ಮೂಡುಬಿದಿರೆ: ಸರ್ವಧರ್ಮ ಹಾಗೂ ಎಲ್ಲ ಪಕ್ಷದ ಮುಖಂಡರು, ಸ್ಥಳೀಯ ಕಾರ್ಯಕರ್ತರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುವ ಪಾಲಡ್ಕ ತೋಡು ದುರಸ್ತಿ ಕಾಮಗಾರಿಗೆ ಸೋಮವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.
ಅರ್ಬಿ ಅಣೆಕಟ್ಟು, ತೋಡು ದುರಸ್ತಿ ಸಮಿತಿ ಹಾಗೂ ಪಾಲಡ್ಕ, ಕಂಡದಲೆ, ಪುತ್ತಿಗೆ ಗ್ರಾಮಸ್ಥರ ನೇತೃತ್ವದಲ್ಲಿ ನಡೆಯುವ ಕಾಮಗಾರಿಗೆ ಪಾಲಡ್ಕ ಚರ್ಚ್ ಬಳಿಕ ಕಲ್ಲಸಂಕದಲ್ಲಿ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಚಾಲನೆ ನೀಡಿದರು. ಪಾಲಡ್ಕ ಚರ್ಚ್ ಧರ್ಮಗುರುಗಳ ಸಮಾಜಮುಖಿ ಚಿಂತನೆಯಿಂದ ಗ್ರಾಮಸ್ಥರು ಒಟ್ಟು ಸೇರಿ ಉತ್ತಮ ಕೆಲಸವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಪಂಚಾಯಿತಿ ಅರ್ಬಿ ಅಣೆಕಟ್ಟು ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದರೆ ಪುತ್ತಿಗೆ ಹಾಗೂ ಪಾಲಡ್ಕ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ನೀರಿನ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಸಲಹೆಯಿತ್ತರು. ಅಮರನಾಥ ಶೆಟ್ಟಿ ಹಾಗೂ ಯುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಿನ್ ಪಿರೇರಾ, ಕಾಮಗಾರಿಗೆ ತಲಾ 5 ಸಾವಿರ ಧನಸಹಾಯ ನೀಡಿದರು.
ಪಾಲಡ್ಕ ಚರ್ಚ್ ಧರ್ಮಗುರು, ಸಮಿತಿಯ ಸಂಚಾಲಕ ರೆ.ಫಾ ಮೈಕಲ್ ಐವನ್ ರೊಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವಧರ್ಮದವರು ಒಗ್ಗೂಡಿ ಕಾಮಗಾರಿಗಳನ್ನು ಮಾಡುವುದರಿಂದ ಪಾಲಡ್ಕ ಗ್ರಾಮಸ್ಥರ ಅಭಿವೃದ್ಧಿ ಜೊತೆಗೆ ಸೌಹಾರ್ದತೆಯೂ ಮೂಡುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಮಾತನಾಡಿ, ಅರ್ಬಿಕಟ್ಟೆ ಅಣೆಕಟ್ಟು ಕಾಮಗಾರಿ ಜಿಲ್ಲಾ ಪಂಚಾಯಿತಿಯಿಂದ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದೆಂದು ಭರವಸೆಯಿತ್ತರು.
ತಾ.ಪಂ ವನಿತಾ ನಾಯ್ಕ್ , ಪಾಲಡ್ಕ ಪಂಚಾಯಿತಿ ಸದಸ್ಯರಾದ ಸವಿತಾ ಟಿ.ಎನ್, ವಿಲ್ಫ್ರೇಡ್ವ ರಾಜೇಶ್ ಅರಾನ್ಹ, ಜಗದೀಶ್ ಕೋಟ್ಯಾನ್, ಪ್ರವೀಣ್ ಸಿಕ್ವೇರಾ, ಪುತ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶುಭಾ ಹೆಬ್ಬಾರ್, ಸದಸ್ಯರಾದ ನಾಗವರ್ಮ ಜೈನ್, ಶಶಿಧರ್ ನಾಯಕ್, ವೀಣಾ ನಾಯಕ್, ಪ್ರೆಸಿಲ್ಲಾ, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಮಿತಿ ಸದಸ್ಯರಾದ ಅಂಡ್ರ್ಯೋ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು. ನವೀನ್ ಸತ್ಪಾಲ್ ವಂದಿಸಿದರು.

