ಬಂಟ್ವಾಳ: ತಾಲ್ಲೂಕಿನ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ವತಿಯಿಂದ ಇಲ್ಲಿನ ಬ್ರಹ್ಮರಕೂಟ್ಲು ಬಂಟವಾಳದ ಬಂಟರ ಭವನದಲ್ಲಿ ಭಾನುವಾರ ರಾತ್ರಿ ಏರ್ಪಡಿಸಿದ್ದ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮೈನವಿರೇಳಿಸುವ ವಿವಿಧ ದೈಹಿಕ ಕಸರತ್ತು ಸಹಿತ ದೇಶೀಯ ಮತ್ತು ವಿದೇಶಿ ನೃತ್ಯ ರೂಪಕ ಪ್ರದರ್ಶಿಸಿ ಗಮನ ಸೆಳೆದರು.
ಕೇರಳದ ಮೋಹಿನಿಯಾಟಂ, ಬಡಗುತಿಟ್ಟು ಮತ್ತು ತೆಂಕು ತಿಟ್ಟಿನ ಯಕ್ಷಗಾನ ಪ್ರದರ್ಶನ, ಆಂಧ್ರದ ಬಂಜಾರ ನೃತ್ಯ, ರೋಮಾಂಚನಕಾರಿ ಸ್ಟಂಟ್ ಸಹಿತ ಮಣಿಪುರಿ ಸ್ಟಿಕ್ ಡ್ಯಾನ್ಸ್ ಮತ್ತು ದೋಲ್ ಚಲಮ್ ನೃತ್ಯ, ಶ್ರೀಲಂಕಾ ನೃತ್ಯ ವೈಭವ, ಮಲ್ಲಕಂಬದಲ್ಲಿ ಸಾಹಸಮಯ ಮತ್ತು ರೋಪ್ ಕಸರತ್ತು, ಕಥಕ್, ಭರತನಾಟ್ಯ, ಗುಜರಾತಿನ ಹೂಡೋರಾಸ್, ಮಹಾರಾಷ್ಟ್ರದ ಲಾವಣಿ ನೃತ್ಯ, ಪಶ್ಚಿಮ ಬಂಗಾಳದ ಪುರುಲಿಯಾ, ಒರಿಸ್ಸಾದ ಗೋಟಿಪೂವ ಮತ್ತು ಯೋಗ ನೃತ್ಯ, ವಂದೇ ಮಾತರಂ ಮತ್ತಿತರ ರಾಷ್ಟ್ರಭಕ್ತಿ ಉದ್ದೀಪನಗೊಳಿಸುವ ನೃತ್ಯ ಮತ್ತು ನೃತ್ಯ ರೂಪಕ ಗಮನ ಸೆಳೆಯಿತು.

ಉದ್ಘಾಟನೆ:
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಯುವಜನತೆಗೆ ದೇಶೀಯ ಮತ್ತು ವಿದೇಶಿ ಕಲೆ ಹಾಗೂ ಸಾಂಸ್ಕೃತಿಕ ಪ್ರಕಾರ ತಿಳಿಸುವುದರ ಜೊತೆಗೆ ಜನರಲ್ಲಿ ಸೌಹಾರ್ದತೆಯ ಸಾಂಸ್ಕೃತಿಕ ಅಭಿರುಚಿ ಮೂಡಿಸುವ ವಿಶೇಷ ಪ್ರಯತ್ನ ಆಳ್ವಾಸ್ ಸಂಸ್ಥೆ ಮೂಲಕ ನಡೆಯುತ್ತಿದೆ ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಪುರಸಬಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ, ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ ಶೆಟ್ಟಿ, ಕಸಾಪ ಅಧ್ಯಕ್ಷ ಕೆ.ಮೋಹನ ರಾವ್, ಪ್ರಮುಖರಾದ ಸುದರ್ಶನ್ ಜೈನ್, ಕೆ.ಸೇಸಪ್ಪ ಕೋಟ್ಯಾನ್, ಪಿಯೂಸ್ ಎಲ್.ರಾಡ್ರಿಗಸ್, ಎನ್.ಸುಲೇಮಾನ್, ವಿದ್ಯಾ ಅಶ್ವನಿ ಕುಮಾರ್ ರೈ, ಪ್ರತಿಭಾ ಎ.ರೈ, ಪ್ರಕಾಶ ಕಾರಂತ, ಐತಪ್ಪ ಆಳ್ವ, ರಿತೇಶ ಬಾಳಿಗಾ, ಜಗನ್ನಾಥ ಚೌಟ, ಸದಾನಂದ ಡಿ.ಶೆಟ್ಟಿ ಮತ್ತಿತರರು ಇದ್ದರು.
ಸಮಿತಿ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ಸ್ವಾಗತಿಸಿ, ಕಾರ್ಯಾಧ್ಯಕ್ಷ ಡಾ.ಗಿರೀಶ ಭಟ್ ಅಜೆಕ್ಕಳ ವಂದಿಸಿದರು. ಸಂಚಾಲಕ ಡಾ.ಯೋಗೀಶ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.

