ಮೂಡುಬಿದಿರೆ: ಬೇಲೂರಿನ ವಿಶ್ವವಿಖ್ಯಾತ ಅದ್ಭುತ ಶಿಲ್ಪಕಲೆಯ ಚೆನ್ನಕೇಶವ ದೇವಾಲಯ ನಿರ್ಮಾಣವಾಗಿ 2017ಮಾರ್ಚ್‍ಗೆ 900 ವರ್ಷಗಳು ಪೂರ್ಣಗೊಳ್ಳಲಿದ್ದು ಅದರ ನಿರ್ಮಾತೃ ಶಿಲ್ಪಿಗಳ ನೆನಪಿಗಾಗಿ ಜಕಣಾಚಾರ್ಯ ಸಂಸ್ಮರಣಾ ಅಭಿಯಾನ ವರ್ಷ 2017 ಜ.8ರಂದು ಮಧ್ಯಾಹ್ನ 2.30ಕ್ಕೆ ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಉದ್ಘಾಟನೆಗೊಳ್ಳಲಿದೆ.
ವಿಶ್ವಕರ್ಮ ಸಂಸ್ಕೃತಿ ಪ್ರಸಾರ ಪ್ರತಿಷ್ಠಾನದ ವತಿಯಿಂದ ನಡೆಯಲಿರುವ ಈ ಅಭಿಯಾನವನ್ನು ಶಾಸಕ ಕೆ. ಅಭಯಚಂದ್ರ ಜೈನ್ ಉದ್ಘಾಟಿಸಲಿದ್ದಾರೆ. ಕ್ಷೇತ್ರದ ಆಡಳಿತ ಮೊಕ್ತೇಸರ ಸುಂದರ ಜಿ. ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದು ಜಾನಪದ ವಿದ್ವಾಂಸ ಕೆ. ಎಲ್.ಕುಂಡಂತಾಯ “ದೇವಾಲಯ ಶಿಲ್ಪ”ದ ಕುರಿತು ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಕಾಷ್ಠಶಿಲ್ಪಿ ಕಲ್ಲಮುಂಡ್ಕೂರು ನಾರಾಯಣ ಆಚಾರ್ಯ ಅವರನ್ನು ಸನ್ಮಾನಿಸಲಾಗುವುದು.
ಮುಖ್ಯ ಅತಿಥಿಗಳಾಗಿ ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್, ಮಂಗಳೂರು ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗರಾಜ ಆಚಾರ್ಯ, ಕಾರ್ಕಳ ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಹರೀಶ್ ಆಚಾರ್ಯ, ಕೊಲಕಾಡಿ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಸದಾನಂದ ಆಚಾರ್ಯ, ವಿಶ್ವಕರ್ಮ ಒಕ್ಕೂಟದ ಉಪಾಧ್ಯಕ್ಷ ಮಧು ಆಚಾರ್ಯ, ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ರಾಮಕೃಷ್ಣ ಶಿರೂರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಪ್ರತಿಷ್ಠಾನದ ಸರಣಿಯ 125ನೇ ತಾಳಮದ್ದಳೆ “ಅಮರಶಿಲ್ಪಿ ಜಕಣಾಚಾರ್ಯ” ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕುಂಜೂರು ಗಣೇಶ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

