ಡಿಸೆಂಬರ್ 9ರಂದು ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮದುವೆ ನಡೆದರೆ, 10 ಮತ್ತು 11ರಂದು ರಿಸೆಪ್ಶನ್ ನಡೆಯಲಿದೆ. ಈ ಪೈಕಿ ಡಿಸೆಂಬರ್ 9ರಂದು ಎರಡೂ ಕುಟುಂಬದವರು ಮತ್ತು ಆಪ್ತರಿಗೆ ಆಹ್ವಾನ ನೀಡಲಾಗಿದೆ. 10ಕ್ಕೆ ಚಿತ್ರರಂಗದ ಗಣ್ಯರಿಗೆ, ಆಪ್ತರಿಗೆ ರಿಸೆಪ್ಶನ್ ಆಯೋಜಿಸಲಾಗಿದೆ. ಇನ್ನು 11ರಂದು ಚಿತ್ರರಂಗದ ಕಾರ್ಮಿಕರಿಗೆ ಮತ್ತು ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಅಭಿಮಾನಿಗಳಿಗೆ ಔತಣಕೂಟ ಆಯೋಜಿಸಲಾಗಿದೆ. ಈ ಮೂರು ದಿನಗಳ ಕಾಲ ಸಾವಿರಾರು ಸಂಖ್ಯೆಯಲ್ಲಿ ಜನ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮದುವೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ನಗರದ ರೆಸಾರ್ಟ್‍ವೊಂದರಲ್ಲಿ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದು, ಈಗಾಗಲೇ ಅರುಣ್ ಸಾಗರ್, ತ್ರಿಪುರ ವಾಸಿನಿಯಲ್ಲಿ ವಿಶೇಷವಾದ ಸೆಟ್ ಹಾಕಿಸುತ್ತಿದ್ದಾರೆ. ಬೇಲೂರು ಹಳೇಬೀಡು ದೇವಸ್ಥಾನವನ್ನು ಹೋಲುವ ಸೆಟ್‍ನಲ್ಲಿ ಮದುವೆ ನಡೆಯಲಿದೆ. ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರಿಗೂ ವಿಶೇಷವಾಗಿ ಉಡುಗೆಗಳನ್ನು ಡಿಸೈನ್ ಮಾಡಲಾಗುತ್ತಿದೆ. ಯಶ್ ಅವರ ಉಡುಗೆಯನ್ನು ಬಾಲಿವುಡ್‍ನ ಜನಪ್ರಿಯ ಫ್ಯಾಷನ್ ಡಿಸೈನರ್ ಎನಿಸಿಕೊಂಡಿರುವ ಮನಿಷ್ ಮಲ್ಹೋತ್ರಾ ಡಿಸೈನ್ ಮಾಡಿದರೆ, ರಾಧಿಕಾ ಅವರ ಡ್ರೆಸ್‍ಗಳನ್ನು ಮುಂಬೈನ ಖ್ಯಾತ ಡಿಸೈನರ್ ಸಭ್ಯಸಾಚಿ ಮುಖರ್ಜಿ ಮಾಡುತ್ತಿದ್ದಾರೆ.
