ಬಂಟ್ವಾಳ: ಬಿ.ಸಿ.ರೋಡಿನ ಮುಖ್ಯ ವೃತ್ತದ ಬಳಿ ನಿರ್ಮಲ ಬಂಟ್ವಾಳ ಯೋಜನೆಯಡಿ ಎಲ್ಲರ ಗಮನ ಸೆಳೆಯುವಂತೆ ಸುಂದರವಾಗಿ ನಿರ್ಮಾಣಗೊಂಡ ಉದ್ಯಾನವನ ಎರಡು ತಿಂಗಳ ಬಳಿಕ ಲೋಕಾರ್ಪಣೆಯ ಭಾಗ್ಯ ಕೂಡಿ ಬಂದಿದೆ. ಈ ಉದ್ಯಾನವನ ಅಕ್ಟೋಬರ್ 9ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆಗೊಳ್ಳಲಿದೆ.

dsc_0071

ಪರಿಸರ ಇಲಾಖೆಯ ನಿರ್ಮಲ ಬಂಟ್ವಾಳ ಯೋಜನೆಯಡಿ 1.40 ಕೋಟಿ ರೂ. ವೆಚ್ಚದಲ್ಲಿ ಈ ಉದ್ಯಾನವನವನ್ನು ನಿರ್ಮಿಸಲಾಗಿದ್ದು ಬಂಟ್ವಾಳ ಪುರಸಭೆಯಿಂದಲೂ ಸುಮಾರು 20 ಲಕ್ಷ ರೂಪಾಯಿಯನ್ನು ಉದ್ಯಾನವನದ ಸುತ್ತ ಇಂಟರ್‍ಲಾಕ್ ಅಳವಡಿಕೆ ಹಾಗೂ ಇನ್ನಿತರ ಕಾಮಗಾರಿಗಳಿಗೆ ವ್ಯಯಿಸಿದೆ. ಒಂದು ಕಾಲದಲ್ಲಿ ಈ ಪರಿಸರವು ತ್ಯಾಜ್ಯ ರಾಶಿಯಿಂದಾಗಿ ದುರ್ವಾಸನೆ ಬೀರುತ್ತಿದ್ದು ಸಾರ್ವಜನಿಕರು ನಡೆದಾಡುವ ಸಂದರ್ಭದಲ್ಲಿ ಮೂಗು ಮುಚ್ಚಿಕೊಂಡೇ ಸಂಚರಿಸುತ್ತಿದ್ದರು. ಇದೀಗ ರಾಜ್ಯ ಪರಿಸರ ಸಚಿವ ರಮಾನಾಥ ರೈ ಅವರ ವಿಶೇಷ ಅಸ್ಥೆಯಿಂದಾಗಿ ಮತ್ತು ಅವರ ಪರಿಕಲ್ಪನೆಯಂತೆ ಸುಂದರವಾದ ಉದ್ಯಾನವನ ನಿರ್ಮಾಣವಾಗಿದೆ.

dsc_0070

‘ಜೋಡುಮಾರ್ಗ ಉದ್ಯಾನವನ’ ಈ ಉದ್ಯಾನವನಕ್ಕೆ ನಾಮಕರಣಗೊಳಿಸುವ ನಿಟ್ಟಿನಲ್ಲಿ ಪುರಸಭೆ ಗೊಂದಲಕ್ಕೆ ಒಳಗಾಗಿತ್ತು. ಕೊನೆಗೂ ಈ ಪ್ರದೇಶಕ್ಕೆ ಹಿಂದಿನಿಂದಲೂ ಜೋಡುಮಾರ್ಗ ಎಂದು ಕರೆಯಲ್ಪಡುತ್ತಿರುವ ಹಿನ್ನೆಲೆಯಲ್ಲಿ ಈ ಉದ್ಯಾನವನವನ್ನು ಸುಲಭವಾಗಿ ಸಾರ್ವಜನಿಕರು ಗುರುತಿಸುವ ನಿಟ್ಟಿನಲ್ಲಿ ಪುರಸಭೆ ಉದ್ಯಾನವನಕ್ಕೆ ‘ಜೋಡುಮಾರ್ಗ ಉದ್ಯಾನವನ’ವೆಂದು ನಾಮಕರಣ ಮಾಡಿದೆ.

img_8063

ಪಾರ್ಕ್‍ನಲ್ಲಿ ಸೌಲಭ್ಯಗಳು: ಈ ಉದ್ಯಾನವನದಲ್ಲಿ ವೈಫೈ, ಎಫ್‍ಎಂ ರೇಡಿಯೋ, ವಿವಿಧ ನೀರಿನ ಕಾರಂಜಿಗಳ ಸಹಿತ ಆಧುನಿಕ ಸೌಲಭ್ಯಗಳಗೊಂಡಂತೆ ಈ ಸುಸಜ್ಜಿತ ಪಾರ್ಕ್‍ಗೆ ಸುಂದರ ಕೌಂಪೌಂಡ್ ಗೋಡೆ ಮತ್ತು ಪ್ರವೇಶ ದ್ವಾರ ಇನ್ನಷ್ಟು ಮೆರಗು ನೀಡಿದೆ. ಪಾರ್ಕ್ ಜನರಿಗೆ ವಿಹಾರಕ್ಕಾಗಿ ಇನ್‍ಟರ್‍ಲಾಕ್ ಅಳವಡಿಸಿರುವ ಪಥವನ್ನು ನಿರ್ಮಿಸಲಾಗಿದೆ. ಪಾರ್ಕ್‍ನೊಳಗಡೆ ವಿನೋತನ ವಿನ್ಯಾಸದ ಶೌಚಾಲಯ ನಿರ್ಮಿಸಲಾಗಿದ್ದು ಈ ವಿನ್ಯಾಸದ ಶೌಚಾಲಯ ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿದೆ.

kar_3526

ಪಾರ್ಕ್‍ಗೆ ಬರುವ ಜನರಿಗೆ ಕುಡಿಯಲು ಶುದ್ಧ ಸಿಹಿ, ಬಿಸಿ, ತಂಪು ನೀರಿನ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ. ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ಎರಡು ಮೀನಿನ ಶೈಲಿಯಲ್ಲಿ ಹಾಗೂ ಎರಡು ವಿವಿಧ ಬಣ್ಣದ ಕಾರಂಜಿಗಳನ್ನು ನಿರ್ಮಿಸಲಾಗಿದೆ. ರಾಷ್ಟ್ರ ಪಕ್ಷಿ ನವಿಲಿನ ಪ್ರತಿಕೃತಿ, ವಿಶಾಲವಾದ ಕೊಳ ಹಾಗೂ ಕಾರಂಜಿಗಳು ಈ ಪಾರ್ಕಿನ ಸೊಬಗನ್ನು ಹೆಚ್ಚಿಸಿದೆ. ಕಾರಂಜಿ ಹಾಗೂ ಗಿಡಗಳಿಗೆ ನೀರು ಪೂರೈಸಲು ಸುಮಾರು 100 ಅಡಿ ಆಳದ ಬಾವಿಯೊಂದನ್ನು ಪಾರ್ಕ್‍ನೊಳಗಡೆ ನಿರ್ಮಾಣ ಮಾಡಲಾಗಿದೆ.

kar_3528

ಪಾರ್ಕ್ ಸುಮಾರು 40ರಷ್ಟು ಕಾರುಗಳನ್ನು ಪಾರ್ಕ್ ಮಾಡುವಷ್ಟು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು ಪಾರ್ಕ್‍ನೊಳಗೆ ಜನರಿಗೆ ಕುಳಿತುಕೊಳ್ಳಲು ಸುಮಾರು 30 ಉದ್ದದ ಚೇರ್‍ಗಳನ್ನೂ ಹಾಗೂ ವಿಶ್ರಾಂತಿ ಪಡೆಯಲು ಸಣ್ಣ ಮಾದರಿಯ 9 ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ. ಕೃತಕ ಬಿದಿರಿನಿಂದ ನಿರ್ಮಾಣಗೊಂಡ ವಿವಿಧ ರೀತಿಯ ಅಲಂಕಾರಿತ ದೀಪಗಳು ಪಾರ್ಕ್‍ನ ಅಂದ ಹೆಚ್ಚಿಸಲಿದೆ. ವಿದ್ಯುತ್ ದೀಪಗಳು ಉರಿಯಲು ಸೋಲಾರ್ ವ್ಯವಸ್ಥೆ ಕಲ್ಪಿಸಲಾಗಿದೆಯಲ್ಲದೆ ಸಣ್ಣ ಪುಟ್ಟ ಸಭಾಕಾರ್ಯಕ್ರಮಗಳಿಗಾಗಿ ಮಿನಿ ವೇದಿಕೆಯನ್ನು ನಿರ್ಮಿಸಲಾಗಿದೆ.

ಹಸಿರು ಹುಲ್ಲು ಹಾಸಿನಿಂದ ವನದ ಮಾದರಿಯಲ್ಲಿ ಕಂಗೊಳಿಸುವ ಈ ಪಾರ್ಕ್‍ನಲ್ಲಿ ಕೃತಕ ಮರ ಹಾಗೂ ಬಿದಿರಿನ ಸೇತುವೆ ಅಲಂಕಾರಗೊಂಡಿದೆ. ಮಕ್ಕಳಿಗಾಗಿ ಪಾರ್ಕ್‍ನೊಳಗೆ ಆಟಿಕೆಯ ವಿವಿಧ ಉಪಕರಣಗಳನ್ನು ಅಳವಡಿಸಲಾಗಿದೆ. ಸಿಮೆಂಟ್‍ನಿಂದ ನಿರ್ಮಾಣಗೊಂಡಿರುವ ಪ್ರಾಣಿ, ಪಕ್ಷಿಗಳು ಈ ಪಾರ್ಕ್‍ನೊಳಗೆ ಬರುವ ಜನರನ್ನು ಆಕರ್ಷಿಸಲಿದೆ. ಪಾರ್ಕಿನ ಅಂದ ಹೆಚ್ಚಿಸಲು ವಿವಿಧ ಜಾತಿಯ ಹೂವಿನ ಗಿಡಗಳನ್ನು ನೆಡಲಾಗಿದೆ. ಶುಚಿತ್ವವನ್ನು ಕಾಪಾಡುವ ದೃಷ್ಟಿಯಿಂದ ಸುಮಾರು ಹತ್ತು ಕಸದ ತೊಟ್ಟಿಗಳನ್ನು ಅಳವಡಿಸಲಿದೆ. ವಿಶೇಷವೆಂದರೆ ಹೊಸ ವಿಧಾನದಲ್ಲಿ ಇಡೀ ಪಾರ್ಕ್‍ನೊಳಗಿನ ಮಳೆ ನೀರನ್ನು ಇಂಗಿಸುವ ಸಲುವಾಗಿ ಆರು ಇಂಗು ಗುಂಡಿಗಳನ್ನು ಮಾಡಿ ನೀರನ್ನು ಇಂಗಿಸಲಾಗುತ್ತದೆ.

ನಿರ್ವಹಣೆ: ಮುಂದಿನ ದಿನಗಳಲ್ಲಿ ಈ ಉದ್ಯಾನವನದ ನಿರ್ವಾಹಣೆ ಯಾರಿಗೆ ವಹಿಸಬೇಕೆಂಬುದು ಇನ್ನು ಕೂಡಾ ಚರ್ಚಾ ಹಂತದಲ್ಲಿದೆ. ಉದ್ಯಾನವನ ಪುರಸಭೆಗೆ ಹಸ್ತಾಂತರಗೊಂಡ ಬಳಿಕ ಇದರ ನಿರ್ವಹಣೆ ಯಾರಿಗೆ ವಹಿಸಬೇಕೆಂಬ ಕುರಿತು ಪುರಸಭೆ ನಿರ್ದರಿಸಲಿದೆ. ಎರಡು ರಾಷ್ಟ್ರೀಯ ಸಂಸ್ಥೆಗಳು ಸೇರಿದಂತೆ ಕೆಲವು ಸಂಘ ಸಂಸ್ಥೆಗಳು ನಿರ್ವಹಣೆ ವಹಿಸಿಕೊಳ್ಳಲು ಮುಂದೆ ಬಂದಿದೆ ಎಂದು ಪುರಸಭಾಧ್ಯಕ್ಷ ರಾಮಾಕೃಷ್ಣ ಆಳ್ವ ಅವರು ಕಳೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಗಮನಕ್ಕೆ ತಂದಿದ್ದರು.

By Suddi9

Leave a Reply

Your email address will not be published. Required fields are marked *