ಬಂಟ್ವಾಳ: ಮುಲ್ಲರಪಟ್ಣದ ಫಲ್ಗುಣಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಶರೀಫ್ ಮನೆಗೆ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಗುರುವಾರ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವಾನ ಹೇಳಿದರು.
ಶರೀಫ್ ಕುಟುಂಬಸ್ಥರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿ ಸಾಂತ್ವಾನ ಹೇಳಿದ ಅವರು, ರಾಜ್ಯ ಸರಕಾರ ಸಮರ್ಪಕ ಮರಳು ನೀತಿ ಜಾರಿಗೊಳಿಸದಿರುವುದರಿಂದ ಜಿಲ್ಲೆಯಲ್ಲಿ ವ್ಯಾಪಕ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅಕ್ರಮ ಮರಳುಗಾರಿಕೆಯಲ್ಲಿ ಉದ್ಯಮಿಗಳು ಬೇಕಾದಷ್ಟು ಹಣ ಮಾಡಿದರೆ ಹೊಟ್ಟೆಪಾಡಿಗೆ ದುಡಿಯುವ ಬಡ ಹಾಗೂ ಅಮಾಯಕ ಕಾರ್ಮಿಕರು ಬಲಿಯಾಗುತ್ತಿದ್ದಾರೆ. ಆದ್ದರಿಂದ ಸರಕಾರ ಕೂಡಲೇ ಸಮರ್ಪಕ ಮರಳು ನೀತಿಯನ್ನು ಜಾರಿಗೆ ತರಬೇಕು ಎಂದ ಅವರು ಮೃತ ಶರೀಫ್ ಕುಟುಂಬಕ್ಕೆ ನ್ಯಾಯಯುಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
