ವಾಮಂಜೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ ವಲಯ ಮತ್ತು ಎಸ್.ಡಿ.ಎಂ. ಮಂಗಳ ಜ್ಯೋತಿ ಸಮಗ್ರ ಪ್ರೌಢ ಶಾಲೆ ವಾಮಂಜೂರು ಇವರ ಸಹಯೋಗದಲ್ಲಿ ಮಂಗಳೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಯೋಗಾಸನ ಸ್ಪರ್ಧೆ ಹಾಗೂ ರಾಷ್ರೀಯ ಕ್ರೀಡಾ ದಿನಾಚರಣೆಯನ್ನು ಮಂಗಳ ಜ್ಯೋತಿ ಸಭಾಂಗಣದಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಯಾಗಿ ರೋಟರಿ ಕ್ಲಬ್ ಮಂಗಳೂರು ಪೂರ್ವದ ಅಧ್ಯಕ್ಷರಾದ ರೊಟೇರಿಯನ್.ಪಾಂಡುರಂಗ ಶೆಟ್ಟಿ ಉದ್ಘಾಟಿಸಿ ಮಾತನಾಡುತ್ತಾ ಸಂತೋಷ ಮತ್ತು ಸುಖಮಯ ಜೀವನಕ್ಕೆ ಮತ್ತು ಮನಸ್ಸಿನ ಹತೋಟಿ ಹಾಗೂ ಏಕಾಗ್ರತೆಗೆ ಯೋಗವು ಅತ್ಯವಶ್ಯಕವಾಗಿದ್ದು ಎಳೆ ವಯಸ್ಸಿನಿಂದಲೇ ಇದನ್ನು ಅಭ್ಯಾಸ ಮಾಡಿಕೊಂಡು ಬಂದರೆ ಇಡೀ ಜಗತ್ತು ಶಾಂತಿ ಸಹಬಾಳ್ವೆಯಿಂದ ಇರಲು ಸಾಧ್ಯವೆಂದರು. ಯೋಗವು ಕೂಡ ಒಂದು ಕ್ರೀಡಾ ಸ್ಪರ್ಧೆಯಾಗಿರುವುದರಿಂದ ಸ್ಪರ್ಧೆಯ ಜೊತೆಗೆ ರಾಷ್ರೀಯ ಕ್ರೀಡಾ ದಿನಾಚರಣೆ ಆಚರಿಸುತ್ತಿರುವುದು ಸಂತಸ ದಾಯಕವಾಗಿದೆ. ಮೇ.ಜನರಲ್ ಧ್ಯಾನ್‍ಚಂದ್‍ರವರ ಹುಟ್ಟುಹಬ್ಬವನ್ನು ರಾಷ್ರೀಯ ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸುವುದರ ಮೂಲಕ ವಿಶ್ವ ಕಂಡ ಸರ್ವ ಶ್ರೇಷ್ಟ ಆಟಗಾರನನ್ನು ಮತ್ತೆ ನೆನಪಿಸಿ ಅವರ ದಾರಿಯಲ್ಲಿ ಮುಂದಿನ ಕ್ರೀಡಾ ಪಟುಗಳು ನಡೆದರೆ ಮತ್ತೆ ಒಲಿಂಪಿಕ್ಸ್‍ನಲ್ಲಿ ಅವರ ರೀತಿ ಸಾಧನೆ ಮಾಡಿ ಚಿನ್ನದ ಪದಕ ಪಡೆಯಲು ಸಾಧ್ಯ ಎಂದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ. ಜ್ಞಾನೇಶ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಲಿಲ್ಲಿ ಪಾಯಸ್, ಮಾಣಿಕ್ಯ ಕನ್ಸ್ಟಕ್ಷ್ಸನ್ ಮೂಲಕ ಶ್ರೀ ರಾಜೇಂದ್ರ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಡೋಲ್ಪಿ ಸಿಕ್ವೇರಾ, ಮಂಗಳ ಜ್ಯೋತಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ನಝೀಮ ಬಾನು, ನೋಡಲ್ ಅಧಿಕಾರಿ ಶ್ರೀ ಗೋಪಾಲ್ ಉಪಸ್ಠಿತರಿದ್ದರು. ಶ್ರೀ ವಿಷ್ಣು ಹೆಬ್ಬಾರ್ ಧ್ಯಾನ್ ಚಂದ್ ಬಗ್ಗೆ ಮಾತನಾಡಿದರು. ಶಾಲಾ ಆಡಳಿತಾಧಿಕಾರಿ ಶ್ರೀ ಗಣೇಶ್ ಭಟ್ ವಿ. ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಯೋಗಾಭ್ಯಾಸದಿಂದ ಮನುಕುಲವು ಮತ್ತೆ ಹಿಂದಿನ ಶೈಲಿಯ ಉತ್ತಮ ಆರೋಗ್ಯ ಮತ್ತು ಶಾಂತ ಚಿತ್ತತೆಯ ಬದುಕಿಗೆ ರಹದಾರಿಯಾಗಲಿ ಎಂದು ಶುಭ ಹಾರೈಸಿದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಯೋಗ ಸಂಘಟಕ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.

