ಮೂಡುಬಿದಿರೆ: ಮಾನವನ ಅನಿಯಂತ್ರಿತ ಹಾಗೂ ಅಜ್ಞಾನದ ಚಟುವಟಿಕೆಗಳಿಂದ ಪ್ರಕೃತಿಯಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಭೂಮಿಯನ್ನು ತನಗಿಷ್ಟ ಬಂದಂತೆ ಬಳಸಿಕೊಂಡು ಅವಸಾನಗೊಳಿಸುತ್ತಿದ್ದಾನೆ. ತನ್ನ ಜೀವಕ್ಕಿಂತ ತನಗೆ ಬದುಕಲು ಅವಕಾಶ ಮಾಡಿಕೊಟ್ಟ ಪ್ರಕೃತಿ ದೊಡ್ಡದು ಎಂಬುದನ್ನು ಮಾನವ ಮೊದಲು ಅರಿಯಬೇಕು ಎಂದು ಬೆಂಗಳೂರು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಯನ್ಸ್‍ನ ವಿಜ್ಞಾನಿ ಪ್ರೊ.ಎಂ.ಡಿ. ಸುಭಾಷ್ ಚಂದ್ರನ್ ತಿಳಿಸಿದರು.
ಪಶ್ಚಿಮಘಟ್ಟದಿಂದ ತೊಡಗಿ ಪಶ್ಚಿಮ ಕರಾವಳಿ ವರೆಗಿನ ಸಸ್ಯ, ಜೀವ ಪ್ರಭೇದ, ನೀರು ಸೇರಿದಂತೆ ಪರಿಸರ ಚಿಂತನೆಯ `ಲೇಕ್-2016’ರ ಅಂತಿಮ ಸಮಾವೇಶ ಡಿ. 28ರಿಂದ 30ರವರೆಗೆ ಆಳ್ವಾಸ್ ಕಾಲೇಜಿನಲ್ಲಿ ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ಬೆಂಗಳೂರಿನ ಸೆಂಟರ್ ಫಾರ್ ಇಕೋಲಾಜಿಕಲ್ ಸಯನ್ಸ್, ಐಐಎಸ್ಸಿ, ಮೂಡುಬಿದಿರೆಯ ಆಳ್ವಾಸ್ ಕಾಲೇಜು, ಮಿಜಾರ್‍ನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾಗಿರಿಯ ಕುವೆಂಪು ಸಭಾಭವನದಲ್ಲಿ ನಡೆದ `ಲೇಕ್-2016: ಇವ್ಯಾಲ್ಯೂವೇಶನ್ ಆಫ್ ರಿಸರ್ಚ್ ಪೇಪರ್ಸ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಸ್ತುತ ಮಾನವ ತನ್ನ ನೆರೆಹೊರೆಯವರೊಂದಿಗೆ ನೀರಿಗಾಗಿ ಕಾದಾಡುತ್ತಿರುವ ಸನ್ನಿವೇಶದಲ್ಲಿ ಪ್ರಕೃತಿಯ ಮೇಲೆ ತನ್ನಿಂದಾಗುತ್ತಿರುವ ಶೋಷಣೆಯೇ ಇದಕ್ಕೆಲ್ಲ ಕಾರಣ ಎಂಬುದನ್ನು ಇನ್ನೂ ಅರಿತಿಲ್ಲ ಎಂದು ಅವರು ತಿಳಿಸಿದರು.
ಐಐಎಸ್‍ಸ್ಸಿಯ ಇನ್ನೋರ್ವ ವಿಜ್ಞಾನಿ ಡಾ.ಹರೀಶ್ ಭಟ್, ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಸಂಶೋಧನ ವಿಷಯಗಳನ್ನು ಮೌಲ್ಯ ಮಾಪನ ಮಾಡಿ, ಕಂಡು ಬಂದ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಂತೆ ತಿಳಿಸಿ, ಮುಂದಿನ ಹಂತದ ತಯಾರಿಗೆ ಮಾರ್ಗದರ್ಶನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಜ್ಞಾನ ಹಾಗೂ ಕಲಿಕಾ ಮನೋಭಾವ ವೃದ್ಧಿಸುವ ಸಲುವಾಗಿ ಇಂಥ ಕಾರ್ಯಕ್ರಮಗಳನ್ನು ಆಳ್ವಾಸ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ 9 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 51 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿ ಒಟ್ಟು 25 ವಿಷಯಗಳ ಮೇಲೆ ವಿದ್ಯಾರ್ಥಿಗಳು ತಮ್ಮ ಸಂಶೋಧನ ವಿಷಯಗಳನ್ನು ಪವರ್ ಪಾಯಿಂಟ್ ಸಹಾಯದಿಂದ ವಿವರಿಸಿದರು.

