ಮೂಡುಬಿದಿರೆ : ಅಪೂರ್ವ ರಥಶಿಲ್ಪಿ, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಗೌರವಗಳಿಗೆ ಪಾತ್ರರಾಗಿದ್ದ, ಮೂಡುಬಿದಿರೆ ಸಮೀಪದ ಬಡಗಮಿಜಾರಿನ ಅಶ್ವತ್ಥಪುರ ಬಾಬುರಾಯ ಆಚಾರ್ಯ(70 ವ) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನ ಹೊಂದಿದರು.

mbd_oct15_4

ಮೂಡುಬಿದಿರೆ ಗುರುಮಠ ಕಾಳಿಕಾಂಬಾ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾಗಿ, ಜೀರ್ಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷ, ವಿಶ್ವಕರ್ಮ ಸಮಾಜದ ಅಶ್ವತ್ಥಪುರ ಕೂಡುವಳಿಕೆಯ ಮೋಕ್ತೇಸರರಾಗಿ ಸೇವೆ ಸಲ್ಲಿಸಿರುವ ಅವರು ಪತ್ನಿ, ಇಬ್ಬರು ಪುತ್ರರು, 3 ಪುತ್ರಿಯರನ್ನು ಅಗಲಿದ್ದಾರೆ.

ರಚಿಸಿದ ರಥಶಿಲ್ಪಗಳು : ಮೂಡುಬಿದಿರೆ ಚೌಟರ ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಮನೋಹರ ಶಿಲ್ಪಕಲೆಯ ಆಳು ಪಲ್ಲಕ್ಕಿ ರಥ, ಬಜ್ಪೆ ಆದ್ಯಪಾಡಿಯ ಪುಷ್ಪಕ ವಿಮಾನ, ಮಿಜಾರು ದೈವಸ್ಥಾನದ ಗರಡಿಗಳಲ್ಲಿ ಕೋಟಿಚೆನ್ನಯ, ಮಾನಿಬಾಲೆಯ ಬಿಂಬಗಳು, ಮೈಸೂರು ಕನ್ನಂಬಾಡಿಯ ಕಾಳಮ್ಮ ದೇವಸ್ಥಾನದ ರಥ, ಮಂಗಳೂರು ತಾಲೂಕಿನ ಕುಳಾಯಿ ಶ್ರೀ ವಿಷ್ಣುಮೂರ್ತಿ ದಿವ್ಯ ಸನ್ನಿಧಿಯ ದಿವ್ಯ ರಥ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಯಕ್ಷಗಾನ ಮೇಳಕ್ಕೆ ಮೂಕಾಂಬಿಕಾ ಬಿಂಬ, ಬೆಂಗಳೂರು ಅರಸಿನ ಕುಂಟೆ ವಿಶ್ವ ಶಾಂತಿ ಆಶ್ರಮದ ಹೂವಿನ ರಥ, ಅಶ್ವತ್ಥಪುರ ಸೀತಾರಾಮ ಚಂದ್ರ ದೇವಸ್ಥಾನದ ಹೂವಿನ ರಥ, ಮಂಗಳೂರು ಪೊಳಲಿ ಅಮ್ಮುಂಜೆ ಸದಾಶಿವ ದೇವಸ್ಥಾನದ ರಥ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪಂಚಮಿ ರಥ ಸಹಿತ ಒಟ್ಟು 40ಕ್ಕೂ ಹೆಚ್ಚು ರಥಶಿಲ್ಪಗಳನ್ನು ರಚಿಸಿ ಗಮನ ಸೆಳೆದಿದ್ದರು.

ದೇವಾಲಯ ಕಾಷ್ಠಶಿಲ್ಪಗಳು : ಮಂಗಳೂರು ಕಾಳಿಕಾಂಬಾ ದೇವಸ್ಥಾನದ ಅಪೂರ್ವ ಕಾಷ್ಠ ಶಿಲ್ಪದ ಕೆತ್ತನೆಗಳು ಮತ್ತು ಕಾಪು ಲಕ್ಷ್ಮೀ ಜನಾರ್ಧನ ದೇವಸ್ಥಾನದ ಗರ್ಭಗೃಹದ ಕಾಷ್ಠಶಿಲ್ಪಗಳನ್ನು ರಚಿಸಿದ್ದರು.

ಮೂರ್ತಿ ಶಿಲ್ಪಗಳು : ಕರಾವಳಿಯ ಪ್ರಮುಖ ಗರೋಡಿಗಳ ಮಾನಿಬಾಲೆ, ಹುಲಿಬಂಡಿ, ಸಿರಿ, ಅಬ್ಬಗದಾರಗ, ನಂದಿಕೋಣ, ಕುದುರೆ ಬಂಡಿ, ಕೋಟಿ-ಚೆನ್ನಯರ ಮೂರ್ತಿ ಶಿಲ್ಪಗಳು, ದೇವರ ಪಲ್ಲಕ್ಕಿಗಳು ಹಾಗೂ ನೂರಾರು ದಶಾವತಾರದ ಬಾಗಿಲುಗಳು ಮತ್ತು ದೇವಾಲಯಗಳ ಹೆಬ್ಬಾಗಿಲುಗಳ ನಿರ್ಮಾಣದಲ್ಲಿ ಗುರುತಿಸಿಕೊಂಡಿದ್ದರು.

ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2014ನೇ ಸಾಲಿನ ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕಾರ್ಕಳ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ, ದ.ಕ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ ಹಾಗೂ ತೆಂಕಮಿಜಾರು ಗ್ರಾ.ಪಂನಿಂದ `ಗ್ರಾಮ ಸಭಾ ಗೌರವ’ ಬೆಂಗಳೂರಿನ ವಿಶ್ವ ವಿಠಲ ಸೇವಾ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

By suddi9

Leave a Reply

Your email address will not be published. Required fields are marked *