ಬಂಟ್ವಾಳ: ಪ್ರಸಕ್ತ ಸಮಾಜದಲ್ಲಿ ದೂರದೃಷ್ಟಿಯ ಚಿಂತನೆ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆ ಜೀವನ ಇಂದಿನ ತುರ್ತು ಅಗತ್ಯವಾಗಿದೆ. ಇದರಿಂದಾಗಿ ಸಮಾಜದಲ್ಲಿ ಒಟ್ಟು ಅಭಿವೃದ್ಧಿಯ ಜೊತೆಗೆ ನಿರ್ಭೀತಿಯಿಂದ ಎಲ್ಲರೂ ನೆಮ್ಮದಿ ಮತ್ತು ಅನ್ಯೋನ್ಯತೆಯಲ್ಲಿ ಜೀವನ ಮುನ್ನಡೆಸಲು ಸಾಧ್ಯವಾಗುತ್ತದೆ ಎಂದು ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಹೇಳಿದ್ದಾರೆ.
ತಾಲ್ಲೂಕಿನ ಅಗ್ರಾರ್ ಚರ್ಚಿನ ವಠಾರದಲ್ಲಿ ಭಾನುವಾರ ಏರ್ಪಡಿಸಿದ್ದ ಗುರುದೀಕ್ಷೆ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ಈ ಸಮಾರಂಭ ಕೇವಲ ಸನ್ಮಾನಕ್ಕೆ ಸೀಮಿತವಾಗದೆ, ಅಪಾರ ಸಂಖ್ಯೆಯಲ್ಲಿ ಒಟ್ಟು ಸೇರಿದ ಎಲ್ಲಾ ಜಾತಿ ಧರ್ಮಿಯರ ಸೌಹಾರ್ದತೆ ಸಂದೇಶ ಎಲ್ಲೆಡೆಗೆ ರವಾನೆ ಆಗಬೇಕು. ಹುಟ್ಟೂರಿನಲ್ಲಿ ಯಾರಿಗೂ ಗೌರವ ಸಿಗುವುದಿಲ್ಲ ಎಂಬ ಮಾತಿಗೆ ಅಪವಾದ ಎಂಬಂತೆ ಇಲ್ಲಿ ಒಟ್ಟಾಗಿ ಸೇರಿದ ಶಿಸ್ತುಬದ್ಧ ಜನಸ್ತೋಮ ಮತ್ತು ಅಚ್ಚುಕಟ್ಟಿನ ವ್ಯವಸ್ಥೆ ಇತರರಿಗೆ ಮಾದರಿಯಾಗಿದೆ. ಕಳೆದ 300 ವರ್ಷಗಳಿಗೂ ಮಿಕ್ಕಿ ಅವಧಿಯಲ್ಲಿ ಭಕ್ತರಿಗೆ ಆಧ್ಯಾತ್ಮದ ಕರ್ತವ್ಯ ಪೂರೈಸುತ್ತಿರುವ ಅಗ್ರಾರ್ ಚರ್ಚ್ ವ್ಯಾಪ್ತಿ ಈ ಹಿಂದೆ ಬೆಳ್ತಂಗಡಿವರೆಗೂ ವಿಸ್ತರಿಸಿದ್ದು, ಪ್ರಸಕ್ತ ಎಲ್ಲೆಡೆ ಹೊಸ ಚರ್ಚು ಸ್ಥಾಪನೆಯಾಗಿದೆ ಎಂದರು.
ಭಾರೀ ಪ್ರಾಚೀನತೆ ಹೊಂದಿರುವ ಅಗ್ರಾರ್ ಚರ್ಚ್ ಪ್ರದೇಶ ನನ್ನ ಹುಟ್ಟೂರು ಎಂಬುದು ನನಗೂ ಹೆಮ್ಮೆಯ ವಿಚಾರವಾಗಿದ್ದು, ಈ ವ್ಯಾಪ್ತಿಯಲ್ಲಿ ಈಗಾಗಲೇ ನಾಲ್ವರು ಬಿಷಪರು, 150ಕ್ಕೂ ಮಿಕ್ಕಿ ಧರ್ಮಗುರು, 350ಕ್ಕೂ ಮಿಕ್ಕಿ ಧರ್ಮಭಗಿನಿಯರನ್ನು ಸಮಾಜಕ್ಕೆ ನೀಡಿದ ಕೀರ್ತಿ ಹೊಂದಿದೆ. ಇಲ್ಲಿನ ಭಕ್ತರ ಅನುಕೂಲಕ್ಕಾಗಿ ಜಕ್ರಿಬೆಟ್ಟು-ಅಗ್ರಾರ್-ಲೊರೆಟ್ಟೊ ರಸ್ತೆಯನ್ನು ತ್ವರಿತಗತಿಯಲ್ಲಿ ಡಾಂಬರೀಕರಣಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನಮಗೆ ಮತ್ತಷ್ಟು ಹತ್ತಿರವಾಗಿದ್ದಾರೆ ಎಂದು ಅವರನ್ನು ಅಭಿನಂದಿಸಿದರು.
ಉಡುಪಿ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಅಭಿನಂದನಾ ಭಾಷಣ ಮಾಡಿದರು. ದೇಶದ 167 ಕಥೋಲಿಕ್ ಧರ್ಮಪ್ರಾಂತ್ಯಗಳಲ್ಲಿ ಮಂಗಳೂರು ಧರ್ಮಪ್ರಾಂತ್ಯ ಇಲ್ಲಿನ ಬಿಷಪರ ಕ್ರಿಯಾಶೀಲ ಸೇವೆ ಮೂಲಕ ಆದರ್ಶಪ್ರಾಯವಾಗಿದೆ ಎಂದರು. ಬಿಷಪರು ಧರ್ಮಾಧ್ಯಕ್ಷರಾಗಿ 20ನೇ ವರ್ಷ, ಗುರುದೀಕ್ಷೆ ಪಡೆದು 50ನೇ ವರ್ಷ, ಜೀವನದ 75 ಸಂವತ್ಸರ ಪೂರೈಸುತ್ತಿರುವುದು ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ ಎಂದರು.
ದೇವರು ಮತ್ತು ಭಕ್ತರ ನಡುವಿನ ಕೊಂಡಿಯಂತಿರುವ ಗುರುವರ್ಯರು ಏಸು ಸ್ವಾಮಿ ಧ್ಯೇಯದಂತೆ ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಸೇವೆ ಜೊತೆಗೆ ವಸತಿ, ನಿವೇಶನ ಸಹಿತ ಸರ್ಕಾರಿ ಸೌಲಭ್ಯ ದೊರಕಿಸಿ ಕೊಡುವಲ್ಲಿಯೂ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ಕ್ರೈಸ್ತ ಧರ್ಮದ ಕಾನೂನು, ವೈವಾಹಿಕ ವಿಷಯಗಳ ನ್ಯಾಯಾಧೀಶರಾಗುವ ಅತ್ಯುನ್ನತ ಪದವಿ ಸನದು ಪಡೆದವರಲ್ಲಿ ಇವರು ದೇಶದಲ್ಲೇ ಪ್ರಥಮರು ಎಂದು ವಿವರಿಸಿದರು.
ಬಳ್ಳಾರಿ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಡಾ.ಹೆನ್ರಿ ಡಿ’ಸೋಜ ಮಾತನಾಡಿ, ಇಲ್ಲಿನ ಧರ್ಮಪ್ರಾಂತ್ಯ ಮತ್ತು ಧರ್ಮಗುರು ಸಮಾಜ ಮತ್ತು ಇತರರಿಗೂ ಮಾದರಿಯಾಗಿದ್ದಾರೆ ಎಂದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ, ಅಗ್ರಾರ್ ಚರ್ಚ್ ಮಂಗಳೂರು ಧರ್ಮ ಪ್ರಾಂತ್ಯದ ಉಗಮ ಕ್ಷೇತ್ರವಾಗಿದ್ದು, ಭಾರತದ ಧರ್ಮ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಆಧ್ಯಾತ್ಮಿಕ ಸಾಧಕರನ್ನು ನೀಡಿದ ಹಿರಿಮೆಗೆ ಪಾತ್ರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು ಎಂಬುದಕ್ಕೆ ಏಸುಸ್ವಾಮಿ ನೈಜ ನಿದರ್ಶನವಾಗಿದ್ದಾರೆ. ಇದೇ ಹಾದಿಯಲ್ಲಿ ಬಿಷಪರು ಮುನ್ನಡೆದು ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಅಗ್ರಾರ್ ಚರ್ಚ್‍ಗೆ ಕೀರ್ತಿ ತಂದಿದ್ದಾರೆ ಎಂದು ಶ್ಲಾಘಿಸಿದರು.
ಆಹಾರ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜ, ಮಂಗಳೂರು ಶಾಸಕ ಜೆ. ಆರ್.ಲೋಬೊ ಶುಭ ಹಾರೈಸಿದರು. ಬಂಟ್ವಾಳ ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ಮಂಗಳೂರು ಧರ್ಮಭಗಿನಿ ಝಿನಾ, ಗೇರು ಅಭಿವೃದ್ದಿ ನಿಗಮ ಅಧ್ಯಕ್ಷ ಬಿ. ಎಚ್.ಖಾದರ್, ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮ ಅಧ್ಯಕ್ಷ ಅಧ್ಯಕ್ಷ ಎಂ.ಎ. ಗಫೂರ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಬ್ಲೊಸಂ ಆಸ್ಕರ್ ಫೆರ್ನಾಂಡಿಸ್ ಮತ್ತಿತರರು ಇದ್ದರು.
ಬಂಟ್ವಾಳ ವಲಯ ಪ್ರಧಾನ ಧರ್ಮಗುರು ಮ್ಯಾಕ್ಸಿಂ ಎಲ್. ನೊರೊನ್ಹಾ ಪ್ರಾಸ್ತಾವಿಕ ಮಾತನಾಡಿದರು. ಅಗ್ರಾರ್ ಚರ್ಚ್‍ನ ಧರ್ಮಗುರು ಗ್ರೆಗರಿ ಡಿ’ಸೋಜ ಅಭಿನಂದನಾ ಪತ್ರ ವಾಚಿಸಿದರು. ಸುವರ್ಣ ಮಹೋತ್ಸವ ಸಂಭ್ರಮ ಸಮಿತಿ ಮುಖ್ಯ ಸಂಚಾಲಕ ಪಿಯೂಸ್ ಎಲ್.ರೊಡ್ರಿಗಸ್ ಸ್ವಾಗತಿಸಿದರು. ವಲಯ ಕಾರ್ಯದರ್ಶಿ ವಿಕ್ಟರ್ ದಿಲ್‍ರಾಜ್ ಮಿನೇಜಸ್ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಮತ್ತು ಝೀಟಾ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.
ಆರಂಭದಲ್ಲಿ ಅತಿಥಿ ಗಣ್ಯರನ್ನು ಆಕರ್ಷಕ ಬ್ಯಾಂಡು ವಾದ್ಯ ಸಹಿತ ಕೊಂಬು, ಚೆಂಡೆ ವಾದನ ಮೂಲಕ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಯಿತು. ದಾನಿಗಳು ವiತ್ತು ಸೇವಾಕರ್ತರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ನಡೆದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಮಂದಿ ಸರತಿ ಸಾಲಿನಲ್ಲಿ ಪಾಲ್ಗೊಂಡಿದ್ದರು.
—

