ಬಂಟ್ವಾಳ: ತಾಲ್ಲೂಕಿನ ಹಲವೆಡೆ ಮಂಗಳವಾರ ಸಂಜೆ ಸುರಿದ ಗುಡುಗು ಮತ್ತು ಮಿಂಚು ಸಹಿತ ದಿಢೀರ್ ಗಾಳಿ ಮಳೆಗೆ ಇಲ್ಲಿನ ಕೃಷಿಕರು ಸಹಿತ ಮೆಸ್ಕಾಂಗೆ ಅಪಾರ ನಷ್ಟ ಸಂಭವಿಸಿದೆ. ತಾಲ್ಲೂಕಿನ ಪುದು ಗ್ರಾಮದ ಕಲ್ಲಜಾಲು ಎಂಬಲ್ಲಿ ಸ್ಥಳೀಯ ನಿವಾಸಿ ಕುಂಞಪ್ಪ ಪೂಜಾರಿ ಮತ್ತು ರಾಮ ಪೂಜಾರಿ ಎಂಬವರ ಮನೆಗೆ ಸಿಡಿಲು ಬಡಿದು ಅಪಾರ ನಷ್ಟ ಸಂಭವಿಸಿದ್ದು, ಗ್ರಾಮ ಕರಣಿಕ ಪ್ರದೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಯಿಲ ಗ್ರಾಮದ ಚಿಂಗಲಚ್ಚಿಲ್ ನಿವಾಸಿ ನೋಣಯ ಸಪಲ್ಯ ಎಂಬವರ ಮನೆಗೆ ಸಿಡಿಲು ಬಡಿದು ಮನೆ ಗೋಡೆ ಬಿರುಕು ಬಿಟ್ಟು ವಿದ್ಯುತ್ ತಂತಿ ಮತ್ತಿತರ ಸಾಮಾಗ್ರಿ ಸುಟ್ಟು ಹೋಗಿದೆ. ಇದರಿಂದಾಗಿ ಸುಮಾರು ರೂ 50ಸಾವಿರಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಇಲ್ಲಿನ ಸುರೇಶ ಆಚಾರ್ಯ ಎಂಬವರ ಮನೆ ಮಾಡಿನ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ಅಪಾರ ನಷ್ಟವಾಗಿದೆ.
ಇನ್ನೊಂದೆಡೆ ಬಿ.ಸಿ.ರೋಡ್ ಬಸ್ನಿಲ್ದಾಣ ಬಳಿ ಒಂದು ವಿದ್ಯುತ್ ಪರಿವರ್ತಕ ಸಹಿತ ಪೊಳಲಿ ಮೆಸ್ಕಾಂ ಉಪವಿಭಾಗ ವ್ಯಾಪ್ತಿಯಲ್ಲಿ ಮೂರು ವಿದ್ಯುತ್ ಪರಿವರ್ತಕ ಸಹಿತ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಹೀಗೆ ಒಟ್ಟು ಐದು ವಿದ್ಯುತ್ ಪರಿವರ್ತಕವೊಂದು ಕೆಟ್ಟು ಹೋಗಿದೆ. ಇಲ್ಲಿನ ಕಡ್ತಾಲಬೆಟ್ಟು ಎಂಬಲ್ಲಿ ಒಂದು ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಕೈರಂಗಳ ಗ್ರಾಮದ ಮೋಂಟುಗೋಳಿ ಮರ ಬಿದ್ದು ಎರಡು ವಿದ್ಯುತ್ ಕಂಬ ಮುರಿದು ಬಿದ್ದಿದೆ. ಇದರಿಂದಾಗಿ ಮೆಸ್ಕಾಂಗೆ ಒಟ್ಟು ರೂ 1.50ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ. ಕೆಲವೆಡೆ ವಿದ್ಯುತ್ ಸಂಪರ್ಕ ಕೈಕೊಟ್ಟಿದ್ದು, ಬುಧವಾರ ದುರಸ್ತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಗುಡುಗು ಮಿಂಚಿನಿಂದ ಕೆಲವೆಡೆ ಸ್ಥಿರ ದೂರವಾಣಿ ಸಂಪರ್ಕ ಕೈಕೊಟ್ಟಿದೆ ಎಂದು ನಾಗರಿಕರು ದೂರಿಕೊಂಡಿದ್ದಾರೆ.



