ಮೂಡುಬಿದಿರೆ: ಪ್ರಶಾಂತ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಕೊಲೆ ಪ್ರಕರಣದಿಂದಾಗಿ ಮೂಡುಬಿದಿರೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸರು ಬಿಗಿ ಭದ್ರತೆ ನಡೆಸಿದ್ದಾರೆ.
ಕಳೆದ ಗುರುವಾರ ಮೈಸೂರು ಜೈಲಿನಲ್ಲಿ ಪ್ರಶಾಂತ್ ಕೊಲೆ ಆರೋಪಿ ಮುಸ್ತಾಫ ಕಾವೂರು ಎಂಬಾತನ ಹತ್ಯೆ ನಡೆದಿತ್ತು. ಈ ಕೊಲೆಯನ್ನು ಕಳೆದ ವರ್ಷ ಹತ್ಯೆಯಾಗಿದ್ದ ಪ್ರಶಾಂತ್ ಪೂಜಾರಿ ಆಪ್ತ ರೌಡಿ ಶೀಟರ್ ಬಾಂಬೆ ಕಿರಣ್ ಶೆಟ್ಟಿ ನಡೆಸಿದ್ದ. ಪ್ರಶಾಂತ್ ಹಿಂದುತ್ವಕ್ಕಾಗಿ ಪ್ರಾಣ ಕಳೆದುಕೊಂಡ ಎಂಬುದಾಗಿ ಬಿಂಬಿಸಲಾಗಿದ್ದು, ಸದ್ಯ ಆರೋಪಿ ಮುಸ್ತಾಫ ಕೂಡ ಕೊಲೆಯಾಗಿರುವುದರಿಂದ ಮತೀಯ ಗಲಭೆ ನಡೆಯುವ ಮುನ್ಸೂಚನೆ ಪಡೆದ ಪೋಲಿಸರು ಬಿಗಿ ಭದ್ರತೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಶಾಂತ್ ಹತ್ಯೆ ನಡೆದ ಸ್ಥಳ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿ ಪೋಲಿಸರನ್ನು ನಿಯೋಜಿಸಲಾಗಿದ್ದು, ಮೀಸಲು ಪಡೆಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಲ್ಲದೆ ಪೋಲಿಸರು ಅಲ್ಲಲ್ಲಿ ತಿರುಗಾಡುತಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.

