ಮೂಡುಬಿದಿರೆ: ವ್ಯಾಂಟೆಡ್ ಡ್ಯಾಮ್‍ಗಳನ್ನು ನಿರ್ಮಿಸುವುದರಿಂದ ಹರಿದು ಹೋಗುವ ನೀರನ್ನು ತಡೆ ಹಿಡಿಯುವ ಕೆಲಸವನ್ನು ಸರಕಾರದ ವತಿಯಿಂದ ಮಾಡಲಾಗುತ್ತದೆ. ಆದರೆ ಇದಕ್ಕೆ ಹಲಗೆ ಹಾಕುವಂತಹ ಮುತುವರ್ಜಿಯನ್ನು ಆಯಾಯ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ವಹಿಸಿಕೊಳ್ಳಬೇಕು ಎಂದು ಶಾಸಕ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.

ಸಣ್ಣ ನೀರಾವರಿ ಇಲಾಖೆಯಿಂದ ರೂ 1ಕೋಟಿ ವೆಚ್ಚ ಅನುದಾನದಲ್ಲಿ ನಾಗುಂಡಿ ಹೊಳೆಗೆ ಅಡ್ಡವಾಗಿ ಕಲ್ಲಮುಂಡ್ಕೂರು ಗ್ರಾ,ಪಂ ವ್ಯಾಪ್ತಿಯ ಕೊಪ್ಪಲದಲ್ಲಿ ನಿರ್ಮಿಸಿರುವ ಅಣೆಕಟ್ಟನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಮೂಡಾ ಆಯುಕ್ತ ಶ್ರೀಕಾಂತ್ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಇಂದಿನ ದಿನಗಳಲ್ಲಿ ಮಳೆ ಕಡಮೆ ಬೀಳುತ್ತಿರುವುದರಿಂದ ನೀರಿನ ಮೂಲವೂ ಕಡಿಮೆಯಾಗಿದೆ. ಆದರೆ ನೀರಿನ ಬಳಕೆ ಹೆಚ್ಚಾಗುತ್ತಿದೆ. ಈ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ನೀರಿನ ಮೂಲವನ್ನು ಗುರುತಿಸಿ ಅಣೆಕಟ್ಟನ್ನು ನಿರ್ಮಿಸಿರುವುದು ಅಭಿನಂದನಾರ್ಹ ಎಂದು ಹೇಳಿದ ಅವರು ಈ ಅಣೆಕಟ್ಟಿನ ಮೂಲಕ ತನ್ನ ಬಾಲ್ಯದ ಕನಸು ನನಸಾಗಿದೆ ಎಂದರು.

ಗ್ರಾ.ಪಂ ಉಪಾಧ್ಯಕ್ಷ ಸುಂದರ ಪೂಜಾರಿ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಸಕ ಅಭಯಚಂದ್ರ ಜೈನ್ ಹಾಗೂ ಅಣೆಕಟ್ಟನ್ನು ್ಲ ನಿರ್ಮಿಸಿರುವ ಇಂಜಿನಿಯರ್ ಷಣ್ಮುಗಂ ಅವರನ್ನು ಗ್ರಾಮಸ್ಥರು ಗೌರವಿಸಿದರು.

ತಾ.ಪಂ ಸದಸ್ಯ ಸುಕುಮಾರ್ ಸನಿಲ್, ಸರ್ವೋದಯ ಪ್ರೌಢಶಾಲೆಯ ಸಂಚಾಲಕ ಜಯಪ್ರಕಾಶ್ ಪಡಿವಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ವಿದ್ಯುತ್ ನಿಗಮದ ನಿರ್ದೇಶಕ ಚಂದ್ರಹಾಸ ಸನಿಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗ್ರಾ.ಪಂ ಸದಸ್ಯರಾದ ಸತೀಶ್ ಕಲ್ಲಮುಂಡ್ಕೂರು, ಜೋಕಿಂ ಕೊರೆಯಾ, ಗೀತಾ ಅಮೀನ್, ಗೀತಾ ಶೆಟ್ಟಿ, ಯಶೋಧ, ಯೋಗಿನಿ, ಮಾಜಿ ಸದಸ್ಯ ಜಗತ್ಪಾಲ ಭಂಡಾರಿ, ಗುತ್ತಿಗೆದಾರ ಅರುಣ್ ಭಟ್, ಮೂಡುಬಿದಿರೆ ಪುರಸಭೆಯ ನಾಮನಿರ್ದೇಶಿತ ಸದಸ್ಯ ಇಕ್ಬಾಲ್ ಕರೀಂ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ರಾಕೇಶ್,ಪಿಡಿಒ ಉಗ್ಗಪ್ಪ ಪೂಜಾರಿ ಉಪಸ್ಥಿತರಿದ್ದರು. ಶಿಕ್ಷಕ ಗುರು ಎಂ.ಪಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಪಶ್ಚಿಮವಾಹಿನಿ ಯೋಜನೆಯನ್ನು ಜಾರಿಗೆ ತಂದರೆ ನೀರಿನ ಮೂಲ ವೃದ್ಧಿಯಾಗಬಹುದು ಮತ್ತು ಕೃಷಿಕರ ಬದುಕನ್ನು ಹಸನಾಗಿಸಬಹುದು ಆದ್ದರಿಂದ ಈ ಯೋಜನೆ ಕಾರ್ಯಗತವಾದರೆ ನೀರಿನ ಸಮಸ್ಯೆಯೂ ದೂರವಾಗಬಹುದು.
– ಅಭಯಚಂದ್ರ ಜೈನ್
