ಮೂಡುಬಿದಿರೆ: ಕುಡುಬಿ(ಕುಣಬಿ) ಯುವಸೇನೆ ಕರ್ನಾಟಕ ರಾಜ್ಯ, ಕುಡುಬಿ ಜ್ಞಾನದೀಪ್ತಿ ಮಾಸಪತ್ರಿಕಾ ಬಳಗ ಮತ್ತು ಕುಡುಬಿ/ಕುಣಬಿ ಯೂತ್ ಫೆಡರೇಶನ್‍ನ ಸದಸ್ಯರು ಬಡ ಕುಟುಂಬವೊಂದಕ್ಕೆ ಆರ್ಥಿಕ ಹಾಗೂ ವಸ್ತು ರೂಪದಲ್ಲಿ ನೆರವು ನೀಡುವ ಮೂಲಕ ವಿಶಿಷ್ಟ ರೀತಿಯಲ್ಲಿ ದೀಪಾವಳಿಯನ್ನು ಆಚರಿಸಿಕೊಂಡರು.
ಸೋಮೇಶ್ವರ ಗ್ರಾಮ ಪಂಚಾಯಿತಿಯ ಕುಂಪಲದ ಹುಡ್ಕೋ ಕಾಲನಿಯ ನಿವಾಸಿ, ಮೂಲತಃ ಮಂಗಳೂರಿನ ಹಂಪನಕಟ್ಟೆಯ ಕುಡುಂಬಿ ಹಿತ್ತಲಿನ ಶ್ರೀನಿವಾಸ್ ಹಾಗೂ ಅವರ ಪತ್ನಿಯ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಪುತ್ರಿ ಬಿ.ಕಾಂ ಪದವಿಧರೆ ವನಿತಾರನ್ನು ಆಶ್ರಯಿಸಿದೆ. ಕುಟುಂಬ ತೀವ್ರ ತರಹದ ಬಡತನದಲ್ಲಿತ್ತು.
ಕುಡುಬಿ ಜನಾಂಗದ ಯುವ ಸಂಘಟನೆಯ ಪದಾಧಿಕಾರಿಗಳು ಸಂಕಷ್ಟಕ್ಕೆ ಸ್ಪಂದಿಸುವ ಬಗ್ಗೆ ನಿರ್ಧರಿಸಿ ಧನಸಂಗ್ರಾಹವನ್ನು ಮಾಡಿ ಈ ಸಲದ ದೀಪಾವಳಿಯನ್ನು ಈ ಕುಟುಂಬದ ಜೊತೆ ಆಚರಿಸುವ ಸಂಕಲ್ಪವನ್ನು ಮಾಡಿತು. ಫೇಸ್‍ಬುಕ್, ವಾಟ್ಸ್ ಅಪ್ ಗ್ರೂಪ್‍ಗಳನ್ನು ಸದುಪಯೋಗಪಡಿಸಿಕೊಂಡರು. ಅಶಕ್ತ ಕುಟುಂಬಕ್ಕೆ 11,000ರೂ ನಗದು ರೂಪಾದಲ್ಲಿ, ರೂ.1.5 ಲಕ್ಷ ಹಣವನ್ನು ದಾನಿಗಳ ನೆರವಿನೊಂದಿಗೆ ಶ್ರೀನಿವಾಸರ ಖಾತೆಗೆ ಜಮೆ ಮಾಡಲಾಯಿತು. ದಿನಬಳಕೆಯ ಅಗತ್ಯ ವಸ್ತುಗಳನ್ನು ಭಾನುವಾರ ವಿತರಿಸಿದರು. ಮೂಡುಬಿದಿರೆಯ ಮೇನಕಾ ಟೆಕ್ಸ್‍ಟೈಲ್ಸ್ ಮಾಲಕ ಸದಾಶಿವ ರಾವ್ ನೆಲ್ಲಿಮಾರ್‍ರವರು ಎಲ್ಲರಿಗೂ ಹೊಸಬಟ್ಟೆಯನ್ನು ನೀಡಿ ಪ್ರೋತ್ಸಾಹಿಸಿದ್ದಾರೆ.
ಕುಡುಬಿ ಮಾತೃ ಸಂಘದ ಉಪಾಧ್ಯಕ್ಷ, ನಿವೃತ್ತ ಪೋಲೀಸ್ ಅಧಿಕಾರಿ ಕೆ. ಭೋಜ ಗೌಡ ಬಂಡಸಾಲೆ, ಶ್ರೀ. ಕ್ಷೇ. ಧ. ಗ್ರಾ. ಯೋ. ಕೊಂಪದವು ವಲಯದ ಜನಜಾಗೃತಿ ಸಮಿತಿ ಸದಸ್ಯ ಮೋಹನ್ ಗೌಡ ಒಡ್ಡೂರು, ಕುಡುಬಿ ಜ್ಞಾನದೀಪ್ತಿ ಸಂಪಾದಕ ಲಿಂಗಪ್ಪ ಗೌಡ ನೀರ್ಕೇರೆ, ಕುಡುಬಿ ಜ್ಞಾನದೀಪ್ತಿ ಸಹಸಂಪಾದಕ ಮೋಹನ್ ಕುಮಾರ್ ಪುತ್ತೂರು, ದ.ಕ ಜಿಲ್ಲಾ ಕುಡುಬಿ ಯುವ ಸಮಿತಿಯ ಸದಸ್ಯರಾದ ಅಶೋಕ ಎಡಪದವು, ಪದ್ಮನಾಭ ಮಿಜಾರು ಯುವ ಮುಖಂಡ ಮಹೇಶ್ ಕುಕ್ಕುದಕಟ್ಟೆ ಮತ್ತು ಮಾಜಿ ಜಿ.ಪಂ ಸದಸ್ಯ ಸತೀಶ್ ಕುಂಪಲ, ಸ್ಥಳೀಯ ಸಮಾಜ ಸೇವಕ ಪ್ರವೀಣ್ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.

