ಬಂಟ್ವಾಳ: ಸ್ವಾತಂತ್ರ್ಯಪೂರ್ವದಲ್ಲಿ ಸಮಾಜ ಸೇವೆ ಜೊತೆಗೆ ಬ್ರಿಟೀಷರ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರಂಭಗೊಂಡ ಪತ್ರಿಕಾ ಮಾಧ್ಯಮ ಇಂದು ಉದ್ಯಮವಾಗಿ ಪರಿವರ್ತನೆಗೊಂಡಿದ್ದರೂ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವಲ್ಲಿ ಇಂದಿಗೂ ಮಹತ್ತರ ಪಾತ್ರ ನಿರ್ವಹಿಸುತ್ತಿದೆ ಎಂದು ರಾಜ್ಯ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ಧರಾಜು ಹೇಳಿದ್ದಾರೆ.

ಬಂಟ್ವಾಳ ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಮಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾ ಸಂವಾದ ಮತ್ತು ಮಾಹಿತಿ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ಆಧುನಿಕತೆ ಮತ್ತು ತಂತ್ರಜ್ಞಾನ ಬೆಳೆದು ಎಲೆಕ್ಟ್ರಾನಿಕ್ಸ್ ಮಾಧ್ಯಮ ಮೂಲಕ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಪ್ರಚಲಿತ ವಿದ್ಯಮಾನಗಳು ಕ್ಷಣ ಮಾತ್ರದಲ್ಲಿ ಜನರಿಗೆ ತಲುಪುವಂತಾಗಿದೆ. ರಾಜ್ಯದಲ್ಲಿ ಸುಮಾರು 1,800ಕ್ಕೂ ಮಿಕ್ಕಿ ವಿವಿಧ ಪತ್ರಿಕೆಗಳಿದ್ದು, ವಿದ್ಯಾರ್ಥಿಗಳು ಬಾಲ್ಯದಿಂದಲೇ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡಾಗ ಮಾತ್ರ ಸಾಮಾನ್ಯ ಜ್ಞಾನ ವೃದ್ಧಿಸುವುದರ ಜೊತೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಹಕಾರಿಯಾಗುತ್ತದೆ ಎಂದು ಅವರು ವಿವರಿಸಿದರು.
ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರುಗೇಶ್ ಬಿ.ಶಿವಪೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜವಾಬ್ದಾರಿಯುತ ತಾಜಾ ಸುದ್ದಿಗಳಿಗೆ ಗರಿಷ್ಟ ಆಧ್ಯತೆ ನೀಡುತ್ತಿರುವ ಪತ್ರಿಕೆ ಮತ್ತಿತರ ಮಾಧ್ಯಮಗಳು ಇಂದಿಗೂ ಜನರಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದರು.
ಮಾಣಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕಿರಣ್ ಹೆಗ್ಡೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂತಹ ಗ್ರಾಮೀಣ ಪ್ರದೇಶದಲ್ಲಿ ಪತ್ರಿಕಾ ಸಂವಾದ ಅರ್ಥಪೂರ್ಣವಾಗಿದೆ ಎಂದರು.
ಸಂಘದ ರಾಜ್ಯ ಉಪಾಧ್ಯಕ್ಷ ಗೌರೀಶ್ ಶಾಸ್ತ್ರಿ, ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್, ಬಂಟ್ವಾಳ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಎಸ್.ಮಾವೆ, ಕಾಲೇಜಿನ ಪ್ರಾಂಶುಪಾಲ ರವೀಂದ್ರ ಎಂ.ಶೆಟ್ಟಿ ಮತ್ತಿತರರು ಶುಭ ಹಾರೈಸಿದರು. ಇದೇ ವೇಳೆ ಬಂಟ್ವಾಳ ಸಂಘದ ವತಿಯಿಂದ ಮಾಧ್ಯಮ ಅಕಾಡೆಮಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

ತಾಲೂಕು ಪಂಚಾಯಿತಿ ಸದಸ್ಯರಾದ ಮಂಜುಳಾ ಕುಶಲ ಪೆರಾಜೆ, ಗೀತಾ ಚಂದ್ರಶೇಖರ್, ಮಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಎಸ್.ಶೆಟ್ಟಿ, ಸದಸ್ಯ
ಇಬ್ರಾಹಿಂ ಮಾಣಿ, ಅನಂತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸನತ್ ಕುಮಾರ್ ರೈ, ನೆಟ್ಲಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯ, ಉಪಾಧ್ಯಕ್ಷೆ ರೇವತಿ, ಸದಸ್ಯೆ ಪ್ರೇಮಾ, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ವೆಂಕಟೇಶ ಬೆಂಡೆ ಮತ್ತಿತರರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಐಸಾಕ್ ರಿಚಾರ್ಡ್, ಕೋಶಾಧಿಕಾರಿ ಬಾವಾ ಪದರಂಗಿ, ಸದಸ್ಯರಾದ ದತ್ತಾತ್ರೇಯ ಹೆಗ್ಡೆ, ಇಜಾಝ್, ಪತ್ರಿಕಾ ಛಾಯಾಗ್ರಾಹಕ ಸತೀಶ ಕುಮಾರ್, ಮುಖ್ಯಶಿಕ್ಷಕ ಬಿ.ಕೆ.ಭಂಡಾರಿ, ದೈಹಿಕ ಶಿಕ್ಷಕ ಗಂಗಾಧರ ರೈ ಮಾಣಿ ಮತ್ತಿತರರು ಇದ್ದರು. ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ ಸ್ವಾಗತಿಸಿದರು. ಗೌರವಾಧ್ಯಕ್ಷ ಜಯಾನಂದ ಪೆರಾಜೆ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
