ಬಂಟ್ವಾಳ: ನಮ್ಮ ಪರಿಸರವನ್ನು ಶುಚಿಗೊಳಿಸಿದಲ್ಲಿ ಮಲೇರಿಯಾ , ಡೆಂಗ್ಯೂ, ಚಿಕೂನ್ ಗೂನ್ಯಾ ಮುಂತಾದ ಸಾಂಕ್ರಾಮಿಕ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಪರಿಸರದ ಸ್ವಚ್ಛತೆ ಕಾಪಾಡುವ ಗುರುತರವಾದ ಹೊಣಗಾರಿಕೆ ಇದೆ ಎಂದು ದ.ಕ.ಜಿಲ್ಲಾ ಗೃಹ ರಕ್ಷಕ ದ ಳದ ಜಿಲ್ಲಾ ಕಮಾಂಡೆಂಟ್ ಡಾ.ಮುರಳೀಮೋಹನ್ ಚುಂತಾರ್ ನುಡಿದರು. ಅವರು ಬಿ.ಸಿರೋಡ್ ನಗರದ ಹೃದಯ ಭಾಗದಲ್ಲಿರುವ ರಕ್ತೇಶ್ವರಿ ದೇವಸ್ಥಾನದ ಆವರಣದಲ್ಲಿ ಬಂಟ್ವಾಳ ಗೃಹರಕ್ಷಕ ದಳದ ಆಶ್ರಯದಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಗೃಹ ರಕ್ಷಕ ಇಲಾಖೆ ಜಿಲ್ಲೆಯಾದ್ಯಂತ ಸ್ವಚ್ಛತಾ ಆಂದೋಲನ ನಡೆಸುತ್ತಿದ್ದು ಜಿಲ್ಲೆಯ ಎಲ್ಲಾ 14 ಘಟಕಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಂಟ್ವಾಳ ಗೃಹರಕ್ಷಕ ದಳದಿಂದ ಇದು 7ನೇ ಸ್ವಚ್ಛತಾ ಕಾರ್ಯಕ್ರಮವಾಗಿದ್ದು ಪುತ್ತೂರು ಮತ್ತು ಉಪ್ಪಿನಂಗಡಿ ಗೃಹರಕ್ಷಕ ಘಟಕಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಯಲಿದೆ ಎಂದು ನುಡಿದರು. ಗೃಹರಕ್ಷಕ ದಳದ ಘಟಕಾಧಿಕಾರಿ ಎಂ.ಭೋಜ , ಗೃಹರಕ್ಷಕರಾದ ಶ್ರೀನಿವಾಸ ಆಚಾರ್ಯ, ಸಂತೋಷ್ ಕುಲಾಲ್, ಕಿಶನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಸುಮಾರು 50ಕ್ಕೂ ಹೆಚ್ಚು ಮಂದಿ ಗೃಹರಕ್ಷಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

