ಪಶ್ಚಿಮ ಘಟ್ಟ ತಪ್ಪಲಿನಲ್ಲಿರುವ ಪ್ರಶಾಂತವಾದ ಸುಂದರ ರಮಣೀಯವಾದ ಊರು ‘ನಾರಾವಿ’. ಈ ಪ್ರಕೃತಿಗಳ ನಡುವೆ ಹರಿದು ಹೋಗುವ ಸುವರ್ಣ ನದಿಯ ಪಕ್ಕದಲ್ಲಿ ನಾರವಿ ಎಂಬ ಸ್ಥಳದಲ್ಲಿ ಶ್ರೀ ಸೂರ್ಯನಾರಾಯಣ ದೇವಸ್ತಾನವನ್ನು ನಿರ್ಮಿಸಲಾಗಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ‘ನಾರವಿ’ ಎಂಬ ಗ್ರಾಮದಲ್ಲಿದೆ.
ಬಹಳ ಹಿಂದೆ ಒಬ್ಬಳು ಸ್ತ್ರೀ ಯಾವಾಗಲೂ ಸೂರ್ಯ ಹುಟ್ಟುವುದನ್ನು ನೋಡಿ ಕಣ್ತುಂಬಿಕೊಂಡು ನಂತರ ತನ್ನ ದಿನಗೆಲಸವನ್ನು ಆರಂಭಿಸುತ್ತಿದ್ದಳು. ಹೀಗೆ ಇರುವಾಗ ಸೂರ್ಯ ಎರಡು- ಮೂರು ದಿವಸವಾದ್ರು ಕಾಣಿಸಲೇ ಇಲ್ಲ. ಯಾವಾಗಲೂ ಸೂರ್ಯನ ಉದಯವನ್ನು ನೋಡಿ ಕೆಲಸ ಮುಂದುವರಿಸುತ್ತಿದ್ದ ಆಕೆ ಸೂರ್ಯ ಕಾಣದನ್ನು ನೋಡಿ ಅನ್ನ, ನೀರು, ಆಹಾರ ಎಲ್ಲವನ್ನು ಬಿಟ್ಟು ತಪಸ್ಸನ್ನು ಮಾಡುತ್ತಾಳೆ. ಆವಳ ತಪಸ್ಸಿಗೆ ಮೆಚ್ಚಿ ಸೂರ್ಯ ಅವಳ ಮುಂದೆ ಪ್ರತ್ಯಕ್ಷನಾಗುತ್ತಾನೆ. ಆ ಪ್ರತ್ಯಕ್ಷವಾದ ಸ್ಥಳದಲ್ಲಿ ಸೂರ್ಯನ ಪ್ರತಿಮೆಯನ್ನು ಪೂರ್ವಾಭಿಮುಖವಾಗಿ ನಿರ್ಮಿಸಲಾಯಿತು. ಸೂರ್ಯನ ಬಳಿ ನೀನು ಯಾರು? ಎಂದು ಪ್ರಶ್ನಿಸಿದಾಗ ಅವನು ನಾ ‘ರವಿ’ ಎಂದು ಉತ್ತರಿಸುತ್ತಾನೆ. ಆ ಬಳಿಕ ಈ ಸ್ಥಳಕ್ಕೆ “ನಾರವಿ” ಎಂಬ ಹೆಸರು ಬಂತು.

ಮೊದಲು ಸೂರ್ಯನ ಪ್ರತಿಮೆಯನ್ನು ಪೂರ್ವಾಭಿಮುಖವಾಗಿ ಹುಲ್ಲಿನ ಮನೆಯಲ್ಲಿಟ್ಟು ಪೂಜೆ ಮಡಲಾಯಿತು. ಆಗ ಕುಪ್ಪ ಭಟ್ ಎಂಬವರು ದೇವರಿಗೆ ಪೂಜೆ ಮಾಡುತ್ತಿದ್ದರು. ಸೂರ್ಯನು ಪೂರ್ವಾಭಿಮುಖವಾಗಿ ಹುಟ್ಟುವುದರಿಂದ ಪೂರ್ವಾಭಿಮುಖವಾಗಿ ನಿರ್ಮಿಸಲಾಯಿತು. ಆದರೆ ಈ ದೇವಸ್ಥಾನ ನಿರ್ಮಾಣವಾದ ಬಳಿಕ ಪೂರ್ವದಲ್ಲಿನ ಎಲ್ಲಾ ಮನೆ ಮಠಗಳು ಸುಟ್ಟು ಹೋದವು. ಈ ಕಾರಣದಿಂದಾಗಿ ಸೂರ್ಯನನ್ನು ಪಶ್ಚಿಮಾಭಿಮುಖವಾಗಿ ನಿರ್ಮಿಸಲಾಯಿತು ಎಂಬ ಪ್ರತೀತಿ ಇದೆ. ಈ ದೇವಾಸ್ಥಾನದ ಆಡಳಿತ ಮೋಕ್ತೇಸರರು ಕೃಷ್ಣ ತಂತ್ರಿ ಭಟ್.

ಈ ದೇವಸ್ಥಾನದಲ್ಲಿ ಸಂಕ್ರಾಂತಿ ಹಬ್ಬದ ದಿನ ದೇವರಿಗೆ ವಿಶೇಷ ಪೂಜೆ ಇರುತ್ತದೆ. ಸಾವಿರಾರು ಭಕ್ತರು ಈ ಪೂಜೆಯಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಅದಲ್ಲದೇ ಧನು ಸಂಕ್ರಾಂತಿಯಂದು ಹಿಡಿದು ಮಕರಸಂಕ್ರಾಂತಿ ಬರುವವರೆಗೂ ಇಲ್ಲಿ ಒಂದು ತಿಂಗಳ ಪೂಜೆಯನ್ನು ಬೆಳಿಗ್ಗೆ ಮಾಡಲಾಗುತ್ತದೆ. ವರ್ಷಂಪ್ರತಿ ನಡೆಯುವ ಜಾತ್ರಾ ಮಹೋತ್ಸವ 9 ದಿವಸದವರೆಗೆ ನಡೆಯುತ್ತದೆ.

ಸೂರ್ಯನ ಪ್ರತಿಮೆ ಜಗತ್ತಿನಲ್ಲಿರುವುದು ಬಹಳ ಕಡಿಮೆ. ಅದರಲ್ಲೂ ನಮ್ಮ ಊರಿನಲ್ಲಿ ಸೂರ್ಯ ದೇವನ ಪ್ರತಿಮೆ ಇರುವುದು ನಮ್ಮ ಊರಿನಲ್ಲಿರುವುದು ಹೆಮ್ಮೆಯ ವಿಷಯ. ನೀವು ಈ ದೇವಸ್ಥಾನಕ್ಕೆ ಬಂದು ದೇವರ ಅನುಗ್ರಹ ಪಡೆಯತ್ತೀರಾ? ಹಾಗಾದರೆ ಕಾರ್ಕಳದಿಂದ ನಾರವಿಗೆ ಕೇವಲ 35 ಕಿ.ಮೀ, ಮೂಡುಬಿದಿರೆಯಿಂದ 33 ಕಿ.ಮೀ, ಹಾಗೂ ಮಂಗಳೂರಿನಿಂದ ಸುಮಾರು 65 ಕಿ. ಮೀ.ನ ಅಂತರವಿದೆ. ನೀವು ಯಾವಾಗ ಬೇಕಾದರೂ ಬಂದು ದೇವರ ದರ್ಶನ ಪಡೆಯಬಹುದು.
ನಿಧಿಶಾ.ಎನ್.ಶೆಟ್ಟಿ

