ಬಂಟ್ವಾಳ: ತಾಲೂಕಿನ ಅಕ್ರಮ-ಸಕ್ರಮ ಸಮಿತಿಯ ಮೊದಲ ಸಭೆ ಬುಧವಾರ ಬಿ.ಸಿ.ರೋಡಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯ ಸದಸ್ಯರಾದ ಪ್ಲೋಸಿ ಡಿಸೋಜಾ, ಶ್ರೀಧರ್ ರೈ, ಲೋಕಯ್ಯ ಗಾಡಿಪಲ್ಕೆ ಅಕ್ರಮ ಜಮೀನು ಸಕ್ರಮೀಕರಣಕ್ಕೆ ಸಲ್ಲಿಸಿದ್ದ ಅಜರ್ಿ ಹಾಗೂ ಕಡತಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಮಾಯಿಲಪ್ಪ ಸಾಲ್ಯಾನ್ ಸರ್ಕಾರಿ ಜಮೀನಿನಲ್ಲಿ ಮನೆಕಟ್ಟಿ ವಾಸ್ಯವ್ಯ ನಡೆಸುತ್ತಿರುವ ಅರ್ಹ ಫಲಾನುಭವಿಗಳಿಗೆ ಅಕ್ರಮ ಸಕ್ರಮ ಸಮಿತಿಯ ಮೂಲಕ ಪರಿಶೀಲನೆ ನಡೆಸಿ ನೇರವಾಗಿ ಹಕ್ಕು ಪತ್ರ ವಿತರಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ. ಈ ಸಂದರ್ಭ ಅಧಿಕಾರಿಗಳು ಹಾಗೂ ಜನರ ಸಹಕಾರ ಅತ್ಯಗತ್ಯ. ಜಿಲ್ಲಾ ಉಸುವರಿ ಸಚಿವ ರಮನಾಥ ರೈಯವರ ಮಾರ್ಗದರ್ಶನದಲ್ಲಿ ಸಮಿತಿ ಪಾರದರ್ಶಕವಾಗಿ ಕೆಲಸ ನಿರ್ವಹಿಸಲಿದೆ ಎಂದು ಅವರು ತಿಳಿಸಿದರು. ಅಕ್ರಮ ಸಕ್ರಮ ಫಲಾನುಭವಿಗಳು ಮಧ್ಯವರ್ತಿಗಳ ಮೊರೆ ಹೋಗ ಬಾರದು. ಮಾಹಿತಿಗಳು ಬೇಕಾದಲ್ಲಿ ಅಕ್ರಮ ಸಕ್ರಮ ಸಮತಿ ಸದಸ್ಯರು ಅಥವಾ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಅವರು ವಿನಂತಿಸಿದರು. ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಅನುಕೂಲದ ದೃಷ್ಟಿಯಿಂದ ಹೋಬಳಿ ಮಟ್ಟಕ್ಕೆ ತೆರಳಿ, ಖುದ್ದ್ದು ಸ್ಥಳ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಅಕ್ರಮ ಸಕ್ರಮ ಯೋಜನೆಯ ಪ್ರಯೋಜನ ಸಿಗಲು ಶ್ರಮಿಸುವುದಾಗಿ ತಿಳಿಸಿದರು.
ತಹಶೀಲ್ದಾರ್ ಮಲ್ಲೇಸ್ವಾಮಿ ಮಾತನಾಡಿ 94ಸಿ ಯಡಿ ಅರ್ಜಿ ಸಲ್ಲಿಸುವವರು ಮನೆ ಮುಂದೆ ನಿಂತಿರುವ ಭಾವ ಚಿತ್ರ, ಪಾಸ್ಪೊರ್ಟ್ ಅಳತೆಯ ಭಾವಚಿತ್ರ ಹಾಗೂ ಸ್ವತಃ ರಚಿಸಿದ ನಕ್ಷೆಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದ್ದು ಅರ್ಜಿಯನ್ನು ಸಂಬಂಧಪಟ್ಟ ಹೋಬಳಿಯ ನಾಡಕಚೇರಿಯಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು. ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ಇದ್ದಲ್ಲಿ ಸಲ್ಲಿಸ ಬಹುದು. ಅರ್ಜಿ ಸಲ್ಲಿಸಲೆಂದೇ ಪ್ರತ್ಯೇಕವಾಗಿ ಆದಾಯ ಅಥವಾ ಜಾತಿ ಪ್ರಮಾಣ ಪತ್ರವನ್ನು ಮಾಡಿಸುವ ಅಗತ್ಯವಿಲ್ಲ. ಗುರುತಿನ ದಾಖಲೆಗಾಗಿ ಮನೆ ತೆರಿಗೆ ರಶೀದಿ ಅಥವಾ ಪಡಿತರ ಚೀಟಿಯ ನಕಲು ನೀಡುವಂತೆ ಅವರು ತಿಳಿಸಿದರು.

