ಸುದ್ದಿ9ಕೈಕಂಬ: ಈ ಬಾರಿಯ ಕಂದಾವರ ಗ್ರಾಮ ಪಂಚಾಯತ್ ಇದರ ಗ್ರಾಮಸಭೆ ಬುಧವಾರ ಪೂರ್ವಾಹ್ನ ನಡೆಯಿತು. ಈ ಸಂದರ್ಭದಲ್ಲಿ ಆಗಮಿಸಿದ್ದ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವಾರು ವಿಚಾರಗಳು ಚರ್ಚೆಗೆ ಬಂದವು.
ರೇಷನ್ ಕಾರ್ಡ್ ಸಮಸ್ಯೆ ಇನ್ನೂ ಪರಿಹಾರಗೊಂಡಿಲ್ಲ. ಅಲ್ಲದೆ ಅನ್ನಭಾಗ್ಯ ಯೋಜನೆಯ ಅಕ್ಕಿ ಕಳಪೆಯಾಗಿದ್ದು ಊಟ ಮಾಡಲಿಕ್ಕಾಗುವುದಿಲ್ಲ. ಅಲ್ಲದೆ ಕೆಲವು ರೇಷನ್ ಅಂಗಡಿಗಳಲ್ಲಿ ತಿಂಗಳ 10ರ ನಂತರ ಅಕ್ಕಿ ಸಿಗುವುದಿಲ್ಲ , ರೇಷನ್ ಮುಗಿದಿದೆ ಎಂದು ರೇಷನ್ ಅಂಗಡಿಯಲ್ಲಿ ವಾಪಸ್ ಕಳುಹಿಸುತ್ತಾರೆ . ಅಕ್ಕಿಗೆ 15 ರೂ ಆದರೂ ಪರವಾಗಿಲ್ಲ. ಉತ್ತಮ ದರ್ಜೆಯ ಅಕ್ಕಿಯನ್ನು ಬಟವಾಡೆ ಮಾಡಿ ಎಂಬ ಗ್ರಮಾಸ್ಥರ ಆಗ್ರಹಕ್ಕೆ ಉತ್ತರಿಸಿದ ಆರೋಗ್ಯಾಧಿಕಾರಿ ವಾಸು ಅವರು ಅಕ್ಕಿ ಉತ್ತಮ ದರ್ಜೆಯದ್ದೇ ಆಗಿದೆ. ಉತ್ತರ ಕರ್ನಾಟಕ ಜನತೆಗೆ ಈ ಅಕ್ಕಿ ಯೋಗ್ಯವಾಗಿದ್ದು ದಕ್ಷಿಣ ಕನ್ನಡದವರು ಈ ಅಕ್ಕಿಯನ್ನು ಉಣ್ಣುವುದಿಲ್ಲ. ಇಲ್ಲಿನವರು ಕಜೆ ಅಕ್ಕಿಯ ಉಟ ಮಾಡಿ ಬದಲಿ ಅಕ್ಕಿ ನೀಡುವ ಬಗ್ಗೆ ಸರಕಾರ ಚ ರ್ಚೆ ನಡೆಸಲಿದೆ. ರೇಷನ್ ಸಮಸ್ಯೆ ಬಂದರೆ ನಮ್ಮನ್ನು ಸಂಪರ್ಕಿಸಿ ಎಂದು ಸಮಜಾಯಿಷಿ ನೀಡಿದರು. ಕಂದಾವರ ಬೈಲಿಗೆ ಇದುವರೆಗೂ ಬಸ್ ಸೌಲಭ್ಯ ಆಗಿಲ್ಲ. ನಾವಿಂದು ನಡೆದಾಡಿ ಸುಸ್ತಾಗುತ್ತಿದ್ದೇವೆ. ಇದು ಕೈಕಂಬದಿಂದ ಬಜ್ಪೆ ವಿಮಾನ ನಿಲ್ದಾಣ ಕ್ಕೆ ಹೋಗುವ ರಸ್ತೆ. ಅದಾಗ್ಯೂ ಈ ರಸ್ತೆಯ ಬಗ್ಗೆ ನಿರ್ಲಕ್ಷ್ಯ ಯಾಕೆ? ಎಂಬ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಪಂ. ಸದಸ್ಯೆ ಯಶವಂತಿ ಆಳ್ವ ಉತ್ತರಿಸಿ ಈ ರಸ್ತೆ ಬಸ್ ಹೋಗುವ ಸ್ಥಿತಿಯಲ್ಲಿಲ್ಲ. ಯಾರಾದರೂ ಗ್ರಾಮಸ್ಥರು ಮಿನಿ ಬಸ್ ಹಾಕುವವರಿದ್ದರೆ ಹಾಕಿಸಿರಿ. ಪರ್ಮಿಟ್ ನಾನು ತೆಗೆಸಿಕೊಡುತ್ತೇನೆ ಎಂದು ಭರವಸೆ ನೀಡಿದರು. ಕೈಕಂಬದ ಜೆಇ ಜಗದೀಶ್ ಮೂರ್ತಿಯವರು ವೇದಿಕೆಯಲ್ಲಿರುವಾಗಲೇ ಕರೆಂಟ್ ಕೈಕೊಟ್ಟಿತು. ಇದನ್ನು ಕಂಡ ಗ್ರಾಮಸ್ಥರು ಹೋ ಎಂದು ಬೊಬ್ಬಿಟ್ಟರು. ಇದು ಕೈಕಂಬದಲ್ಲಿ ಕಾಡುತ್ತಿರುವ ವಿದ್ಯುತ್ ಸಮಸ್ಯೆಗೆ ಗ್ರಾಮಸ್ಥರು ಕೋರಸ್ನಲ್ಲಿ ನೀಡಿದ ವ್ಯಂಗ್ಯವಾಗಿತ್ತು. ಗ್ರಾಮಸ್ಥರು ಜೆಇ ಅಂತಿಮವಾಗಿ ಮಾತಾಡಬೇಕು ಎಂದು ಪಟ್ಟುಹಿಡಿದಿದ್ದಂತೆ ಅವರು ಕೊನೆಕ್ಷಣದಲ್ಲಿ ಮಾತಾಡಿದರು. ಈ ಸಭೆ ಪಂ. ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಭೆಯಲ್ಲಿ ಜಿ.ಪಂ ಸದಸ್ಯೆ ಜಾನ್ಸನ್ ಲೋಬೋ, ತಾ. ಪಂಚಾಯತ್ ಹಾಗೂ ಗ್ರಾಮ ಪಂ ಸದಸ್ಯರು ಪಿಡಿಓ ರೋಹಿಣಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
