ಬಂಟ್ವಾಳ: ಜಿಲ್ಲೆಯ ಜೀವನದಿಯಾಗಿ ಗುರುತಿಸಿಕೊಂಡಿರುವ ನೇತ್ರಾವತಿ ನದಿಗೆ ಇಲ್ಲಿನ ತುಂಬೆಯಲ್ಲಿ ನಿರ್ಮಾಣಗೊಂಡ 11 ಮೀ. ಎತ್ತರದ ಹೊಸ ಅಣೆಕಟ್ಟೆಯಿಂದ ಮುಳುಗಡೆ ಭೀತಿ ಎದುರಿಸುತ್ತಿರುವ ನೂರಾರು ಎಕರೆ ಕೃಷಿ ಭೂಮಿಗೆ ಪರಿಹಾರಧನ ನೀಡುವ ಬಗ್ಗೆ ಜಿಲ್ಲಾಡಳಿತ ಮೌನ ವಹಿಸಿರುವ ನಡುವೆಯೇ ಹೊಸ ಅಣೆಕಟ್ಟೆಯಲ್ಲಿ ಭಾನುವಾರ ನೀರು ಸಂಗ್ರಹಿಸುವ ಮೂಲಕ ರೈತರಿಗೆ ಮತ್ತಷ್ಟು ಭೀತಿ ಹೆಚ್ಚುವಂತೆ ಮಾಡಿದೆ.
ಭಾನುವಾರ ಬೆಳಿಗ್ಗೆ ಸದ್ದಿಲ್ಲದೆ ಹೊಸ ಅಣೆಕಟ್ಟೆಯಲ್ಲಿ ಸ್ವಯಂ ಚಾಲಿತ ಗೇಟ್‍ಗಳನ್ನು ಇಳಿಸಿಸುವ ಮೂಲಕ ಪ್ರಾಯೋಗಿಕವಾಗಿ ಸುಮಾರು ನಾಲ್ಕೂವರೆ ಮೀ.ಎತ್ತರಕ್ಕೆ ನೀರು ಸಂಗ್ರಹಿಸಿದ ಪರಿಣಾಮ ಇಲ್ಲಿನ 13 ಅಡಿ ಎತ್ತರದ ಹಳೆ ಅಣೆಕಟ್ಟೆ ಮುಳುಗಡೆಗೊಂಡಿರುವ ದೃಶ್ಯ ಕಂಡು ಬಂದಿದೆ. ಆರಂಭದಲ್ಲಿ ಐದು ಮೀಟರ್ ನೀರು ಸಂಗ್ರಹಿಸಲಾಗಿದ್ದು, ಬಳಿಕ ಬಂಟ್ವಾಳ ಜಕ್ರಿಬೆಟ್ಟು ತನಕ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳಗೊಂಡ ಪರಿಣಾಮ ನದಿ ತೀರದ ಕೃಷಿ ಭೂಮಿ ಮುಳುಗಡೆಯಾದ ಹಿನ್ನೆಲೆಯಲ್ಲಿ ಮತ್ತೆ ನೀರಿನ ಮಟ್ಟವನ್ನು ಮುಂಜಾಗ್ರತಾ ಕ್ರಮವಾಗಿ ನಾಲ್ಕೂವರೆ ಮೀ. ಎತ್ತರಕ್ಕೆ ನಿಲುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಮುಳುಗಡೆ ಪ್ರದೇಶವನ್ನು ಗೌಪ್ಯವಾಗಿ ಮಾತ್ರವಲ್ಲದೆ ರೈತರ ಸಮ್ಮುಖದಲ್ಲಿಯೂ ಸಾಕಷ್ಟು ಬಾರಿ ಸರ್ವೆ ನಡೆಸಲಾಗಿದ್ದರೂ ನಿಖರವಾಗಿ ಮುಳುಗಡೆ ಪ್ರದೇಶ ಎಷ್ಟು…? ಪ್ರತೀ ಎಕರೆಗೆ ನಿಗದಿಪಡಿಸಿದ ಪರಿಹಾರಧನ ಎಷ್ಟು …? ಎಂಬ ಬಗ್ಗೆ ಇಲ್ಲಿನ ರೈತರಿಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂಬ ಆರೋಪ ರೈತರಿಂದ ಕೇಳಿ ಬಂದಿದೆ.
ಈ ಬಗ್ಗೆ ಉಂಟಾಗಿರುವ ಗೊಂದಲಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಮಂಗಳೂರು ಮಹಾನಗರ ಪಾಲಿಕೆ ಎಂಜಿನಿಯರ್ ಮತ್ತು ಅಧಿಕಾರಿಗಳ ನಿಲುವಿನ ವಿರುದ್ಧ ಇಲ್ಲಿನ ರೈತ ಸಂಘ ಮತ್ತು ಹಸಿರುಸೇನೆ ಸಹಿತ ತುಂಬೆ ಅಣೆಕಟ್ಟೆ ಸಂತ್ರಸ್ತರ ಹೋರಾಟ ಸಮಿತಿ ಪ್ರತಿಭಟಿಸುವುದಾಗಿ ಎಚ್ಚರಿಸಿದೆ.

ಇದೀಗ ಹೊಸ ಅಣೆಕಟ್ಟೆಯಲ್ಲಿ ಹೆಚ್ಚುವರಿಯಾಗಿ ಸಂಗ್ರಹಿಸಿರುವ ನೀರಿನಿಂದ ಮುಳುಗಡೆಯಾಗುತ್ತಿರುವ ಜಮೀನಿನ ಬಗ್ಗೆ ಮನಾಪ ಎಂಜಿನಿಯರ್ ಮತ್ತಿತರ ಅಧಿಕಾರಿಗಳು ಇಲ್ಲಿನ ನದಿ ತೀರದ ನಾಲ್ಕು ಗ್ರಾಮಗಳಲ್ಲಿ ಗ್ರಾಮಕರಣಿಕರ ಉಪಸ್ಥಿತಿಯಲ್ಲಿ ಪರಿಶೀಲನೆ ನಡೆಸಿರುವುದಾಗಿ ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಭಾನುವಾರ ದಿಢೀರನೆ ಏರಿಕೆಯಾಗುತ್ತಿದ್ದಂತೆಯೇ ಆತಂಕಗೊಂಡ ನದಿ ತೀರದ ರೈತರು ತಮ್ಮ ಪಂಪ್‍ಸೆಟ್‍ಗಳನ್ನು ತಗ್ಗು ಪ್ರದೇಶದಿಂದ ಸ್ಥಳಾಂತರಿಸುತ್ತಿರುವುದಾಗಿ ತಿಳಿಸಿದ್ದಾರೆ. ಇಲ್ಲಿನ ಶಂಭೂರು ಎಎಂಆರ್ ಅಣೆಕಟ್ಟೆಯಲ್ಲಿ ಕೂಡಾ ಈಗಾಗಲೇ ನೀರಿನ ಮಟ್ಟವನ್ನು 8.5 ಮೀಟರ್‍ಗೆ ಕಾಯ್ದುಕೊಳ್ಳಲಾಗಿದ್ದು, ಶನಿವಾರ ಹೆಚ್ಚುವರಿ ನೀರನ್ನು ನದಿಗೆ ಹರಿಯಲು ಬಿಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪರಿಹಾರ:
ಇಲ್ಲಿನ ನದಿ ತೀರದ ಬಂಟ್ವಾಳ ಮೂಡ ಮತ್ತು ಕಳ್ಳಿಗೆ ಗ್ರಾಮಗಳ ರೈತರ ಎಕರೆ ಜಮೀನಿಗೆ ತಲಾ ರೂ. 1.25ಲಕ್ಷ, ಪಾಣೆಮಂಗಳೂರು ಗ್ರಾಮದ ರೈತರಿಗೆ ರೂ 1ಲಕ್ಷ, ಸಜಿಪಮುನ್ನೂರು ಗ್ರಾಮದ ರೈತರಿಗೆ ರೂ 75 ಸಾವಿರ ಮೊತ್ತ ನೀಡುವ ಭರವಸೆ ಜಿಲ್ಲಾಧಿಕಾರಿಯಿಂದ ದೊರೆತಿದೆ ಎಂದು ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಪ್ರತಿಕ್ರಿಯಿಸಿದ್ದಾರೆ.
-ಮೋಹನ್ ಕೆ.ಶ್ರೀಯಾನ್ ರಾಯಿ

