ಬಂಟ್ವಾಳ: ಮುಳುಗಡೆಯಾಗಲಿರುವ 47 ಎಕರೆ ಭೂಮಿಯ ಸಂತ್ರಸ್ತರಿಗೆ ಪರಿಹಾ ನೀಡಿದ ಬಳಿಕವೇ 5 ಮೀಟರ್ ನೀರು ಶೇಖರಿಸಲಾಗವುದು ಎಂದು ಜಿಲ್ಲಾಧಿಕಾರಿ ತುಂಬೆ ಹೊಸ ಡ್ಯಾಂ ಮುಳುಗಡೆ ಸಂತ್ರಸ್ತ ರೈತರಿಗೆ ಭರವಸೆ ನೀಡಿದ್ದಾರೆ. ಆದರೆ ಮುಳುಗಡೆಯಾಗಲಿರುವ 47 ಎಕರೆ ಜಮೀನು ಯಾರ್ಯಾರಿಗೆ ಸೇರಿದ್ದು ಎಂಬ ಸಂತ್ರಸ್ತ ರೈತ ಮುಖಂಡರ ಪ್ರಶ್ನೆಗೆ ಯಾವೊಬ್ಬ ಅಧಿಕಾರಿಯಲ್ಲೂ ಉತ್ತರ ಇಲ್ಲವಾಗಿದೆ.

dam-1

ಹೌದು… ಮಂಗಳೂರು ಮಹಾ ನಗರಕ್ಕೆ ನೀರು ಪೂರೈಸಲು 75 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ 12 ಮೀಟರ್ ಎತ್ತರದಲ್ಲಿ ನೇತ್ರಾವತಿ ನದಿಗೆ ತುಂಬೆಯಲ್ಲಿ ಅಡ್ಡವಾಗಿ ನಿರ್ಮಿಸಿರುವ ಹೊಸ ವೆಂಟೆಡ್ ಡ್ಯಾಂನಲ್ಲಿ ನೀರು ಶೇಖರಿಸಲು ದಿನಗಣನೆ ಆರಂಭಗೊಂಡಿದೆ. ಹೊಸ ಡ್ಯಾಂ 12 ಮೀಟರ್ ಎತ್ತರವಿದ್ದರೂ ಪ್ರಸ್ತುತ ವರ್ಷ 5 ಮೀಟರ್ ನೀರು ಶೇಖರಿಸಲು ಮನಪಾ ತಯಾರಿ ನಡೆಸಿದೆ. ಹೊಸ ಡ್ಯಾಂನಲ್ಲಿ ನೀರು ಶೇಖರಣೆಯಿಂದ ನೂರಾರು ಎಕರೆ ಫಲವತ್ತಾದ ಕೃಷಿ ಭೂಮಿ ಮುಳುಗಡೆಯಾಗಲಿದ್ದು ನೂರಾರು ಮಂದಿ ರೈತರು ಸಂತ್ರಸ್ತರಾಗಲಿದ್ದಾರೆ.

ಕಳೆದ ಬೇಸಿಗೆಯಲ್ಲಿ ಮನಪಾ ವ್ಯಾಪ್ತಿಯಲ್ಲಿ ತೀವ್ರ ನೀರಿನ ಸಮಸ್ಯೆ ಉಂಟಾಗಿದ್ದರಿಂದ ಪ್ರಸ್ತುತ ಹೊಸ ಡ್ಯಾಂನಲ್ಲಿ ನೀರು ಶೇಖರಣೆ ಅತ್ಯಗತ್ಯವಾಗಿದೆ. ಆದರೆ ಸಂತ್ರಸ್ತ ರೈತರಿಗೆ ನ್ಯಾಯಯುತ ಪರಿಹಾರ ನೀಡದೆ ನೀರು ಶೇಖರಣೆಗೆ ಅವಕಾಶ ನೀಡಬಾರದು ಎಂದು ಸಂತ್ರಸ್ತ ಹೋರಾಟ ಸಮಿತಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿವೊಂದನ್ನು ಸಲ್ಲಿಸಿದೆ. ಈ ಮಧ್ಯೆ ಜಿಲ್ಲಾಧಿಕಾರಿ ಡಾ. ಜಗದೀಶ್ ತನ್ನ ಕಚೇರಿಯಲ್ಲಿ ನ. 15ರಂದು ಬಂಟ್ವಾಳ ತಾಲೂಕು ತಹಶೀಲ್ದಾರ್, ಮನಪಾ ಆಯುಕ್ತ, ಸರ್ವೇ ಅಧಿಕಾರಿಗಳು ಹಾಗೂ ಸಂತ್ರಸ್ತ ರೈತ ಮುಖಂಡರ ಸಭೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮನ್ನು ಭೇಟಿಯಾದ ಪತ್ರಿಕೆಯೊಂದಿಗೆ ಮಾತನಾಡಿದ ಸಂತ್ರಸ್ತ ಹೋರಾಟ ಸಮಿತಿಯ ಮುಖಂಡರಾದ ಸುಬ್ರಹ್ಮಣ್ಯ ಭಟ್, ಎನ್.ಕೆ.ಇದಿನಬ್ಬ, ಮನೋಹರ್ ಶೆಟ್ಟಿ, ಸುದೇಶ್ ಮಯ್ಯ, ಶ್ರೀಧರ್ ಶೆಟ್ಟಿ, ಜಿಲ್ಲಾಧಿಕಾರಿಯ ಸಭೆಯ ಬಳಿಕ ಸಂತ್ರಸ್ತರಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಆತಂಕ ವ್ಯಕ್ತಪಟಿಸಿದ್ದಾರೆ.

”ಮುಂದಿನ ತಿಂಗಳು ಹೊಸ ಡ್ಯಾಂನಲ್ಲಿ 5 ಮೀಟರ್ ನೀರು ಶೇಖರಿಸಲಾಗುವುದು. ಈಗಾಗಲೇ ಸರ್ವೇ ಕಾರ್ಯ ಮುಗಿದಿದ್ದು 5 ಮೀಟರ್ ನೀರು ಶೇಖರಣೆಯಿಂದ 47 ಎಕರೆ ಜಮೀನು ಮುಳುಗಡೆಯಾಗಲಿದೆ. 47 ಎಕರೆ ಜಮೀನಿನ ಮಾಲಕರಿಗೆ ಪರಿಹಾರದ ಚೆಕ್ ನೀಡಿದ ಬಳಿಕವೇ ನೀರು ಶೇಖರಿಸಲಾಗುವುದು” ಎಂದು ನ. 15ರಂದು ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಜಗದೀಶ್ ಭರವಸೆ ನೀಡಿದ್ದರು. ಆದರೆ ಮುಳುಗಡೆಯಾಗಲಿರುವ 47 ಎಕರೆ ಜಮೀನು ಯಾರ್ಯಾರಿಗೆ ಸೇರಿದ್ದು, ಯಾವ ಗ್ರಾಮದಲ್ಲಿ ಎಷ್ಟು ಜಮೀನು ಮುಳುಗಡೆಯಾಗಲಿದೆ, ಅದರ ಸರ್ವೇ ನಂಬ್ರ ಸಹಿತ ವಿವರ ಕೊಡಿ ಎಂದು ಸಭೆಯಲ್ಲಿ ಕೇಳಿದರೆ ಜಿಲ್ಲಾಧಿಕಾರಿ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.

ಸಭೆಯ ಬಳಿಕ ಮನಪಾ ಅಧಿಕಾರಿಗಳು, ಸರ್ವೇ ನಡೆಸಿದ ಕಂಪೆನಿಯ ಅಧಿಕಾರಿಗಳಲ್ಲಿ ಮತ್ತು ಬಂಟ್ವಾಳ ತಾಲೂಕು ತಹಶೀಲ್ದಾರ್ ಹಾಗೂ ಸರ್ವೇ ಅಧಿಕಾರಿಗಳಲ್ಲಿ ಕೂಡಾ ನಾವು ವಿವರ ಕೋರಿದ್ದೇವೆ. ಆದರೆ ಯಾವೊಬ್ಬ ಅಧಿಕಾರಿಗೂ ಮುಳುಗಡೆಯಾಗುವ 47 ಎಕರೆ ಜಮೀನು ಯಾವುದು ಎಂಬ ಮಾಹಿತಿ ಇಲ್ಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

dam-2

ಡ್ಯಾಂನಲ್ಲಿ ಶೇಖರಿಸುವ ನೀರಿನ ಒಟ್ಟು ಮಟ್ಟಕ್ಕಿಂತ ಒಂದು ಮೀಟರ್ ಹೆಚ್ಚು ವ್ಯಾಪ್ತಿಯ ಸರ್ವೇ ನಡೆಸಬೇಕೆಂಬ ನಿಯಮವಿದೆ. ಅಂದರೆ 5 ಮೀಟರ್ ನೀರು ನಿಲ್ಲಿಸುವುದಾದರೆ 6 ಮೀಟರ್ ವ್ಯಾಪ್ತಿಯನ್ನು ಸರ್ವೇ ನಡೆಸಿ ಮುಳುಗಡೆ ಪ್ರದೇಶವನ್ನು ಗುರುತಿಸಬೇಕಾಗಿದೆ. ಇಲ್ಲವಾದರೆ ನೀರಿನ ಒರತೆಯಿಂದ 6ನೆ ಮೀಟರ್ ವ್ಯಾಪ್ತಿಯಲ್ಲಿರುವ ಮನೆಗಳು ಕುಸಿದು ಬೀಳುವ ಅಪಾಯವಿದೆ. ಬೆಳೆಗಳು ಹಾನಿಯಾಗಲಿದೆ. ಪ್ರಸ್ತುತ ಜಿಲ್ಲಾಧಿಕಾರಿಯ ಮಾಹಿತಿಯಂತೆ ಹೊಸ ಡ್ಯಾಂನಲ್ಲಿ 5 ಮೀಟರ್ ನೀರು ಶೇಖರಿಸಲಾಗುವುದು ಮತ್ತು ಅಷ್ಟೇ ವ್ಯಾಪ್ತಿಯ ಮುಳುಗಡೆ ಪ್ರದೇಶವನ್ನು ಮಾತ್ರ ಸರ್ವೇ ನಡೆಸಲಾಗಿದೆ ಎಂದಾಗಿದೆ. ಇದು ಅನ್ನದಾತರಿಗೆ ಮಾಡುತ್ತಿರುವ ಅನ್ಯಾಯವಾಗಿದ್ದು 5 ಮೀಟರ್ ಮುಳುಗಡೆ ಪ್ರದೇಶವನ್ನು ಮಾತ್ರ ಸರ್ವೇ ನಡೆಸಿದ್ದರೆ 4 ಮೀಟರ್‍ಗಿಂತ ಹೆಚ್ಚು ನೀರು ಶೇಖರಿಸಬಾರದು ಎಂದು ರೈತರು ಆಗ್ರಹಿಸಿದ್ದಾರೆ.

ಸಭೆಯ ಬಳಿಕವೂ ಸರ್ವೇ!:

ತುಂಬೆ ಹೊಸ ಡ್ಯಾಂನಲ್ಲಿ 5 ಮೀಟರ್ ನೀರು ಶೇಖರಣೆಯಿಂದ ಮುಳುಗಡೆಯಾಗಲಿರುವ ಜಮೀನಿನ ಸರ್ವೇ ಕಾರ್ಯ ಮುಗಿದಿದೆ. ಶೀರ್ಘದಲ್ಲೇ ಸಂತ್ರಸ್ತರಿಗೆ ಪರಿಹಾರ ನೀಡಿ ಬಳಿಕ ನೀರು ಶೇಖರಿಸಲಾಗುವುದು ಎಂದು ನ. 15ರಂದು ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಜಗದೀಶ್ ಮಾಹಿತಿ ನೀಡಿದ್ದರು. ಆದರೆ ನ. 17ರಿಂದ ಮತ್ತೆ ಸರ್ವೇ ಅಧಿಕಾರಿಗಳು ಸಜೀಪ ಮುನ್ನೂರು ಗ್ರಾಮದಲ್ಲಿ ಸರ್ವೇ ನಡೆಸುತ್ತಿದ್ದಾರೆ. ಈ ಬಗ್ಗೆ ಅವರನ್ನು ವಿಚಾರಿಸಿದರೆ ಅಸ್ಪಷ್ಟ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಸಂತ್ರಸ್ತ ರೈತರು ಅಧಿಕಾರಿಗಳ ದ್ವಂದ್ವ ನಡೆಯಿಂದ ಸಂತ್ರಸ್ತ ರೈತರಲ್ಲಿ ಗೊಂದಲ ಉಂಟಾಗಿದೆ. ಹೊಸ ಡ್ಯಾಂ ನಿರ್ಮಾಣದಿಂದ ಮುಳುಗಡೆಯಾಗುವ ನೂರಾರು ಎಕರೆ ಫಲವತ್ತಾದ ಕೃಷಿ ಭೂಮಿಗೆ ಪರಿಹಾರ ಕನಸಿನ ಮಾತಾಗಿದೆಯೇ ಎಂಬ ಆತಂಕವೂ ಸೃಷಿಯಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಡಿಸಿ ಇಬ್ರಾಹೀಂ ಆದೇಶಕ್ಕೆ ಬೆಲೆ ಇಲ್ಲವೇ?
ವೈಜ್ಞಾನಿಕ ಸರ್ವೇ ನಡೆಸಿ ನ್ಯಾಯಯುಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ತುಂಬೆ ಹೊಸ ಡ್ಯಾಂ ಮುಳುಗಡೆ ಸಂತ್ರಸ್ತ ರೈತರು ಸಜೀಪ ಮುನ್ನೂರು ಗ್ರಾಮದ ಕೊಳ್ಳಲದಲ್ಲಿ ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಅಧಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಡ್ಯಾಂನಲ್ಲಿ 7 ಮೀಟರ್ ನೀರು ಶೇಖರಿಸುವ ಹಿನ್ನೆಲೆಯಲ್ಲಿ 8 ಮೀಟರ್ ವ್ಯಾಪ್ತಿಯ ಸರ್ವೇ ನಡೆಸಿ ಸಂತ್ರಸ್ತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನಪಾ, ಬಂಟ್ವಾಳ ತಾಲೂಕು ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದ್ದರು. ಆದರೆ ಡಿಸಿ ಇಬ್ರಾಹೀಂರ ಆದೇಶವನ್ನು ಯಾವೊಬ್ಬ ಅಧಿಕಾರಿಯೂ ಪಾಲಿಸಿಲ್ಲ. ಇದೀಗ ಜಿಲ್ಲೆಗೆ ನೂತನವಾಗಿ ಬಂದಿರುವ ಜಿಲ್ಲಾಧಿಕಾರಿ ಡಾ. ಜಗದೀಶ್ 5 ಮೀಟರ್‍ಗೆ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ನೀಡುವುದು ಎಂದು ತಿಳಿಸಿದ್ದಾರೆ. ಹಾಗಾದರೆ ಹಳೆ ಜಿಲ್ಲಾಧಿಕಾರಿಯ ಆದೇಶಕ್ಕೆ ಯಾವ ಬೆಲೆ ಇಲ್ಲವೇ ಎಂದು ಸಂತ್ರಸ್ತ ಹೋರಾಟ ಸಮಿತಿಯ ಮುಖಂಡರು ಪ್ರಶ್ನಿಸಿದ್ದಾರೆ.

ಹೈಕೋರ್ಟ್ ನೋಟಿಸ್‍ಗೆ ಉತ್ತರವಿಲ್ಲ!
ತಂಬೆ ಹೊಸ ಡ್ಯಾಂ ಮುಳುಗಡೆ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ನೀಡದೆ ನೀರು ಶೇಖರಣೆಗೆ ತಡೆಯಾಜ್ಞೆ ನೀಡಬೇಕು ಎಂದು ಸಂತ್ರಸ್ತ ಹೋರಾಟ ಸಮಿತಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿವೊಂದನ್ನು ಸಲ್ಲಿಸಿದೆ. ಈ ಅರ್ಜಿವನ್ನು ವಿಚಾರಣೆ ನಡೆಸಿಸ ನ್ಯಾಯಾಲಯ ಜಿಲ್ಲಾಧಿಕಾರಿ, ಮನಪ ಆಯುಕ್ತ, ಮೇಯರ್, ಬಂಟ್ವಾಳ ತಹಶೀಲ್ದಾರ್, ಒಳ ಚರಂಡಿ ಇಲಾಖೆ ಸೇರಿದಂತೆ 8 ಮಂದಿಗೆ ನೋಟಿಸ್ ಜಾರಿಗೊಳಿಸಿತ್ತು. ನೋಟಿಸ್‍ಗೆ 8 ದಿನಗಳ ಒಳಗೆ ಉತ್ತರಿಸಬೇಕಿತ್ತಾದರೂ ತಿಂಗಳು ಕಳೆದರೂ ಈವರೆಗೆ ಯಾರೂ ಉತ್ತರಿಸಿಲ್ಲ. ನೋಟಿಸ್‍ಗೆ ಉತ್ತರಿಸದೆ, ಪರಿಹಾರವೂ ನೀಡದೆ ಡ್ಯಾಂನಲ್ಲಿ ನೀರು ಶೇಖರಣೆ ಮನಪಾ ಮುಂದಾಗಿರುವ ಕ್ರಮವನ್ನು ಪ್ರಶ್ನಿಸಿ ಶೀರ್ಘದಲ್ಲೇ ನ್ಯಾಯಾಲಯದಿಂದ ಇನ್ನೊಂದು ನೋಟಿಸ್ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂತ್ರಸ್ತ ಹೋರಾಟ ಸಮಿತಿ ತಿಳಿಸಿದೆ.

– ಇಮ್ತಿಯಾಝ್ ಶಾ ತುಂಬೆ

By Suddi9

Leave a Reply

Your email address will not be published. Required fields are marked *