ಬಂಟ್ವಾಳ: ಎಂಟು ವರ್ಷಗಳ ಬಳಿಕ ತಾಲೂಕು ಮಟ್ಟದ ಕರಾವಳಿ ಉತ್ಸವ ಆಚರಿಸಲು ತಾಲೂಕು ಆಡಳಿತ ಸಜ್ಜಾಗಿದ್ದರೂ ಮೊದಲ ಪೂರ್ವ ಭಾವಿ ಸಭೆಗೆ ಜನಪ್ರತಿನಿಧಿಗಳ ಗೈರು ಹಾಜರಾಗಿದ್ದು ಕಂಡುಬಂತು.
ಶುಕ್ರವಾರ ಬಿ.ಸಿ.ರೋಡಿನ ಎಸ್ಜಿಆರ್ಎಸ್ವೈ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಉತ್ಸವ ಆಚರಣೆ ಡಿಸೆಂಬರ್ 19ರಂದು ನಡೆಸಲು ತೀರ್ಮಾನಿಸಲಾಗಿದ್ದು ಸ್ಥಳ ನಿಗದಿಪಡಿಸುವಲ್ಲಿ ಅಧಿಕಾರಿಗಳು ವಿಫಲವಾದರು.
ಮಂಗಳೂರು ಸಹಾಯಕ ಕಮಿಷನರ್ ರೇಣುಕಾ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯ ಆರಂಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಹೊರೆತು ಜನಪ್ರತಿನಿಧಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಕೂಡಾ ಗೈರು ಹಾಜರಾಗಿದ್ದರು. ಸಭೆಯ ಕೊನೆ ಹಂತದಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಹಾಗೂ ಉಪಾಧ್ಯಕ್ಷ ಅಬ್ಬಾಸ್ ಅಲಿ ಆಗಮಿಸಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ಯಾವುದೇ ಜನ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸದಿದ್ದರಿಂದ ಸಭೆಯಲ್ಲಿದ್ದ ಅಧಿಕಾರಿಗಳು ಕರಾವಳಿ ಉತ್ಸವ ಆಚರಣೆಗೆ ದಿನ ಹಾಗೂ ಸ್ಥಳ ನಿರ್ಧರಿಸಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಡಿಸೆಂಬರ್ 12ರಂದು ತಾಲೂಕಿನ ಎಲ್ಲಾ ಜನಪ್ರತಿನಿಧಿಗಳನ್ನು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಸೇರಿಸಿ ಮತ್ತೊಂದು ಪೂರ್ವಭಾವಿ ಸಭೆ ನಡೆಸಲು ಸಭೆ ತೀರ್ಮಾನಿಸಿತು.
ಸಭೆಯ ಕೊನೆ ಹಂತದಲ್ಲಿ ಆಗಮಿಸಿದ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಮಾತನಾಡಿ, ತಾಲೂಕಿನ ಎಲ್ಲ ಜನಪ್ರತಿನಿಧಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಕರೆದು ಮುಂದಿನ ಸಭೆಯಲ್ಲಿ ಉತ್ಸವ ಆಚರಣೆಗೆ ಸಂಬಂಧಿಸಿ ಎಲ್ಲ ಸಿದ್ದತೆಗಳನ್ನು ಅಂತಿಮಗೊಳಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಮಂಗಳೂರಿನಲ್ಲಿ ಡಿ. 21ರಂದು ಕರಾವಳಿ ಉತ್ಸವ ಆರಂಭಗೊಳ್ಳಲಿದ್ದು ಇದಕ್ಕೆ ಮುನ್ನ ತಾಲೂಕು ಮಟ್ಟದ ಕರಾವಳಿ ಆಚರಿಸಬೇಕೆಂದು ಮಂಗಳೂರು ಸಹಾಯಕ ಕಮಿಷನರ್ ರೇಣುಕಾ ಪ್ರಸಾದ್ ಮಾಹಿತಿ ನೀಡಿದರು. ಹಾಗೆಯೇ ಈ ಸಂದರ್ಭದಲ್ಲಿ ಮೆರವಣಿಗೆ, ಸಭಾ ಕಾರ್ಯಕ್ರಮ, ರಾಷ್ಟ್ರ ಮಟ್ಟದ ಸಾಧಕರಿಗೆ ಸನ್ಮಾನ, ವಸ್ತು ಪ್ರದರ್ಶನ ಏರ್ಪಡಿಸುವುದು. ಈ ಎಲ್ಲ ಕಾರ್ಯಕ್ರಮವನ್ನು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆಯೊಳಗೆ ಪೂರ್ಣಗೊಳಿಸಬೇಕೆಂದು ಅಭಿಪ್ರಾಯಪಟ್ಟರು. ಉತ್ಸವ ಆಚರಣೆಯ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸುವುದು ಮತ್ತು ಇದಕ್ಕೆ ಬೇಕಾದಷ್ಟು ಆಯವ್ಯಯವನ್ನು ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಶಿಕ್ಷಣಾಧಿಕಾರಿ ಲೊಕೇಶ್ ಅವರು ಮಾತನಾಡಿ ಜಿಲ್ಲೆಯು ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿರುವುದರಿಂದ ಇದನ್ನು ಉಳಿಸುವ ನಿಟ್ಟಿನಲ್ಲಿ ಕರಾವಳಿ ಉತ್ಸವದಂತಹ ಕಾರ್ಯಕ್ರಮ ಇಲ್ಲಿ ಅವಶ್ಯವಿದೆ ಎಂದು ತಿಳಿಸಿದರು.
ಉತ್ಸವದ ಅಂದಾಜು ಬಜೆಟನ್ನು ತಯಾರಿಸಿ ಮತ್ತು ಸಂಪನ್ಮೂಲ ಕ್ರೋಡೀಕರಣಗೊಳಿಸುವ ರೀತಿಯನ್ನು ತಿಳಿಸಿದರೆ ಅದಕ್ಕೆ ಸರಿಯಾಗಿ ಕಾರ್ಯಕ್ರಮದ ರೂಪಿಸಬಹುವುದು ಎಂದು ಬಂಟ್ವಾಳ ಲೋಕೊಪಯೋಗಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಉಮೇಶ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ತಹಶಿಲ್ದಾರ್ ಪುರಂದರ ಹೆಗ್ಡೆ, ತಾಪಂ ಕಾರ್ಯನಿರ್ವಣಾಧಿಕಾರಿ ಸಿಪ್ರಿಯನ್ ಮಿರಾಂದ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆ ಮುಗಿದ ಬಳಿಕ ತಾಲೂಕು ಕಚೇರಿಯಿಂದ ಪತ್ರಿಕಾ ಪ್ರಕಟಣೆಯೊಂದನ್ನು ತಹಸೀಲ್ದಾರ್ ಹೊರಡಿಸಿದ್ದು, ಇದರಲ್ಲಿ ಡಿಸೆಂಬರ್ 19ರಂದು ಕರಾವಳಿ ಉತ್ಸವ ತಾಲೂಕು ಮಟ್ಟದಲ್ಲಿ ನಡೆಯಲಿದ್ದು, ಪೂರ್ವಸಿದ್ಧತಾ ಸಭೆ ಸಹಾಯಕ ಕಮೀಷನರ್ ನೇತೃತ್ವದಲ್ಲಿ 12ರಂದು ಬೆಳಗ್ಗೆ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಭವನದಲ್ಲಿ ನಡೆಯಲಿದೆ ಎಂದು ತಿಳಿಸಿದೆ.

