ಬಂಟ್ವಾಳ : ಭಜನೆ ಮತ್ತು ಯಕ್ಷಗಾನದಿಂದ ದೇಹ ಮತ್ತು ಮನಸ್ಸಿನ ನಡುವೆ ಅನುಸಂಧಾನವಾಗಿ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರು ನುಡಿದರು. ಅವರು ಗೋಪಾಲ್ ಕೃಷ್ಣ ವಿಶ್ವಸ್ಥ ಸೇವಾ ಮಂಡಳಿ ಕನಕಗಿರಿ ಮಂಚಿ ಧಾರ್ಮಿಕ ಮಹೋತ್ಸವದ ಮೂರು ದಿನದ ಯಕ್ಷಗಾನದ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನವಿತ್ತರು.
ಭಜನೆಯಿಂದ ದೇಹದ ಪ್ರತಿಯೊಂದು ಅಂಗಗಳಿಗೂ ಉದ್ದಿಪನ ದೊರೆಯಲಿದ್ದು ಆರೋಗ್ಯವಂತ ದೇಹದಿಂದ ಒಳ್ಳೆ ಮನಸ್ಸು ಹೊರಹೊಮ್ಮುವುದು. ಇದರಿಂದ ಸಕಾರಾತ್ಮಕ ಶಕ್ತಿಯ ಸಂರಚನೆ ಆಗುತ್ತದೆ. ಸಕಾರಾತ್ಮಕ ಚಿಂತನೆ ಸಜ್ಜನ ಸಂಗಕ್ಕೆ ಪ್ರೇರಣೆ ನೀಡುತ್ತದೆ ಎಂದು ಹೇಳಿದ ಸ್ವಾಮೀಜಿಯವರು ಭಜನಾ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕೆಂದು ಹೇಳಿದರು.
ಯಕ್ಷಗಾನಕ್ಕೆ ಕಟೀಲು ಕ್ಷೇತ್ರ ಮತ್ತು ಎಡನೀರು ಮಠದಿಂದ ಬಹಳಷ್ಟು ಪ್ರೋತ್ಸಾಹ ದೊರಕುತ್ತಿದೆ . ಇಂದು ಯಕ್ಷಗಾನ ಜನಪ್ರಿಯವಾಗುತ್ತಿದೆ ಯುವ ಸಮುದಾಯ ಯಕ್ಷಗಾನ ಕ್ಷೇತ್ರಕ್ಕೆ ಆಕರ್ಷಿತರಾಗುತ್ತಿದ್ದಾರೆ. ಯಕ್ಷಗಾನದಿಂದ ವೈಚಾರಿಕ ಮನೋಭಾವ ವಿಮರ್ಶಾತ್ಮಕ ಚಿಂತನೆಗಳು ಅಭಿವೃದ್ದಿಯಾಗುತ್ತದೆ. ಯಕ್ಷಗಾನವನ್ನು ಪ್ರೀತಿಸುವುದರಿಂದ ನಮ್ಮನ್ನು ನಾವೇ ಪ್ರೀತಿಸುವಂತಾಗುತ್ತದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಅನುವಂಶಕ ಅರ್ಚಕ ವೇದಮೂರ್ತಿ ಕಮಾಲಾದೇವಿ ಪ್ರಸಾದ ಅಸ್ರಣ್ಣ ನುಡಿದರು.
ವೇದಿಕೆಯಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವೇದವ್ಯಾಸ ರಾಮಕುಂಜ , ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಉಪಸ್ಥಿತರಿದ್ದರು. ಸಂಚಾಲಕ ಕೈಯೂರು ನಾರಾಯಣ ಭಟ್ ಸ್ವಾಗತಿಸಿದರು.ಅಧ್ಯಕ್ಷ ಸಿ.ಎಚ್.ಸೀತಾರಾಮ ಶೆಟ್ಟಿ ವಂದಿಸಿ , ತಿರುಮಲೇಶ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಗೋಪಾಲ್ ಕೃಷ್ಣ ಯಕ್ಷಗಾನ ಕಲಾ ಮಂಡಳಿ ಎಡನೀರು ಇವರಿಂದ ಕೃಷ್ಣ ಲೀಲೆ ಕಂಸ ವಧೆ ಯಕ್ಷಗಾನ ಜರಗಿತು.

