ಬಂಟ್ವಾಳ: ಇಲ್ಲಿನ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮತ್ತೆ ಕಸದ ಸಮಸ್ಯೆ ಮತ್ತೆ ಪ್ರತಿಧ್ವನಿಸಿದೆ. ಎಷ್ಟೇ ಸಭೆ ನಡೆಸಿ, ಚರ್ಚಿಸಿದರೂ ಅದರಿಂದ ಏನು ಪ್ರಯೋಜನವಿಲ್ಲ ಎನ್ನುವ ಅಭಿಪ್ರಾಯಗಳು ಸದಸ್ಯರಿಂದಲೇ ಕೇಳಿ ಬಂದಿದೆ. ಮಂಗಳವಾರ ನಡೆದ ಸಾಮಾನ್ಯ ಸಭೆಯ ಬಹುತೇಕ ಸಮಯವನ್ನು ಕಸವಿಲೇವಾರಿಯ ಸಮಸ್ಯೆ ನುಂಗಿ ಹಾಕಿದ್ದು ಆಡಳಿತ ಹಾಗೂ ವಿಪಕ್ಷದ ಸದಸ್ಯರು ಜೊತೆಯಾಗಿ ಅಧಿಕಾರಿ ವರ್ಗದ ವಿರುದ್ದ ಚಾಟಿ ಬೀಸಿದ್ದಾರೆ.

1

2

3

4
ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಪುರಸಭಾ ವ್ಯಾಪ್ತಿಯಲ್ಲಿ ಪ್ರಾಥಮಿಕ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ಕಟ್ಟಡ ತೆರಿಗೆ ಮತ್ತು ಉದ್ಯಮ ಪರವಾನಿಗೆ ಶುಲ್ಕದ ಜೊತೆಗೆ ಸೇರಿಸಿ ವಸೂಲಾತಿ ಮಾಡುವ ಕುರಿತು ಆರೋಗ್ಯಾಧಿಕಾರಿ ರತ್ನಪ್ರಸಾದ್ ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭ ವಿಪಕ್ಷ ಸದಸ್ಯ ದೇವದಾಸ್ ಶೆಟ್ಟಿ ಮಾತನಾಡಿ ಅಸಮರ್ಪಕ ಕಸ ವಿಲೇವಾರಿಯ ಬಗ್ಗೆ ಗುತ್ತಿಗೆದಾರನಿಗೆ ನೀಡಿದ ಶೋಕಾಸ್ ನೋಟಿಸ್‍ಗೆ ಏನು ಪ್ರತಿಕ್ರಿಯೆ ಬಂದಿದೆ? ಅವನ ವಿರುದ್ದ ಏನು ಕ್ರಮ ಕೈಗೊಂಡಿದ್ದೀರಿ? ಸಹಾಯಕ ಆಯುಕ್ತರ ಉಪಸ್ಥಿತಿಯಲ್ಲಾದ ತುರ್ತು ಸಭೆಯ ಬಳಿಕ ಆದ ಪ್ರಗತಿ ಏನು ಎಂದು ಪ್ರಶ್ನಿಸಿದರು. ಮುಖ್ಯ ವೃತ್ತದಿಂದ ರೈಲು ನಿಲ್ದಾಣದ ಬಳಿಗೆ ಹೋಗುವ ದಾರಿ ಬಳಿ ಕಸವನ್ನು ರಾಶಿ ಹಾಕುವುದರಿಂದ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ, ಲಯನ್ಸ್‍ಕ್ಲಬ್, ರೋಟರಿಕ್ಲಬ್‍ಗೆ ಹೋಗುವ ಜನರಿಗೆ ಅಸಹ್ಯ ಹುಟ್ಟಿಸುತ್ತಿದೆ. ಇದು ಪುರಸಭೆಗೆ ಶೇಮ್! ಇಲ್ಲಿ ಕಸ ಹಾಕದಂತೆ ಎಚ್ಚರವಹಿಸಿ ಎಂದು ಸದಸ್ಯ ಇಕ್ಬಾಲ್ ಪ್ರತಿಕ್ರಿಯಿಸಿದರು.
ಆಡಳಿತ ಪಕ್ಷದ ಸದಸ್ಯ ಮಹಮ್ಮದ್ ಶರೀಫ್ ಮಾತನಾಡಿ ಶೇ.50ರಷ್ಟು ಕೂಡ ಮನೆಮನೆ ಕಸ ಸಂಗ್ರಹವಾಗುತ್ತಿಲ್ಲ. ಆದ್ದರಿಂದ ತ್ಯಾಜ್ಯ ಸಂಗ್ರಹಣ ಶುಲ್ಕವನ್ನು ವಾಣಿಜ್ಯ ಕಟ್ಟಡಗಳಿಗೆ ಪ್ರಾಯೋಗಿಕ ಪ್ರಯತ್ನವನ್ನು ಮಾಡಿ ಮತ್ತೆ ಮನೆಗಳಿಗೆ ವಿಸ್ತರಿಸಿ ಎಂದು ಸಲಹೆ ನೀಡಿದರು. ಕಸ ಸಂಗ್ರಹಣೆಯಲ್ಲಿನ ಲೋಪ ಅಧಿಕಾರಿಗಳ ತಪ್ಪಲ್ಲ. ಇದು ಗುತ್ತಿಗೆದಾರನ ಸಮಸ್ಯೆ ಎಂದು ಅಧ್ಯಕ್ಷ ರಾಮಕೃಷ್ಣ ಆಳ್ವ ಅಧಿಕಾರಿಗಳ ಪರ ವಹಿಸಿದರು. ಇಲ್ಲಿ ಕೌನ್ಸಿಲ್ ಸಭೆ ಎನ್ನುವುದು ಜೋಕಾಗಿದೆ. ನೀವು ಹೇಳುವುದು, ನಾವು ಕೇಳುವುದು. ಚರ್ಚೆಗಳು ಮಾತ್ರ ನಡೀತಾ ಇದೆ. ಯಾವುದೇ ನಿರ್ಣಯಗಳು ಅನುಷ್ಠಾನವಾಗುತ್ತಿಲ್ಲ, ಇದೆಲ್ಲಾ ನಮಗೆ ನೋಡುವ ಭಾಗ್ಯವೇ..? ಎಂದು ವಿಪಕ್ಷ ಸದಸ್ಯ ಗೋವಿಂದ ಪ್ರಭು ಟೀಕಿಸಿದರು. ಕಸ ಸಮಸ್ಯೆಯ ಬಗ್ಗೆ ಜನರಿಂದ ದೂರು ಬರುವವರೆಗೆ ಕಾಯಬೇಡಿ. ಜವಬ್ದಾರಿ ಅರಿತುಕೊಂಡು ಕೆಲಸ ಮಾಡಿ ಎಂದು ಮಹಮ್ಮದ್ ಶರೀಪ್ ಅಧಿಕಾರಿಗಳ ಕಿವಿ ಹಿಂಡಿದರೆ, ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಸಂಸ್ಕರಣ ಘಟಕದ ಕಾಮಗಾರಿ ನಡೆದುರುವ ಮಾಹಿತಿಯನ್ನು ದೇವದಾಸ ಶೆಟ್ಟಿ ಬಯಸಿದರು. ನಿರ್ಮಲ ಬಂಟ್ವಾಳದ ಕನಸಿನಲ್ಲಿ ಪುರಸಭೆ ಅಧಿಕಾರಿಗಳು ತೇಲುತ್ತಿದ್ದರೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ಕಟು ಮಾತಿನ ಏಟು ಬಿಸಿ ಮುಟ್ಟಿಸಿತು.
ಬಂಟ್ವಾಳ ಕಸ್ಬಾ ಗ್ರಾಮದ ದೈವಗುಡ್ಡೆ ಎಂಬಲ್ಲಿ ನಾದುರಸ್ತಿಯಲ್ಲಿರುವ ನೀರು ಸರಬರಾಜು ಟ್ಯಾಂಕನ್ನು ತೆರವುಗೊಳಿಸುವ ಕುರಿತಾಗಿ ವಾರ್ಡ್ ಸದಸ್ಯ ಪ್ರವೀಣ್ ಬಿ. ಹಾಗೂ ಮತ್ತಿತರ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. 2016-17ನೇ ಸಾಲಿಗೆ ಶೇ.24.10, ಶೇ.7.25 ಹಾಗೂ ಶೇ.3 ರಲ್ಲಿ ವಿವಿಧ ಉದ್ದೇಶಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
ಪುರಸಭಾ ವ್ಯಾಪ್ತಿಯಲ್ಲಿ ಇನ್ನು 18 ಮನೆಗಳಿಗೆ ಮಾತ್ರ ಶೌಚಾಲಯದ ಅಗತ್ಯವಿದ್ದು, ಇದು ಪೂರ್ಣಗೊಂಡರೆ ಬಂಟ್ವಾಳ ಪುರಸಭೆಯನ್ನು ಬಯಲು ಶೌಚಾಲಯ ಮುಕ್ತ ನಗರ ಎಂದು ಘೋಷಿಸಬಹುದು ಎಂದು ಮುಖ್ಯಾಧಿಕಾರಿ ಸುಧಾಕರ್ ಸಭೆಗೆ ಮಾಹಿತಿ ನೀಡಿದರು.
ಉಪಾದ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ಚಂಚಲಾಕ್ಷಿ, ಪ್ರವೀಣ್ ಬಿ., ಗಂಗಾಧರ್, ಜಗದೀಶ್ ಕುಂದರ್, ಮಹಮ್ಮದ್ ಶರೀಫ್, ವಸಂತಿ, ವಾಸುಪೂಜಾರಿ, ಬಿ.ಮೋಹನ್, ಯಾಸ್ಮೀನ್, ಪ್ರಭಾ ಸಾಲ್ಯಾನ್, ಸುಗುಣ ಕಿಣಿ, ಇಕ್ಬಾಲ್, ಜೆಸಿಂತಾ, ಸಂಜೀವಿ, ಭಾಸ್ಕರ ಟೈಲರ್, ಸಂಧ್ಯಾನಾಯಕ್, ಸಿದ್ದೀಕ್ ಗುಡ್ಡೆಯಂಗಡಿ, ಲೋಕೇಶ್ ಸುವರ್ಣ, ಪ್ರವೀಣ್ ಕಿಣಿ, ನೋರ್ಬರ್ಟ್ ಡಿಸೋಜಾ ಚರ್ಚೆಯಲ್ಲಿ ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *