ಬಂಟ್ವಾಳ: ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನೊಂದು ವಾರದಲ್ಲಿ ಬಂಟ್ವಾಳ ಪೇಟೆ ರಸ್ತೆ ಅಗಲಗೊಳಿಸುವ ಪ್ರಕ್ರಿಯೆಗೆ ಚಾಲನೆ ದೊರಕಲಿದೆ.

dc-1

ಬಂಟ್ವಾಳ ಪುರಸಭಾ ವ್ಯಾಪ್ತಿಯ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ನವೆಂಬರ್ 9ರಂದು ಅಧಿಕಾರಿಗಳಿಗೆ ನೀಡಲಾದ ಜವಾಬ್ದಾರಿ ಕುರಿತಂತೆ ಶುಕ್ರವಾರ ಮತ್ತೆ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಸೂಚಿಸಲಾದ ಕೆಲವೊಂದು ಕಾರ್ಯಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ಬಾರದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.dc-7

ಸಚಿವ ಬಿ.ರಮಾನಾಥ ರೈ ನಿರ್ದೇಶನದ ಮೇರೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಚಿತ್ರಣವನ್ನೇ ಬದಲಿಸುವ ನಿಟ್ಟಿನಲ್ಲಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಕೈಗೊಂಡ ಕಾರ್ಯಗಳ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತೇನೆ. ಕಾರಣಾಂತರಗಳಿಂದ ಕಾರ್ಯರೂಪಕ್ಕೆ ಬಾರದಿದ್ದರೂ, ಮುಂದಿನ ಹಂತದಲ್ಲಿ ಇದಕ್ಕೆ ಹಿನ್ನಡೆಯಾಗಬಾರದು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೂ ಪರಸ್ಪರ ಸಹಕರಿಸಬೇಕು ಎಂದರು.

dc-8

ಪೇಟೆ ರಸ್ತೆ ಅಗಲಗೊಳಿಸುವ ಹಂತದಲ್ಲಿ ಧಾರ್ಮಿಕ ಕೇಂದ್ರಗಳಿರಲಿ, ವಾಸದ ಮನೆಗಳಿರಲಿ, ಅತಿಕ್ರಮಣಗಳಾಗಿದ್ದಲ್ಲಿ ಯಾವುದೇ ಮುಲಾಜಿಲ್ಲದೆ ಅವುಗಳನ್ನು ತೆರವುಗೊಳಿಸಲಾಗುವುದು ಎಂದು ನಾಮನಿರ್ದೇಶನ ಸದಸ್ಯ ಪ್ರವೀಣ್ ಕಿಣಿ ಅವರ ಪ್ರಶ್ನೆಗೆ ಖಡಕ್ ಆಗಿ ಜಿಲ್ಲಾಧಿಕಾರಿ ಉತ್ತರಿಸಿದರು.

dc-6

ಅತಿಕ್ರಮಣಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದಿಲ್ಲ. ಬಿಲ್ಡಿಂಗ್ ಸೆಟ್ ಬ್ಯಾಕ್, ಅತಿಕ್ರಮಣ, ರೋಡ್ ಮಾರ್ಜಿನ್ ನಿಂದ ಸೆಟ್ ಬ್ಯಾಕ್ ಇದ್ದುದನ್ನು ತೆರವುಗೊಳಿಸಿ. ಯಾವುದೇ ಅಡೆತಡೆಗಳಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ. ವಾರದೊಳಗೆ ಕೆಲಸ ಆರಂಭಿಸಬೇಕು ಎಂದು ತಾಕೀತು ಮಾಡಿದರು.

ಬಿ.ಸಿ.ರೋಡ್ ಅಶಿಸ್ತು ಡಿಸಿ ಗರಂ:
ಬಿ.ಸಿ.ರೋಡ್ ಪೇಟೆಯಲ್ಲಿ ಅಶಿಸ್ತು ತಾಂಡವವಾಡುತ್ತಿದೆ ಇದಕ್ಕೊಂದು ಪರಿಹಾರ ರೂಪಿಸುವ ಬಗ್ಗೆ ಖುದ್ದು ಜಿಲ್ಲಾಧಿಕಾರಿಯೇ ಕೆಲವೊಂದು ಸೂತ್ರಗಳನ್ನು ಸಭೆಯ ಮುಂದಿಟ್ಟರು.  ಅಧಿಕಾರಿಗಳು ಈ ಸೂತ್ರಕ್ಕೆ ತಕ್ಷಣ ಸ್ಪಂದಿಸಿ ಕಾರ್ಯಪ್ರವೃತ್ತರಾಗುವಂತೆ ಕಟ್ಟಪ್ಪಣೆ ಹೊರಡಿಸಿದರು.dc-3

ಬಸ್ ಬೇ 15 ದಿನದೊಳಗೆ:
ಬಸ್ ಬೇ 15 ದಿನಗಳೊಳಗೆ ಕೈಕಂಬದಲ್ಲಿ ನಿರ್ಮಾಣವಾಗಬೇಕು. ಸರ್ವೀಸ್ ರಸ್ತೆಯಲ್ಲೂ ಬಸ್ ಬೇ ನಿರ್ಮಾಣಕ್ಕೆ ಕಾರ್ಯಪ್ರವೃತ್ತರಾಗಬೇಕು. ಇದಕ್ಕೆ ಮೆಸ್ಕಾಂ, ಅರಣ್ಯ ಇಲಾಖೆ ಜೊತೆ ಹೆದ್ದಾರಿ ಇಲಾಖೆ ಸಮನ್ವಯತೆಯಿಂದ ಕಾರ್ಯಪ್ರವೃತ್ತರಾಗಬೇಕು. ಸಹಾಯಕ ಕಮೀಷನರ್ ಈಗಾಗಲೇ ತಯಾರಿಸಿರುವ ನಕ್ಷೆಯಂತೆ ಅತಿಕ್ರಮಣ ತೆರವುಗೊಳಿಸಬೇಕು ಎಂದರು. ತಾತ್ಕಾಲಿಕ ವ್ಯವಸ್ಥೆಯಲ್ಲಿ ರಸ್ತೆಯಲ್ಲೇ ವ್ಯಾಪಾರ ಮಾಡುವವರನ್ನು ತೆರವುಗೊಳಿಸಬೇಕು, ಪಾರ್ಕಿಂಗ್ ಗೆ ಜಾಗ ಗುರುತಿಸಿ ಸರ್ವೇ ನಡೆಸಬೇಕು ಎಂದರು.

dc-4

ಬಿ.ಸಿ.ರೋಡಿನಲ್ಲಿರುವ ಎಲ್ಲ ಅಂಗಡಿಗಳ ಎದುರು ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಎರಡು ಬಕೆಟ್ ಗಳನ್ನು ಇಡುವಂತೆ ಸೂಚಿಸಬೇಕು. ಅದರಲ್ಲಿ ತ್ಯಾಜ್ಯವನ್ನು ಅವರು ಹಾಕಲೇಬೇಕು. ಇದನ್ನು ಪಾಲಿಸದೇ ಇದ್ದಲ್ಲಿ, ಅಂಗಡಿಗಳ ಲೈಸೆನ್ಸ್ ರದ್ದುಗೊಳಿಸುವಂಥ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಮೇಲ್ಸೇತುವೆ ಕೆಳಭಾಗದಲ್ಲಿ ಚರಂಡಿ ಮತ್ತು ಸರ್ವೀಸ್ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹೆದ್ದಾರಿ ಇಲಾಖೆ ಈ ಬಗ್ಗೆ ಗಮನ ಕೊಡುತ್ತಿಲ್ಲ ಎಂದು ಸದಸ್ಯ ಸದಾಶಿವ ಬಂಗೇರ ಜಿಲ್ಲಾಧಿಕಾರಿ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಹೆದ್ದಾರಿ ಇಲಾಖೆಯ ಅಜಿತ್, ಈಗಾಗಲೇ ಸರ್ವೀಸ್ ರಸ್ತೆ ಕಾಂಕ್ರೀಟಿಕರಣಗೊಳಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರ ಇದು ಕಾರ್ಯರೂಪಕ್ಕೆ ಬರಲಿದೆ ಎಂದರು.

ಬಿ.ಸಿ.ರೋಡಿನ ಕೈಕುಂಜ ರಸ್ತೆಯಲ್ಲಿ ಮಾರ್ಕ್ ಮಾಡಿದ ಸ್ಥಳವನ್ನು ಗುರುತಿಸಿ, ಪಾರ್ಕಿಂಗ್ ಗೆ ಸೂಕ್ತ ಜಾಗ ಕಲ್ಪಿಸಬೇಕು. ಮಲ್ಟಿಲೆವೆಲ್ ಪಾರ್ಕಿಂಗ್ ಗೆ ಅನುಕೂಲವಾಗುವಂತೆ ವ್ಯವಸ್ಥೆ ರೂಪಿಸಬೇಕು. ಹಿಂದಿನ ಸಭೆಯಲ್ಲಿ ಸದಸ್ಯರೊಬ್ಬರು ನೀಡಿದ ಸಲಹೆ ನೆನಪಿಸಿದ ಜಿಲ್ಲಾಧಿಕಾರಿ, ಅತಿಕ್ರಮಣ ತೆರವಿಗೆ ಕ್ರಮ ಕೈಗೊಳ್ಳಿ ಎಂದು ತಹಸೀಲ್ದಾರ್ ಪುರಂದರ ಹೆಗ್ಡೆ ಅವರಿಗೆ ತಿಳಿಸಿದರು.

dc-2

ತನಿಖೆಗೆ ಆದೇಶ:
ಕೈಕುಂಜೆ ರಸ್ತೆ ಮೂಲನಕ್ಷೆ ಬದಲಿಸಿ ರಸ್ತೆ ನಿರ್ಮಿಸಲಾಗಿದೆ, ಹಾಗೂ ಇದು ಕಳಪೆಯಾಗಿದೆ ಎಂದು ಲೋಕಾಯುಕ್ತ ನ್ಯಾಯಾಲಯದಲ್ಲಿ ತನಿಖಾ ಹಂತದಲ್ಲಿದೆ, ಹಿಂದಿನ ಜಿಲ್ಲಾಧಿಕಾರಿಗೂ ದೂರು ನೀಡಲಾಗಿದೆ ಎಂದು ಬಿಜೆಪಿ ಸದಸ್ಯರಾದ ಗೋವಿಂದ ಪ್ರಭು ಮತ್ತು ದೇವದಾಸ ಶೆಟ್ಟಿ ಜಿಲ್ಲಾಧಿಕಾರಿ ಗಮನ ಸೆಳೆದರು. ಈ ಬಗ್ಗೆ ಲಿಖಿತ ದೂರು ಪಡೆದುಕೊಂಡ ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕ ಪ್ರಸನ್ನ ಅವರಿಗೆ ಈ ಕುರಿತು ತನಿಖೆಗೆ ಸೂಚಿಸಿದರು.

ಸದಸ್ಯರಾದ ವಾಸು ಪೂಜಾರಿ, ಪ್ರವೀಣ ಬಿ, ಚಂಚಲಾಕ್ಷಿ, ಮೊನೀಶ್ ಆಲಿ, ವಸಂತಿ, ಬಿ.ಮೋಹನ್, ಜಗದೀಶ ಕುಂದರ್, ಗಂಗಾಧರ್, ಭಾಸ್ಕರ ಟೈಲರ್ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದರು.

ಪ್ರೊಬೆಷನರಿ ಐಎಎಸ್ ಗಾರ್ಗಿ ಜೈನ್, ಮುಖ್ಯಾಧಿಕಾರಿ ಕೆ.ಸುಧಾಕರ್, ಬಂಟ್ವಾಳ ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಉಮೇಶ್ ಭಟ್, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *