ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ಅಕ್ರಮ ನಲ್ಲಿ ಸಂಪರ್ಕವನ್ನು ಹೊಂದಿರುವ ಪುರವಾಸಿಗಳಿಗೆ ಸಕ್ರಮಗೊಳಿಸಲು ಡಿಸೆಂಬರ್ ಅಂತ್ಯದವರೆಗೆ ಗಡುವು ವಿಧಿಸಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಹತ್ವದ ನಿರ್ಣಯ ಅಂಗೀಕರಿಸಲಾಯಿತು. ಅಕ್ರಮ ನಲ್ಲಿ ಸಕ್ರಮಗೊಳಿಸುವ ಸಂದರ್ಭದಲ್ಲಿ 1 ಸಾವಿರ ರೂ. ದಂಡ ಹಾಗೂ 1 ಸಾವಿರ ರೂ. ಸಂಪರ್ಕ ಶುಲ್ಕ ಪಾವತಿಸತಕ್ಕದ್ದು. ಈ ಪ್ರಕ್ರಿಯೆಯನ್ನು ಪುರಸಭೆಯ ಅಧಿಕೃತ ಪ್ಲಂಬರ್‍ಗಳ ಮೂಲಕವೇ ನೀರಿನ ಸಂಪರ್ಕ ಅಧಿಕೃತಗೊಳಿಸಬೇಕೆಂದು ನಿರ್ಣಯಿಸಲಾಯಿತು.

pura-3

ಜನವರಿ 1ರಿಂದ ಯಾವುದೇ ಅನಧಿಕೃತ ನೀರಿನ ಸಂಪರ್ಕಕ್ಕೆ ಅವಕಾಶವಿಲ್ಲ. ಇಂತಹ ಪ್ರಕರಣಗಳು ಕಂಡು ಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿಸಲಾಯಿತಲ್ಲದೆ ವಸತಿ ಸಮುಚ್ಚಯಕ್ಕೆ ಅಧಿಕೃತವಾಗಿ ಒಂದೇ ಸಂಪರ್ಕವನ್ನು ನೀಡಲು ನಿರ್ಧರಿಸಲಾಯಿತು.

ಈ ವಿಚಾರಕ್ಕೆ ಸುದೀರ್ಘ ಚರ್ಚೆ ನಡೆಯಿತು. ಮೂರು ವರ್ಷದ ಹಿಂದೆ ಪುರಸಭೆ ವ್ಯಾಪ್ತಿಯಲ್ಲಿ ನಡೆಸಲಾದ ಸರ್ವೇಯಂತೆ ಸುಮಾರು 250 ಅನಧಿಕೃತ ನಲ್ಲಿ ನೀರಿನ ಸಂಪರ್ಕವಿತ್ತೆಂದು ಸದಸ್ಯ ಪ್ರವೀಣ್ ಬಿ. ಅವರ ಪ್ರಶ್ನೆಗೆ ಮುಖ್ಯಾಧಿಕಾರಿ ಸುಧಾಕರ್ ಉತ್ತರಿಸಿದರು. ಪ್ರಸ್ತುತ 3000 ದಷ್ಟು ಅಕ್ರಮ ನಲ್ಲಿ ನೀರಿನ ಸಂಪರ್ಕವಿದೆ ಎಂದು ಸದಸ್ಯ ಗೋವಿಂದ ಪ್ರಭು ಸಭೆಯ ಗಮನ ಸೆಳೆದರು. ಈ ವಿಚಾರದಲ್ಲಿ ಪುರಸಭೆ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೂ ತಮ್ಮ ಪೂರ್ತಿ ಸಹಮತ ಇದೆ ಎಂದು ಸದಸ್ಯ ದೇವದಾಸ ಶೆಟ್ಟಿ ತಿಳಿಸಿದರು.

pura-4

ಅಕ್ರಮ ಕಾಮಗಾರಿ: ಪುರಸಭೆ ವ್ಯಾಪ್ತಿಯ ಜಕ್ರಿಬೆಟ್ಟುವಿನ ಅಗ್ರಾರ್‍ವರೆಗೆ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ ರಸ್ತೆ ಕಾಮಗಾರಿಯನ್ನು ಅಕ್ರಮವಾಗಿ ನಡೆಸಲಾಗುತ್ತಿದೆ ಎಂದು ಸದಸ್ಯ ಗೋವಿಂದ ಪ್ರಭು ಸಭೆಯ ಗಮನ ಸೆಳೆದು ಈ ಬಗ್ಗೆ ವಿವರಣೆ ಬಯಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಅವರು ಆಂಗ್ಲ ಪತ್ರಿಕೆಯೊಂದರಲ್ಲಿ ಟೆಂಡರ್ ಪ್ರಕಟನೆ ನೀಡಲಾಗಿದೆ ಎಂದು ಸಮಾಜಾಯಿಸಿಕೆ ನೀಡಲು ಯತ್ನಿಸಿದಾಗ ಇದಕ್ಕೆ ಒಪ್ಪದ ಪ್ರಭು ಅವರು ಈ ಸಂಬಂಧ ಎಲ್ಲ ದಾಖಲಾತಿಯನ್ನು ಸಭೆಯ ಮುಂದಿಡುವಂತೆ ಪಟ್ಟು ಹಿಡಿದರು. ಆದರೆ ಮುಖ್ಯಾಧಿಕಾರಿ ಸೇರಿದಂತೆ ಯಾರೊಬ್ಬರು ಈ ವಿಚಾರದಲ್ಲಿ ತುಟಿ ಬಿಚ್ಚಲಿಲ್ಲ. ಅಧ್ಯಕ್ಷ ರಾಮಕೃಷ್ಣ ಆಳ್ವ ಅವರು ಈ ಕಾಮಗಾರಿ ಕೊನೆ ಹಂತ ತಲುಪಿದೆ ಎಂದು ಅವರಷ್ಟಕ್ಕೆ ಗೊಣಗದಾಗ ಆಕ್ರೋಶಿತರಾದ ಪ್ರಭು ಅವರು ಈ ವಿಚಾರದಲ್ಲಿ ಅಧಿಕಾರಿಗಳ ಮೌನ ಸಮ್ಮತಿ ಲಕ್ಷಣವೇ ಎಂದು ಕಿಚಾಯಿಸಿದರು. ಬಳಿಕ ಈ ಬಗ್ಗೆ ಲಿಖಿತ ದೂರು ನೀಡುವುದಾಗಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಗಾರ್ಗಿ ಜೈನ್ ಅವರಲ್ಲಿ ತಿಳಿಸಿದರು.

ತಹಶೀಲ್ದಾರರ ನಿರ್ಧಾರಕ್ಕೆ ಖಂಡನೆ: ಬಿ.ಸಿ.ರೋಡಿನ ಕೈಕುಂಜೆ ರಸ್ತೆಯಲ್ಲಿ ಬಂಟ್ವಾಳ ತಹಶೀಲ್ದಾರರು ಏಕಪಕ್ಷೀಯವಾಗಿ ಮನಬಂದಂತೆ ಸರ್ವೇ ಕಾರ್ಯ ನಡೆಸಿರುವುದನ್ನು ಬಿಜೆಪಿ ಸದಸ್ಯರು ಖಂಡಿಸಿದರು. ಬಂಟ್ವಾಳ ಪೇಟೆ ಅಗಲೀಕರಣಗೊಳಿಸುವ ನಿಟ್ಟಿನಲ್ಲಿ ಸರ್ವೇ ಇಲಾಖೆ ಮನಬಂದಂತೆ ಗುರುತು ಹಾಕಿದೆ ಎಂದು ಸದಸ್ಯ ಗೋವಿಂದ ಪ್ರಭು ಆರೋಪಿಸಿದರು. ಇದಕ್ಕೆ ದೇವದಾಸ ಶೆಟ್ಟಿ ದ್ವನಿಗೂಡಿಸಿದರು.

purasabe

ತೆರಿಗೆ ಪರಿಸ್ಕರಣೆ: ಪುರಸಭೆ ವ್ಯಾಪ್ತಿಯಲ್ಲಿ 2017-18ನೆ ಸಾಲಿಗೆ ತೆರಿಗೆ ಪರಿಸ್ಕರಿಸಿ ಸಭೆ ನಿರ್ಣಯ ಕೈಗೊಂಡಿದ್ದು ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆಯಂತೆ ಶೇಕಡಾ 16ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚಿಸಲು ಸಭೆ ನಿರ್ಧರಿಸಿತು. ಇದಕ್ಕೆ ಇಕ್ಬಾಲ್ ಗೂಡಿನಬಳಿ ಆಕ್ಷೇಪಿಸಿ ಇಲ್ಲಿ ಕೂಲಿ ಕಾರ್ಮಿಕರು ಮತ್ತು ಬೀಡಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಶೇಕಡಾ 5ರಷ್ಟು ಮಾತ್ರ ತೆರಿಗೆಯನ್ನು ಪರಿಷ್ಕರಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸುಧಾಕರ್ ಪುರಸಭೆಯ ಅಭಿವೃದ್ಧಿಯ ದೃಷ್ಟಿಯಿಂದ ಇದು ಅನಿವಾರ್ಯ ಎಂದು ಸಮಜಾಯಿಸಿ ನೀಡಿದರು.

ಬಿಲ್ಲು ಪಾವತಿಗೆ ಆಕ್ಷೇಪ: ವಾರ್ಡ್ ಸದಸ್ಯರ ಸಹಿ ಇಲ್ಲದೆ ಯಾರ್ಯಾದೋ ಹೆಸರಿನಲ್ಲಿ ಪೈಪ್ ದುರಸ್ಥಿಗೆ 3 ಸಾವಿರ ಬಿಲ್ಲನ್ನು ಪಡೆಯಲು ಮುಂದಾಗಿರುವುದನ್ನು ಆಕ್ಷೇಪಿಸಿದ ಸದಸ್ಯ ವಾಸು ಪೂಜಾರಿ ಈ ವ್ಯಕ್ತಿ ತನ್ನ ಸ್ವಾರ್ಥಕ್ಕಾಗಿ ಬಜೆಟ್ ಪೂರ್ವ ಸಭೆಯಲ್ಲೂ ವಾರ್ಡ್ 1ರಲ್ಲಿ 35 ವರ್ಷಗಳಿಂದ ಕಸದ ವಿಲೇವಾರಿ ಮಾಡದೆ ರಾಶಿ ಬಿದ್ದಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಆದರೆ ತನ್ನ ವಾರ್ಡ್‍ನಲ್ಲಿ ಕಸದ ಸಮಸ್ಯೆ ಇಲ್ಲ. ಅದು ಅಧಿಕಾರಿಗಳಿಗೂ ಗೊತ್ತಿದೆ. ಅವರ ಬಿಲ್ಲು ಪಡೆಯುವುದಕ್ಕಾಗಿ ಈ ರೀತಿ ತಪ್ಪು ಮಾಹಿತಿ ನೀಡುವುದು ಸರಿಯಲ್ಲ. ಅವರ ಬಿಲ್ಲನ್ನು ತಡೆಯಿಡಿಯಬೇಕೆಂದು ಒತ್ತಾಯಿಸಿದರು. ಅವರಿಗೆ ಈವರೆಗೆ ಯಾವುದೇ ಬಿಲ್ಲು ಪಾವತಿಸಿಲ್ಲ ಎಂದು ಮುಖ್ಯಾಧಿಕಾರಿ ಸುಧಾಕರ್ ಹೇಳಿದರು.

ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಪ್ರೊಬೆಷನರಿ ಐಎಎಸ್ ಅಧಿಕಾರಿ ಗಾರ್ಗಿ ಜೈನ್ ವೇದಿಕೆಯಲ್ಲಿದ್ದರು. ಸದಸ್ಯರಾದ ಬಿ.ಮೋಹನ್, ಗಂಗಾದರ್, ವಸಂತಿ ಚಂದಪ್ಪ, ಜಗದೀಶ್ ಕುಂದರ್, ಶರೀಫ್, ಬಾಸ್ಕರ್ ಟೈಲರ್, ಮುನೀಶ್ ಅಲಿ, ಸುಗುಣಾ ಕಿಣಿ, ಸಂಚಲಾಕ್ಷಿ ಚರ್ಚೆಯಲ್ಲಿ ಪಾಲ್ಗೊಂಡರು.

purasabe-2

ಬಿಳಿಯಾನೆಯಾದ ಪಾರ್ಕ್
ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಜೋಡುಮಾರ್ಗ ಉದ್ಯಾನವನದ ನಿರ್ವಾಹಣೆಯನ್ನು ಯಾರು ಮಾಡಬೇಕೆಂಬ ವಿಚಾರ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು. ಸದಸ್ಯ ಪ್ರಸ್ತಾವಿಸಿ ದುರಸ್ತಿಯ ನೆಪದಲ್ಲಿ ಮುಚ್ಚಿರುವ ಉದ್ಯಾನವನದ ಬಾಗಿಲು ತಿಂಗಳಾದರೂ ತೆರೆಯಲಿಲ್ಲ. ಹೆದ್ದಾರಿ ಅಗಲಗೊಳ್ಳುವ ಸಂದರ್ಭದಲ್ಲಿ ಈ ಉದ್ಯಾನವನದ ಸ್ವರೂಪವೇ ಬದಲಾಗಲೂ ಬಹುದು. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಇದೇ ವೇಳೆ ಉದ್ಯಾನವನದ ನಿರ್ವಾಹಣ ವೆಚ್ಚಕ್ಕೆ ಪುರಸಭೆ ತಿಂಗಳಿಗೆ 65,000 ಭರಿಸುವ ವಿಷಯವನ್ನು ಮುಖ್ಯಾಧಿಕಾರಿ ಸಭೆಯ ಮುಂದಿಟ್ಟಾಗ ಸದಸ್ಯರೆಲ್ಲರೂ ಆಕ್ಷೇಪಿಸಿದರು. ಈ ಪಾರ್ಕ್ ಒಂದು ಬಿಳಿಯಾನೆಯಂತಿದೆ. 1.40 ಕೋಟಿ ರೂ. ವೆಚ್ಚದ ಈ ಪಾರ್ಕ್ ಅನಾಥ ಶಿಶು. ಇದರ ನಿರ್ವಹಣೆಯನ್ನು ಪುರಸಭೆಯ ತಲೆಗೆ ಕಟ್ಟುವುದು ಯಾಕೆ ಎಂದು ಪ್ರಶ್ನಿಸಿದರು.

ಒತ್ತುವರಿ ವಿಚಾರಕ್ಕೆ ಸಂಬಂಧಿಸಿ ದೇವದಾಸ ಶೆಟ್ಟಿ ಹಾಗೂ ಶರೀಫ್ ಅವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ರಾಮಕೃಷ್ಣ ಆಳ್ವ ಅವರು ಮಧ್ಯೆ ಪ್ರವೇಶಿಸಿ ಇದರ ನಿರ್ವಹಣೆಗೆ ಟೆಂಡರ್ ಕರೆಯಲಾಗುವುದು ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.

By suddi9

Leave a Reply

Your email address will not be published. Required fields are marked *