ಬಂಟ್ವಾಳ: ಮುಲ್ಲರಪಟ್ಣ ಮಾರ್ಗದಂಗಡಿ ಫಲ್ಗುಣಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಶರೀಫ್ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶುಕ್ರವಾಸ ಸಂಜೆ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವಾನ ಹೇಳಿದರು.

r-2

ಶರೀಫ್ ಸಹೋದರ ಹಾಗೂ ಕುಟುಂಬಸ್ಥರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿ ಸಾಂತ್ವಾನ ಹೇಳಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾರ್ಗದಂಗಡಿಯಲ್ಲಿ ಬುಧವಾರ ನಡೆದ ಆಕಸ್ಮಿಕ ಘಟನೆಯಲ್ಲಿ ಇಲ್ಲಿನ ನಿವಾಸಿ ದಿ. ಎಂ.ಹಸನಬ್ಬರ ಪುತ್ರ ಶರೀಫ್ ಎಂಬಾತ ಮೃತಪಟ್ಟಿರುವ ಘಟನೆ ನನಗೆ ತೀವ್ರ ನೋವುಂಟುಮಾಡಿದೆ ಎಂದು ಹೇಳಿದರು.

t-15

ಘಟನೆ ಸಂಭವಿಸಿದ ದಿನ ನಾನು ಕ್ಯಾಬಿನೆಟ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿದ್ದೆ. ಇಲ್ಲಿದ್ದ ಪಕ್ಷದ ಮುಖಂಡರಿಂದ ಮಾಹಿತಿ ಲಭಿಸಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಜಿಲ್ಲಾಧಿಕಾರಿ ಜಗದೀಶ್‍ರಿಗೆ ಕರೆ ಮಾಡಿ ಪ್ರಕರಣವನ್ನು ನಿರ್ಲಕ್ಷ್ಯಿಸದೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಸೂಚಿಸಿದ್ದೆ ಎಂದು ಅವರು ಹೇಳಿದರು.

r-3

ಊರಿಗೆ ಮರಳಿದ ಬಳಿಕ ಘಟನೆಯ ಬಗ್ಗೆ ಸಮಗ್ರ ಮಾಹಿತಿ ಪಡೆದಿದ್ದು ಮೃತ ಶರೀಫ್ ಕುಟುಂಬಕ್ಕೆ ನ್ಯಾಯೋಚಿತ ಪರಿಹಾರ ನೀಡಲು ಪ್ರಯತ್ನ ನಡೆಸಲಾಗುವುದು. ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದು ಪ್ರಮಾಣಿಕ ತನಿಖೆ ನಡೆಸುವಂತೆ ಮತ್ತೊಮ್ಮೆ ಎಸ್ಪಿ ಹಾಗೂ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಜನರ ಭಾವನೆಗೆ ಪೂರಕವಾಗಿ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ ಎಂದು ಅವರು ಹೇಳಿದರು.

rai

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *