ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಮತ್ತು ಮರಳು ಸಾಗಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ ಜಿಲ್ಲಾಡಳಿತ ವಿಧಿಸಿರುವ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಜಿಲ್ಲೆಯಾದ್ಯಂತ ಮರಳುಗಾರಿಕೆ ಹಾಗೂ ಸಾಗಾಟ ನಿರಾತಂಕವಾಗಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ.

????

ಜಿಲ್ಲೆಯ ಜೀವನದಿ ನೇತ್ರಾವತಿ ಮತ್ತು ಪಲ್ಗುಣಿ ನದಿ ಪಾತ್ರದಲ್ಲಿ ಕಾನೂನಿನ ಭಯವೇ ಇಲ್ಲದೆ ನಿರಾತಂಕವಾಗಿ ಭಾರೀ ಮರಳುಗಾರಿಕೆ ನಡೆಯುತ್ತಿದೆ. ಯಾಂತ್ರೀಕೃತ ಮರಳುಗಾರಿಕೆಯನ್ನು ಕಾನೂನು ಬದ್ದವಾಗಿ ನಿರ್ಬಂಧಿಸಲಾಗಿದ್ದರೂ ನದಿಯಲ್ಲಿ ಜೆಸಿಬಿ, ಕ್ರೇನ್, ಹೂಳೆತ್ತುವ ಯಂತ್ರಗಳನ್ನು ಬಳಸಿ ಪ್ರಾಕೃತಿಕ ಸಂಪತ್ತಾದ ಮರಳನ್ನು ದೋಚಲಾಗುತ್ತಿದೆ. ಬಂಟ್ವಾಳ ತಾಲೂಕಿನ ಫರಂಗಿಪೇಟೆ, ಹತ್ತನೆಮೈಲುಗಲ್ಲು, ಮಾರಿಪಳ್ಳ, ಕೆಳಗಿನ ತುಂಬೆ, ತುಂಬೆ, ವಳವೂರು, ಬ್ರಹ್ಮರಕೊಟ್ಲು, ತಲಪಾಡಿ, ಶಾಂತಿ ಅಂಗಡಿ, ಕೈಕುಂಜೆ, ಗೂಡಿನಬಳಿ, ಸರಪಾಡಿ, ಅಜಿಲಮೊಗರು, ಶಂಭೂರು, ಮೂಲ್ಲರಪಟ್ನ ಸೇರಿದಂತೆ ಜಿಲ್ಲೆಯ ನೇತ್ರಾವತಿ ಮತ್ತು ಪಲ್ಗುಣಿ ನದಿಯಿಂದ ಮರಳು ಎತ್ತಲಾಗುತ್ತಿದೆ. ಜಿಲ್ಲಾಡಳಿತ ವಿಧಿಸಿದ್ದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಮರಳುಗಾರಿಕೆ ನಡೆಯುತ್ತಿದ್ದರೂ ಕೂಡ ಮರಳು ದಂಧೆಕೋರರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಜರಗಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

????

ಪ್ರಸ್ತುತ ವರ್ಷದಲ್ಲಿ ಮಳೆ ಕ್ಷೀಣಿಸಿದ್ದರಿಂದ ನೇತ್ರಾವತಿ ಮತ್ತು ಪಲ್ಗುಣಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು ಆಗಸ್ಟ್ ತಿಂಗಳಲ್ಲೇ ಮರಳು ಗೋಚರಿಸತೊಡಗಿದೆ. ಇದು ಮರಳು ದಂಧೆಕೋರರಿಗೆ ವರದಾನವಾಗಿದ್ದು ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಪ್ರಾರಂಭವಾಗುತ್ತಿದ್ದ ಮರಳು ದಂಧೆ ಈ ಬಾರಿ ಆಗಷ್ಟ್ ತಿಂಗಳಲ್ಲೇ ಆರಂಭಗೊಂಡಿದೆ. ಜಿಲ್ಲಾ, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯ ಸಹಕಾರದಲ್ಲೇ ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳು ಜಿಲ್ಲಾದ್ಯಂತ ಮರಳುಗಾರಿಕೆಯಲ್ಲಿ ತೊಡಗಿದ್ದಾರೆ. ಬಡ ವ್ಯಕ್ತಿಯೊಬ್ಬ ತನ್ನ ಉಪಯೋಗಕ್ಕಾಗಿ ನದಿಯಿಂದ ಒಂದು ಪಿಕಪ್ ಮರಳು ಸಾಗಟ ಮಾಡಿದರೆ ತಕ್ಷಣ ವಾಹನವನ್ನು ವಶಕ್ಕೆ ಪಡೆದು ಕೇಸ್ ಹಾಕುವ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಪ್ರಭಾವಿ ವ್ಯಕ್ತಿಗಳು ಹಗಲು ರಾತ್ರಿ ಎನ್ನದೆ ಮರಳು ದೋಚುತ್ತಿರುವುದು ಕಂಡರೂ ಕಾಣದಂತೆ ನಟಿಸುತ್ತಿರುವುದು ಸಾರ್ವಜನಿಕರನ್ನು ಶಂಸಯಕ್ಕೀಡು ಮಾಡಿದೆ.

????

ಕೃತಕ ಅಭಾವ: ನೇತ್ರಾವತಿ ಮತ್ತು ಪಲ್ಗುಣಿ ನದಿಯಲ್ಲಿ ದೋಣಿ, ಹಿಟಚಿ, ಜೆಸಿಬಿ, ಕ್ರೇನ್ ಮತ್ತು ಹೂಳೆತ್ತುವ ಯಂತ್ರಗಳ ಮೂಲಕ ಮರಳನ್ನು ಎತ್ತಿ ಟಿಪ್ಪರ್, ಪಿಕಪ್‍ಗಳ ಮೂಲಕ ಗೌಪ್ಯ ಸ್ಥಳಗಳಲ್ಲಿ ದಾಸ್ತಾನಿಡಲಾಗುತ್ತಿದೆ. ಅಲ್ಲಿಂದ 10, 12 ಚಕ್ರಗಳ ಲಾರಿಗಳ ಮೂಲಕ ಕೇರಳ, ಬೆಂಗಳೂರು ಸೇರಿದಂತೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಗೆ ಸಾಗಾಟ ಮಾಡಿ ದುಬಾರಿ ಬೆಲೆಗೆ ಮರಳನ್ನು ಮಾರಾಟ ಮಾಡಲಾಗುತ್ತಿದೆ. ಮರಳು ದಂಧೆಕೋರರು ಸ್ಥಳೀಯವಾಗಿ ಮರಳು ಮಾರಾಟ ಮಾಡದೆ ಹೊರ ಜಿಲ್ಲೆ, ರಾಜ್ಯಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡುವುದರಿಂದ ಜಿಲ್ಲೆಯಲ್ಲಿ ಮರಳಿನ ಕೃತಕ ಅಭಾವ ಸೃಷ್ಟಿಯಾಗಿದೆ. ಬಡವರು, ಮಧ್ಯಮ ವರ್ಗದ ಜನರು ಮನೆ ಕಟ್ಟಲು ಮರಳಿಗಾಗಿ ಪರದಾಡುತ್ತಿದ್ದು ಲೋಡ್ ಮರಳಿಗೆ 10ರಿಂದ 15 ಸಾವಿರ ರೂಪಾಯಿ ಬೆಲೆ ನೀಡಿದರೂ ಮರಳು ಲಭ್ಯವಾಗುತ್ತಿಲ್ಲ.

????

ಅಪಾಯದಲ್ಲಿ ಸೇತುವೆಗಳು!: ಸೇತುವೆಗಳ ಸುರಕ್ಷತೆಯ ದೃಷ್ಟಿಯಿಂದ ಸೇತುವೆಯ ಇಕ್ಕೆಲಗಳ 500 ಮೀಟರ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಕಾನೂನು ಪ್ರಕಾರ ನಿಷೇಧವಿದೆ. ಆದರೆ ಬಂಟ್ವಾಳ ತಾಲೂಕಿನ ಪ್ರಮುಖ ಸೇತುವೆಗಳ ಅಡಿ ಭಾಗದಲ್ಲೇ ದೋಣಿ, ಹಿಟಚಿ, ಜೆಸಿಬಿ, ಹೂಳೆತ್ತುವ ಯಂತ್ರಗಳ ಮೂಲಕ ಮರಳು ಎತ್ತಲಾಗುತ್ತಿದೆ. ಸೇತುವೆಯ ಅಡಿ ಭಾಗದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಮರಳುಗಾರಿಕೆಯಿಂದ ಸೇತುವೆಗಳ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಭೀತಿ ಉಂಟಾಗಿದೆ. ಸೇತುವೆಗಳ ಎರಡೂ ಭಾಗದ 500 ಮೀಟರ್ ಇಕ್ಕೆಲಗಳಲ್ಲಿ ಮರಳುಗಾರಿಕೆ ನಡೆಸುವವರ ವಿರುದ್ಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜರಗಿಸಬೇಕಿದೆ.

ಎಂಆರ್‍ಪಿಎಲ್ ಪೈಪ್‍ಗೆ ಹಾನಿ: ಬಂಟ್ವಾಳ ತಾಲೂಕಿನ ಮುಲ್ಲರಪಟ್ನ ಪಲ್ಗುಣಿ ನದಿಯ ಸೇತುವೆಯ ಅಡಿ ಭಾಗದಲ್ಲಿ ನಡೆಯುತ್ತಿರುವ ಮರಳು ದಂಧೆಕೋರರ ಲಾರಿಗಳು ಸಂಚಾರಿಸಿ ಎಂಆರ್‍ಪಿಎಲ್‍ಗೆ ನೀರು ಪೂರೈಸುವ ಪೈಪ್ ಒಡೆದು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಂಭೂರು ನೇತ್ರಾವತಿ ನದಿ ನೀರನ್ನು ಬೃಹತ್ ಪೈಪ್‍ಗಳ ಮೂಲಕ ಎಂಆರ್‍ಪಿಎಲ್‍ಗೆ ಪೂರೈಸಲಾಗುತ್ತದೆ. ಈ ಪೈಪ್‍ಗಳು ಮುಲ್ಲರಪಟ್ನ ಎಂಬಲ್ಲಿ ಪಲ್ಗುಣಿ ನದಿಯ ಮೂಲಕ ಹಾದುಹೋಗಿದೆ. ನೀರಿನ ಹರಿವಿನಿಂದ ಪೈಪ್ ಹಾನಿ ಉಂಟಾಗದಂತೆ ಪೈಪ್ ಮೇಲೆ ಕಾಂಕ್ರಿಟ್ ಹಾಕಲಾಗಿದೆ. ಈ ಕಾಂಕ್ರಿಟ್ ಮೇಲೆ ಮರಳು ಲಾರಿಗಳು ಸಂಚಾರಿಸುವುದರಿಂದ ಪೈಪ್ ಒಡೆದು ಎಂಆರ್‍ಪಿಎಲ್‍ಗೆ ನೀರು ಪೂರೈಕೆ ನಿಂತುಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೀಗ ಹಾನಿಗೊಂಡಿರುವ ಪೈಪ್‍ಗಳ ದುರಸ್ಥಿ ಕಾರ್ಯ ಭರದಿಂದ ಸಾಗಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಪೈಪ್ ಕಾಮಗಾರಿಗಾಗಿ ಪಲ್ಗುಣಿ ನದಿಗೆ ನೂರಾರು ಲೋಡ್ ಮಣ್ಣು, ಬಂಡೆಕಲ್ಲುಗಳನ್ನು ಹಾಕಲಾಗಿದ್ದು ಇದರಿಂದಾಗಿ ಇಡೀ ನದಿಯೇ ಮಲಿನಗೊಂಡಿದೆ.

By suddi9

Leave a Reply

Your email address will not be published. Required fields are marked *