ಮೂಡುಬಿದಿರೆ: ಕೆರೆ, ತೇವಾಂಶವುಳ್ಳ ಪ್ರದೇಶವು ಹೇಗೆ ಪರಿಸರದಲ್ಲಿ ಸಮತೋಲನವನ್ನು ಕಾಪಾಡಿ, ನಶಿಸಿ ಹೋಗುತ್ತಿರುವ ಜೀವ ಪರಿಸರವನ್ನು ಸಂರಕ್ಷಿಸುತ್ತವೆ ಎನ್ನುವ ವಿಚಾರವವನ್ನು ಪ್ರಮುಖವಾಗಿರಿಸಿ, ವಿದ್ಯಾರ್ಥಿಗಳಲ್ಲಿ ಪರಿಸರ, ಅದರ ಕುರಿತಾದ ಸಂಶೋಧನೆಯನ್ನು ಉತ್ತೇಜಿಸುವ ದೃಷ್ಠಿಯಿಂದ `ಲೇಕ್ 2016′ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ವಿದ್ಯಾಗಿರಿಯ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಡಿಸೆಂಬರ್ 28ರಿಂದ 31ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ತಿಳಿಸಿದ್ದಾರೆ.
ಪರಿಸರದ ವಿವಿಧ ಕ್ಷೇತ್ರಗಳ ವಿಭಿನ್ನ ವಿಷಯಗಳ ಕುರಿತು ಸಂಶೋಧನಾ ಪ್ರಬಂಧಗಳನ್ನು ವಿದ್ಯಾರ್ಥಿಗಳಿಂದ, ಶಿಕ್ಷಕರಿಂದ, ಸಂಶೋಧಕರಿಂದ, ಆರ್ಥಿಕ ತಜ್ಞರಿಂದ ಆಹ್ವಾನಿಸಲಾಗಿದೆ. ಪ್ರೌಢವಿಭಾಗ(8,9,10), ಕಾಲೇಜು ವಿಭಾಗ (11,12 & ಡಿಗ್ರಿ) ಹಾಗೂ ಶಿಕ್ಷಕರು, ಹೀಗೆ ಮೂರು ವಿಭಾಗದಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು.
ಐಐಟಿ ಮುಂಬಯಿಯ ಡಾ.ಎ.ಬಿ. ಇನಾಂದಾರ್, ಕೇರಳದ ಸಿಡಬ್ಲ್ಯೂಡಿಆರ್‍ಎಮ್‍ನ ಡಾ.ಪಿ.ಎಸ್. ಹರಿಕುಮಾರ್, ಉತ್ತರಪ್ರದೇಶದ ಡಾ.ನಿವಾಸ್ ಸಿಂಗ್, ಐಐಟಿ ಖರಗ್‍ಪುರದ ಡಾ. ಭರತ್ ಐತಾಳ್, ಐಐಟಿ ಹೈದರಾಬಾದ್‍ನ ಡಾ. ಪ್ರಸಾದ್, ಆಸ್ಸಾಂ ವಿವಿಯ ಡಾ.ದೇವಶಿಶ್ಕರ್, ಜೆಎನ್‍ಯು ದೆಹಲಿಯ ಡಾ. ಇ.ವಿ. ರಾಮಸ್ವಾಮಿ, ಮಂಗಳೂರು ವಿವಿಯ ಡಾ. ಕೆ.ಆರ್.ಚಂದ್ರಶೇಖರ್, ಪರಿಸರ ಆಸಕ್ತ ಸಿನಿಮಾ ನಿರ್ದೇಶಕ ಸುರೇಶ್ ಹೆಬ್ಳೀಕರ್ ಬೆಂಗಳೂರು, ಉಡುಪಿಯ ಡಾ. ಕೆ,ಜಿ.ಭಟ್ ಸೇರಿದಂತೆ ಹೆಚ್ಚಿನ ವಿಜ್ಞಾನಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಇಂಧನ ಮತ್ತು ತೇವಾಂಶ ಸಂಶೋಧನಾ ಕೇಂದ್ರ,(ಎನರ್ಜಿ & ವೆಟ್‍ಲ್ಯಾಂಡ್ ರಿಸರ್ಚ ಗ್ರೂಪ್) ಪರಿಸರ ವಿಜ್ಞಾನಗಳ ಕೇಂದ್ರ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದಿರೆ, ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ಮಿಜಾರು, ಆಳ್ವಾಸ್ ಕಾಲೇಜು, ವಿದ್ಯಾಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
