿಪಾಲ ಶ್ರೀ ಮಾಧವ ಪೈ ಮೆಮೋರಿಯಲ್ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಪಿ.ದಯಾನಂದ ಶೆಟ್ಟಿ ಅಭಿಪ್ರಾಯಪಟ್ಟರು. ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿರುವ ಎಂ.ಕೆ.ಶೆಟ್ಟಿ ಸೆಂಟ್ರಲ್ ಸ್ಕೂಲ್‍ನ ವಾರ್ಷಿಕೋತ್ಸವ ಬುಧವಾರ ಶಾಲಾ ಆವರಣದಲ್ಲಿ ಜರುಗಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಯಾನಂದ ಶೆಟ್ಟಿಯವರು, ಮಹಾಭಾರತದ ಕಥೆಗಳನ್ನು ಉಲ್ಲೇಖಿಸಿ ಜೀವನದ ಯಶಸ್ಸಿನ ಸೂತ್ರಗಳನ್ನು ತಿಳಿಸಿದರು.
ರಾಜಲಕ್ಷ್ಮೀ ಎಜುಕೇಶನ್ ಟ್ರಸ್ಟ್‍ನ ಅಧ್ಯಕ್ಷ ರಾಜೇಶ್ ಚೌಟ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಎಳೆಯ ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಅಧ್ಯಾಪಕರೊಂದಿಗೆ ಹೆತ್ತವರ ಪಾತ್ರವೂ ಮಹತ್ವದ್ದು.ಸಾಮಾಜಿಕ ಸವಾಲುಗಳನ್ನು ಸ್ವೀಕರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದರು. ರಾಷ್ಟ್ರೀಯ ಕರಾಟೆ ಚಾಂಪಿಯನ್ ಪ್ರತ್ಯುಷ್ ಪಿ. ಹಾಗೂ ಶಾಲಾ ಸರ್ವಾಂಗೀಣ ಸಾಧಕ ವಿದ್ಯಾರ್ಥಿನಿ ಫಾತಿಮತ್ ರಸಿಕ ಇವರನ್ನು ಅಭಿನಂದಿಸಲಾಯಿತು. ಪೂರ್ವಾಹ್ನ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಮಹಾವೀರ ಪ.ಪೂ. ಕಾಲೇಜಿನ ಪ್ರಾಂಶುಪಾಲ ಎಂ.ರಮೇಶ್ ಭಟ್ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಶಾಲಾ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ರೇಶ್ಮಾ ಶೆಟ್ಟಿ, ಪ್ರಾಂಶುಪಾಲೆ ನಿಶ್ಮಿತಾ ಬಿ., ಪೋಷಕ-ಶಿಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಭಂಡಾರಿ, ಕಾರ್ಯದರ್ಶಿ ಪ್ರಸನ್ನ ಹೆಗ್ಡೆ, ವಿದ್ಯಾರ್ಥಿ ನಾಯಕಿ ಫಾತಿಮತ್ ರಸಿಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಭಾಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ನಿಶ್ಮಿತಾ ಬಿ. ವರದಿ ಮಂಡಿಸಿದರು.ರೇಷ್ಮಾ ಶೆಟ್ಟಿ ಧನ್ಯವಾದವಿತ್ತರು.ಅಧ್ಯಾಪಕ ಶ್ರೀಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

