ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮಾಸ್ತಿಗುಡಿ ಚಿತ್ರೀಕರಣದ ವೇಳೆ ನಿಯಮ ಉಲ್ಲಂಘನೆ ಆಗಿದೆ ಅನ್ನೋ ಮಾತು ಕೇಳಿ ಬಂದಿದೆ. ಯಾಕಂದ್ರೆ, ಜಲಾಶಯದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡುವಾಗಲೇ ಜಲಮಂಡಳಿ ಕೆಲ ಷರತ್ತುಗಳನ್ನು ವಿಧಿಸಿತ್ತು. ಇಬ್ಬರು ಖಳನಟರ ದುರಂತ ಸಾವಿಗೆ ಹೊಣೆಯಾರು ಅನ್ನೋ ಪ್ರಶ್ನೆ ಎದುರಾಗಿದೆ. ಯಾಕೆಂದರೆ ಚಿತ್ರೀಕರಣದಲ್ಲಿ ನಿಯಮ ಉಲ್ಲಂಘನೆ ಕಂಡು ಬಂದಿದ್ದು, ಮತ್ತೊಂದೆಡೆ ಚಿತ್ರ ತಂಡದ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.

ನವೆಂಬರ್ 4 ರಂದು ಜಲಮಂಡಳಿ ವಿಧಿಸಿದ್ದ ಷರತ್ತು ಇಲ್ಲಿ ಉಲ್ಲಂಘನೆಯಾಗಿದೆ. ಜಲಮಂಡಳಿಯ ನಿತ್ಯದ ಚಟುವಟಿಕೆಗಳಿಗೆ ತೊಂದರೆ ಆಗಬಾರದು. ಜಲಮಂಡಳಿಯ ಆಸ್ತಿಗೆ ದಕ್ಕೆ ಮಾಡಬಾರದು ಹಾಗೂ ಚಿತ್ರೀಕರಣದ ಸ್ಥಳದ ಆಸುಪಾಸು ಸ್ವಚ್ಛತೆ ಕಾಪಾಡಬೇಕು ಅನ್ನೋ ಷರತ್ತನ್ನು ವಿಧಿಸಲಾಗಿತ್ತು. ಆದ್ರೆ ಮಾಸ್ತಿಗುಡಿ ಚಿತ್ರ ತಂಡವು ಮೊದಲ ಎರಡು ನಿಯಮವನ್ನು ಉಲ್ಲಂಘಿಸಿದೆ. ಚಿತ್ರತಂಡವು ಜಲಮಂಡಳಿ ವಿಧಿಸಿದ್ದ ಷರತ್ತು ಉಲ್ಲಂಘಿಸಿ ನೀರಿಗೆ ಇಳಿದೆ.

ಇನ್ನೂ ಜಲಮಂಡಳಿಯು ಚಿತ್ರೀಕರಣಕ್ಕೆ ಕೇವಲ ಅನುಮತಿಯಷ್ಟೇ ಕೊಟ್ಟಿರಲಿಲ್ಲ. ಬದಲಾಗಿ ಚಿತ್ರೀಕರಣ ತಂಡದ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಅನಸೂಯಾ ಎಂಬ ಸಹಾಯಕ ಇಂಜಿನಿಯರ್ ಒಬ್ಬರನ್ನು ಸ್ಥಳದಲ್ಲಿ ನೇಮಕ ಮಾಡಲಾಗಿತ್ತು. ಮಧ್ಯಾಹ್ನ ಸುಮಾರು 3.30 ಗಂಟೆಯವರೆಗೂ ಅನಸೂಯಾ ಸ್ಥಳದಲ್ಲಿದ್ರು. ಜಲಮಂಡಳಿ ಪ್ರಕಾರ ಚಿತ್ರೀಕರಣ ಮುಗಿವ ಹಂತದಲ್ಲಿ ಅಧಿಕಾರಿ ಅನಸೂಯಾ ಕಚೇರಿಗೆ ವಾಪಸಾಗಿದ್ದಾರೆ. ಅದಾದ ಬಳಿಕ ಚಿತ್ರತಂಡ ಈ ಸಾಹಸ ದೃಶ್ಯ ಚಿತ್ರೀಕರಣಕ್ಕೆ ಕೈ ಹಾಕಿದೆ.

ಚಿತ್ರ ತಂಡದ ವಿರುದ್ಧ ಕ್ರಿಮಿನಲ್ ಕೇಸ್:
ಇನ್ನೂ ಘಟನೆ ಸುದ್ದಿ ತಿಳಿಯುತ್ತಲೇ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಸ್ತಿಗುಡಿ ಚಿತ್ರತಂಡದ ವಿರುದ್ಧ ಸ್ವಯಂ ಪ್ರೇರಿತ ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳುವಂತೆ ಸೂಚಿಸಿದ್ರು. ಎಸ್ಪಿ ಸೂಚನೆ ಮೇರೆಗೆ ತಾವರೇಕೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಚಿತ್ರ ತಂಡ ನಿಯಮ ಉಲ್ಲಂಘಿಸಿದೆ. ಜೊತೆಗೆ ಚಿತ್ರ ತಂಡದ ವಿರುದ್ಧ ಕೇಸ್ ಕೂಡ ದಾಖಲಾಗಿದೆ. ಆದ್ರೆ, ಅಮಾಯಕ ಕಲಾವಿದರ ಪ್ರಾಣ ಬಲಿಯಾಗಿದೆ. ಇನ್ನು ಘಟನೆ ಸಂಬಂಧ ನಿನ್ನೆ ಮಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ತಪ್ಪಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ನಿರ್ಮಾಪಕ ಸುಂದರ್, ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿ ವರ್ಮಾ ವಿರುದ್ಧ ಕೇಸ್ದಲಾಗಿದ್ದು, ಸೆಕ್ಷನ್ 188 ಅಂದರೆ ಷರತ್ತುಗಳನ್ನು ಉಲ್ಲಂಘಿಸಿದ ಆರೋಪವಾಗಿದ್ದು, BWSSB ಅನುಮತಿ ಪತ್ರದಲ್ಲಿ ನಮೂದಿಸಿದ್ದ ಷರತ್ತುಗಳು ಚಿತ್ರತಂಡ ಉಲ್ಲಂಘಿಸಿದೆ. ಸೆಕ್ಷನ್ 304 ಅಂದರೆ ಉದ್ದೇಶವಿಲ್ಲದೆ ಕೊಲೆಗೈದ ಪ್ರಕರಣವಾಗಿದ್ದು, ಸೆಕ್ಷನ್ 304ರ ಆರೋಪ ಸಾಬೀತಾದರೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ದುರ್ಮರಣವಾದ ಘಟನೆಗೆ ಪ್ರತಿಕ್ರಿಯಿಸಿದ ದಯಾಳ್:
ಸಾಹಸ ನಿರ್ದೇಶಕ ರವಿವರ್ಮಾ ಅವರನ್ನು ಎರಡು ವರ್ಷ ನಿಷೇಧಿಸಬೇಕೆಂದು ನಿರ್ದೇಶಕ ಹಾಗೂ ನಿರ್ಮಾಪಕ ದಯಾಳ್ ಆಗ್ರಹಿಸಿದರು. ಮಾಸ್ತಿಗುಡಿ ಚಿತ್ರೀಕರಣದ ವೇಳೆ ಇಬ್ಬರು ನಟರ ದುರ್ಮರಣವಾದ ಘಟನೆಗೆ ಪ್ರತಿಕ್ರಿಯಿಸಿದ ದಯಾಳ್, ಈ ಘಟನೆಗೆ ಸ್ಟಂಟ್ ಮಾಸ್ಟರ್ ರವಿವರ್ಮಾರೇ ಹೊಣೆ ಎಂದು ಅಭಿಪ್ರಾಯಪಟ್ಟರು. ಸಾಕಷ್ಟು ಚಿತ್ರಗಳಿಗೆ ಕೆಲಸ ಮಾಡುವ ರವಿವರ್ಮಾ ಯಾವುದೇ ಪೂರ್ವಸಿದ್ಧತೆ(ಹೋಮ್’ವರ್ಕ್) ಇಲ್ಲದೆಯೇ ಶಾಟ್’ಗಳನ್ನು ರಚಿಸುತ್ತಾರೆ ಎಂದು ದಯಾಳ್ ಆರೋಪಿಸಿದರು.
ಈ ಘಟನೆ ವಿರುದ್ಧ ಖಂಡಿತವಾಗಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದ ದಯಾಳ್, ತಾನು ಒಬ್ಬ ನಿರ್ಮಾಪಕನಾಗಿ ರವಿವರ್ಮಾ ಅವರನ್ನು ಎರಡು ವರ್ಷ ಚಿತ್ರರಂಗದಿಂದ ನಿಷೇಧಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಹೇಳಿದರು.
ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾದ ಚಿತ್ರೀಕರಣ ವೇಳೆ ಒಂದು ಘಟನೆಯನ್ನು ದಯಾಳ್ ಉದಾಹರಣೆಯಾಗಿ ನೀಡಿದರು. ಸಾಹಸ ದೃಶ್ಯದ ಶೂಟಿಂಗ್ ವೇಳೆ ಸ್ಟಂಟ್’ಮ್ಯಾನ್’ವೊಬ್ಬನ ತಲೆಗೆ ಗಾಜು ಒಡೆದು ಸಾಕಷ್ಟು ರಕ್ತ ಸೋರುತ್ತಿರುತ್ತದೆ. ಆದರೆ, ರವಿವರ್ಮಾ ಇದಕ್ಕೆ ಕೇರ್ ಮಾಡದೇ ಮುಂದಿನ ದೃಶ್ಯದ ಚಿತ್ರೀಕರಣಕ್ಕೆ ಮುಂದಾಗುತ್ತಾರೆ. ಈ ಘಟನೆ ತನಗೆ ಬಹಳ ನೋವು ತಂದಿತ್ತು ಎಂದು ದಯಾಳ್ ಆ ಘಟನೆಯನ್ನು ಸುವರ್ಣನ್ಯೂಸ್ ಜೊತೆ ನೋವಿನಿಂದ ಹಂಚಿಕೊಂಡರು.
ದುನಿಯಾ ವಿಜಿ ಅಭಿನಯದ “ಮಾಸ್ತಿಗುಡಿ” ಸಿನಿಮಾಕ್ಕೆ ರವಿ ವರ್ಮಾ ಅವರೇ ಸಾಹಸ ನಿರ್ದೇಶಕರು. ಇವರ ಸ್ಟಂಟ್ ಡೈರೆಕ್ಷನ್’ನಲ್ಲೇ ಅಪಾಯಕಾರಿ ಹೆಲಿಕಾಪ್ಟರ್ ಜಂಪ್ ಘಟನೆ ನಡೆದದ್ದು. ಇಂಥ ಡೇಂಜರ್ ಸ್ಟಂಟ್ ಚಿತ್ರೀಕರಣಕ್ಕೆ ಬೇಕಾದ ಯಾವುದೇ ಸೇಫ್ಟಿ ಮೆಷರ್ಸನ್ನು ತೆಗೆದುಕೊಂಡಿರಲಿಲ್ಲವೆಂಬ ಆರೋಪವಿದೆ.ಸ್ಟಂಟ್ ಮಾಸ್ಟರ್ ರವಿವರ್ಮಾರನ್ನು ನಿಷೇಧಿಸಲು ನಿರ್ಮಾಪಕ ದಯಾಳ್ ಆಗ್ರಹ
ಚಿತ್ರರಂಗದ ದುರಂತ ಮನಃಸ್ಥಿತಿಯನ್ನು ಬಿಚ್ಚಿಟ್ಟಿ ರವಿಚಂದ್ರನ್:
ರವಿಚಂದ್ರನ್, “ಈ ಹುಡುಗರು ತಮಗೆ ಈಜು ಬರೋದಿಲ್ಲ, ಈ ಸ್ಟಂಟ್ ಮಾಡೋದಿಲ್ಲ ಎಂದು ಹೇಳಬಹುದಿತ್ತು. ಸ್ಟಂಟ್ ಮಾಡದೇ ಇದ್ದರೆ ಮುಂದಿನ ಸಿನಿಮಾಗಳಿಗೆ ಚಾನ್ಸ್ ಸಿಕ್ಕೋದಿಲ್ಲ ಎಂಬ ಭಯ ಅವರಿಗೆ. ಎಂಥದ್ದೇ ಸ್ಟಂಟ್ ಮಾಡಿದ್ರೂ ಯಾರೂ ಕೇರ್ ಮಾಡೋದಿಲ್ಲ. ಇನ್ನೂ ಕಷ್ಟದ ಸ್ಟಂಟ್ ಮಾಡಿಸ್ತಾರೆ ಅಷ್ಟೇ” ಎಂದು ಚಿತ್ರರಂಗದ ದುರಂತ ಮನಃಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
ಮಾಸ್ತಿಗುಡಿ ಚಿತ್ರತಂಡದವರಿಗೆ 6 ಪ್ರಶ್ನೆಗಳು:
ಜಲಾಶಯದಲ್ಲಿ ಶೂಟಿಂಗ್ ಮಾಡಬಾರದು, ಅದರಲ್ಲೂ ಏರಿಯಲ್ ಶಾಟ್ ತೆಗೆಯಬಾರದು ಎಂದು ಬಿಡಬ್ಲ್ಯೂಎಸ್’ಎಸ್’ಬಿ ಸ್ಪಷ್ಟವಾಗಿ ಹೇಳಿದ್ದರೂ ಆ ಕೆಲಸ ಮಾಡಿದ್ದು ಯಾಕೆ?
ಮಾಸ್ತಿಗುಡಿ ಚಿತ್ರೀಕರಣ ವೇಳೆ ಇಬ್ಬರು ಉದಯೋನ್ಮುಖ ನಟರು ದುರಂತ ಸಾವನ್ನಪ್ಪಿದ ಘಟನೆ ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ. ಈ ಘಟನೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಾಸ್ತಿಗುಡಿ ಚಿತ್ರತಂಡ ಇಂಥ ಕೆಲ ಪ್ರಮುಖ ಪ್ರಶ್ನೆಗಳನ್ನು ಉತ್ತರಿಸುತ್ತದಾ?
1) ಈಜು ಬಾರದವರನ್ನು ನೀರಿಗೆ ಧುಮುಕಿಸಿದ್ದು ಎಷ್ಟು ಸರಿ?
2) ಮೊದಲ ಮಹಡಿಯಿಂದ ಕೆಳಗೆ ನೋಡಲು ಭಯಪಡುವವನನ್ನು ಹೆಲಿಕಾಪ್ಟರ್’ನಿಂದ ಕೆಳಗೆ ಧುಮುಕಿಸಿದ್ದು ಯಾಕೆ?
3) ಜಲಾಶಯದಲ್ಲಿ ಶೂಟಿಂಗ್ ಮಾಡಬಾರದು, ಅದರಲ್ಲೂ ಏರಿಯಲ್ ಶಾಟ್ ತೆಗೆಯಬಾರದು ಎಂದು ಬಿಡಬ್ಲ್ಯೂಎಸ್’ಎಸ್’ಬಿ ಸ್ಪಷ್ಟವಾಗಿ ಹೇಳಿದ್ದರೂ ಆ ಕೆಲಸ ಮಾಡಿದ್ದು ಯಾಕೆ?
4) ದುರಂತ ಸಾವನ್ನಪ್ಪಿದ ರಾಘವ್ ಉದಯ್ ಮತ್ತು ಅನಿಲ್’ಗೆ ಯಾಕೆ ಲೈಫ್ ಜಾಕೆಟ್ ತೊಡಿಸಲಿಲ್ಲ?
5) ಅತ್ಯಗತ್ಯವಾದ ಸ್ಪೀಡ್ ಬೋಟ್ ಯಾಕೆ ಇಟ್ಟುಕೊಂಡಿರಲಿಲ್ಲ?
6) ಲೈಫ್ ಬೋಟನ್ನು ಸ್ಪಾಟ್ ಸಮೀಪದಲ್ಲಿರಿಸದೇ, ದಡದಲ್ಲಿ ಯಾಕೆ ಇಟ್ಟುಕೊಂಡಿದ್ದಿರಿ?
ಕೃಪೆ: ಸುವರ್ಣ ನ್ಯೂಸ್ ಟಿವಿ
