ಬಂಟ್ವಾಳ: ಸಮಾಜದಲ್ಲಿ ಎಲ್ಲಾ ಜಾತಿ ಧರ್ಮಗಳ ನಡುವಿನ ಅಂತರವನ್ನು ಮೀರಿ ಮನುಷ್ಯ ಮತ್ತು ಮನುಷ್ಯರ ನಡುವೆ ಸ್ನೇಹ ಮತ್ತು ಪೀತಿ ಉಳಿಸುವ ದೇವರು ಅಂದರೆ ಅದು ಅನ್ನ. ಇದರಿಂದಾಗಿ ಇಲ್ಲಿನ ಸಮುದಾಯ ಭವನ ಮತ್ತು ಅನ್ನಛತ್ರ ಎಲ್ಲರನ್ನು ಒಟ್ಟುಗೂಡಿಸುವ ಮತ್ತು ಜೊತೆಯಾಗಿ ಸತ್ಕಾರ್ಯದೆಡೆಗೆ ಕೊಂಡೊಯ್ಯುವ ಕಾಯಕಕ್ಕೆ ಸಮರ್ಪಣೆಯಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನ ಮತ್ತು ಅನ್ನಛತ್ರಕ್ಕೆ ಶುಕ್ರವಾರ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿ ಇವರ ಪೌರೋಹಿತ್ಯದಲ್ಲಿ ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್‍ನ ಗೌರವಾಧ್ಯಕ್ಷೆ ಗುಲಾಬಿ ಅಮ್ಮ ಶಿಲಾನ್ಯಾಸ ನೆರವೇರಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಕೆ. ರವೀಂದ್ರ ಕಂಬಳಿ, ದೇವಂದಬೆಟ್ಟು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ತುಂಬೆ, ಉದ್ಯಮಿ ಅಶೋಕ್ ಕುಮಾರ್ ರೈ ಪುತ್ತೂರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಶ್ರೀ ರಾಮ ಭಜನಾ ಮಂದಿರ ಅಧ್ಯಕ್ಷ ಶಶಿಧರ ಬ್ರಹ್ಮರಕೂಟ್ಲು, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶಿವಪ್ರಸಾದ್ ಕನಪಾಡಿ, ಗಣೇಶ್ ಸುವರ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಲತಾ ಪೂಜಾರಿ, ಉದ್ಯಮಿ ಹರೀಶ್ ಕೊಟ್ಟಾರಿ, ಕಾಸರಗೋಡು, ಸುಕುಮಾರ್ ದೇಮುಂಡೆ, ತಾರಾನಾಥ ಕೊಟ್ಟಾರಿ, ನಾರಾಯಣ ನಾಯ್ಕ ಮತ್ತಿತರ ಗಣ್ಯರು ಇದ್ದರು. ಉಮೇಶ್ ರೆಂಜೋಡಿ ಸ್ವಾಗತಿಸಿ, ಉದಯ ಕುಮಾರ್ ಜ್ಯೋತಿಗುಡ್ಡೆ ವಂದಿಸಿದರು. ಶಂಕರ್ ಸುವರ್ಣ ನಿರೂಪಿಸಿದರು.

