ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಿತ ಸಂಘಟನೆಯಿಂದಾಗಿ ಮಾದರಿ ಸಮ್ಮೇಳನವೆನಿಸಿರುವ ಆಳ್ವಾಸ್ ನುಡಿಸಿರಿ ನ.18ರಂದು ಪ್ರಾರಂಭಗೊಳ್ಳಲಿದ್ದು, ಈ ನಾಡು ನುಡಿ ಸಮ್ಮೇಳನದ ಕುರಿತು ಅದರ ರೂವಾರಿ ಡಾ.ಎಂ.ಮೋಹನ ಆಳ್ವ ನೀಡಿದ ಸಂದರ್ಶನ.

alva
ಯಾವ ಚಿಂತನೆಯಿಂದ ನುಡಿಸಿರಿ?…
ಆಳ್ವಾಸ್ ನುಡಿಸಿರಿಯು ಕಳೆದ 12 ವರ್ಷಗಳಿಂದ ಪ್ರಯೋಗಶೀಲವಾಗಿ ಹಂತ ಹಂತವಾಗಿ ಹೊಸತನಗಳಿಗೆ ತೆರದುಕೊಂಡಿದೆ. ನಾಡು-ನುಡಿಯ ಮೂಲಕ ಮನಸ್ಸು ಕಟ್ಟುವಲ್ಲಿ ಸಮ್ಮೇಳನ ಸಾರ್ಥಕತೆಯನ್ನು ಕಂಡಿದೆ. ಈಗಾಗಲೇ ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆಗೆ ಪೂರಕವಾಗಿ ಕೆಲಸಗಳ ನಡೆದಿವೆ. ಸಮಗ್ರ ಕರ್ನಾಟಕದ ಚಿಂತನೆಯನ್ನು ನುಡಿಸಿರಿಯಲ್ಲಿ ಕಟ್ಟಿಕೊಡಬೇಕು ಎನ್ನುವ ನಮ್ಮ ಉದ್ದೇಶಕ್ಕೆ ಹೆಚ್ಚಿನ ಮಹತ್ವ ನೀಡಿದ್ದೇವೆ. ನುಡಿಸಿರಿಯ ವಿವಿಧ ರೀತಿಯ ಅಲಂಕಾರ, ಸಾಂಸ್ಕೃತಿಕ ವೈಭವದಲ್ಲೂ ವಿವಿಧ ಜಿಲ್ಲೆಗಳ ವಿಶೇಷತೆಗಳನ್ನು ಅನಾವರಣಗೊಳಿಸುವ ಪ್ರಯತ್ನ ಮಾಡಲಿದ್ದೇವೆ.

ಆಳ್ವಾಸ್ ನುಡಿಸಿರಿಯನ್ನು ಮೊದಲ ಹತ್ತು ವರ್ಷಗಳಲ್ಲಿ ಜನರ ಸೂಕ್ಷ್ಮವಾಗಿ ಗಮನಿಸಿ, ನಮ್ಮ ಆಹ್ವಾನಕ್ಕೆ ಮನ್ನಣೆ ನೀಡಿ ನಾಡಿನ ವಿವಿಧೆಡೆಗಳಿಂದ ಆಗಮಿಸುತ್ತಿದ್ದರು. ವಿಶ್ವನುಡಿಸಿರಿ ಬಳಿಕ ಜನರೇ ನಮ್ಮನ್ನು ಸಂಪರ್ಕಿಸಿ ನುಡಿಸಿರಿಯ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ನಾವು ಮಾಡಿರುವ ನುಡಿಸಿರಿ ಘಟಕ, ಸಮ್ಮೇಳನದ ಅಚ್ಚುಕಟ್ಟುತನದಿಂದ ಜನರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಈ ಸಲದ ನುಡಿಸಿರಿಯಲ್ಲಿ ಪ್ರತಿ ದಿನ ಸುಮಾರು 1ಲಕ್ಷ ಮಂದಿ ಬರುವ ನಿರೀಕ್ಷೆಯಿದೆ.

2018ರಲ್ಲಿ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ನಡೆಸಲು ಉದ್ದೇಶಿಸಿದ್ದು, ಇದಕ್ಕೆ ಪೂರಕವಾಗಿ ಈ ಸಲದ ಹಾಗೂ 2017ರ ನುಡಿಸಿರಿಯನ್ನು ಪೂರ್ವಭಾವಿಯಾಗಿ ತೆಗೆದುಕೊಂಡಿದ್ದೇವೆ. ಹಲವಾರು ಹೊಸತನ, ಸಾಧ್ಯತೆಗಳನ್ನು ವಿಶ್ವನುಡಿಸಿರಿಯಲ್ಲಿ ಮಾಡಲಿದ್ದೇವೆ. ವಿಶ್ವನುಡಿಸಿರಿಯಲ್ಲಿ ಸಮಗ್ರ ಕರ್ನಾಟಕದ ಚಿಂತನೆಯನ್ನು ಯೋಜನಬದ್ಧವಾಗಿ ಮಾಡಲಿದ್ದೇವೆ.

ಕನಸಿನ ವಿಶ್ವನುಡಿಸಿರಿ ಬಗ್ಗೆ
2013ರಲ್ಲಿ ನಡೆದ ವಿಶ್ವನುಡಿಸಿರಿಯ ಸಂದರ್ಭದಲ್ಲಿ ಮೂಡುಬಿದಿರೆಯಲ್ಲಿ ಒಂದು ವ್ಯವಸ್ಥಿತವಾದ ಕನ್ನಡ ಭವನ ಕಟ್ಟಬೇಕೆಂಬ ಸಂಕಲ್ಪ ಮಾಡಿದ್ದು, ಅದಕ್ಕೆ ಪೂರಕವಾಗಿ ಈಗಾಗಲೇ ಒಂದು ಕೋಟಿ ವೆಚ್ಚದಲ್ಲಿ ಭವನದ ಕಾಮಗಾರಿ ನಡೆದಿದೆ. 2018ರ ವಿಶ್ವನುಡಿಸಿರಿಯ ಮೊದಲು ಕನ್ನಡ ಭವನದ ಕಾಮಗಾರಿ ಮುಗಿಯಲಿದೆ. ಸುಮಾರು 1,500 ಆಸನ ವ್ಯವಸ್ಥೆಯಿರುವ ಸಭಾಂಗಣವನ್ನು ಅತ್ಯಂತ ವ್ಯವಸ್ಥಿತವಾಗಿ ರೂಪಿಸಲಾಗುವುದು. ಕನ್ನಡ ಭವನದಲ್ಲಿ ಮೂಡುಬಿದಿರೆ ಜನರ ಕಾರ್ಯಕ್ರಮಗಳಿಗೂ ಅವಕಾಶ ಕಲ್ಪಿಸಲಾಗುವುದು.

ಅವಿಭಜಿತ ದ.ಕ ಜಿಲ್ಲೆಯ ವಿದ್ಯಾರ್ಥಿಗಳ ಒಟ್ಟುಗೂಡಿಸಿ ನಡೆಸುತ್ತಿರುವ ಆಳ್ವಾಸ್ ವಿದ್ಯಾರ್ಥಿಸಿರಿಯನ್ನು ಮೇಲ್ದರ್ಜೆಗೇರಿಸಿ, ರಾಜ್ಯದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುವುದು. ವಿದ್ಯಾರ್ಥಿಸಿರಿ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಯ್ದ ಶಾಲೆಗಳ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು. ವಿದ್ಯಾರ್ಥಿಗಳ ಸೃಜನಶೀಲತೆಗೆ ವೇದಿಕೆಯಾಗಿರುವ ವಿದ್ಯಾರ್ಥಿಸಿರಿ ಮಕ್ಕಳಲ್ಲಿ ಕನ್ನಡಾಭಿಮಾನವನ್ನು ಮೂಡಿಸುತ್ತಿದೆ.

By Suddi9

Leave a Reply

Your email address will not be published. Required fields are marked *