ಮೂಡುಬಿದಿರೆ: ಅಳಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆಗಳನ್ನು ಹೋಗಲಾಡಿಸಬೇಕೆಂದು ವಿದ್ಯಾರ್ಥಿಗಳ ಪೋಷಕರು ಹಾಗೂ ಜನಪ್ರತಿನಿಧಿಗಳು ಬುಧವಾರ ಶಾಲೆಯಲ್ಲಿ ನಡೆದ ಸಭೆಯಲ್ಲಿ ಮನವಿ ಮಾಡಿದ್ದು, ಶಿಕ್ಷಣ ಇಲಾಖೆಗೆ ಇದಕ್ಕೆ ಪೂರಕವಾಗಿ ಸ್ಪಂದಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದ ಮಡಿವಾಳ್ ಮನವರಿಕೆ ಮಾಡಿದರು. ಶಾಲೆಯ ಹಳೆಯ ಕಟ್ಟಡ ಕೆಡವಿದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿಲ್ಲ. ಇದರಿಂದ ಮಕ್ಕಳು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಸ್ಥಳೀಯ ಪ್ರೌಢಶಾಲೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡರು, ವಿದ್ಯಾರ್ಥಿಗಳು ದಿನಕ್ಕೆ ಕನಿಷ್ಠ ನಾಲ್ಕು ಬಾರಿ ಓಡಾಡಬೇಕಾಗುತ್ತದೆ. ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಪೋಷಕರು ಆಗ್ರಹಿಸಿದರು.
ಅಳಿಯೂರು ಪ್ರೌಢಶಾಲೆಯಲ್ಲಿ 5 ಹಾಗೂ 6 ತರಗತಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಮಾಡುತ್ತೇವೆ. ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಹಾಗೂ ಪ್ರಾಥಮಿಕ ಶಾಲೆಯಿಂದ ಶಿಕ್ಷಕಿಯರನ್ನು ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ಹೊಸ ಕಟ್ಟಡಕ್ಕೆ ಈಗಾಗಲೇ ಪ್ರಸ್ತಾವನೆ ಇಲಾಖೆಗೆ ಸಲ್ಲಿಸಲಾಗಿದೆ. ಇದಕ್ಕೆ ಪೂರಕವಾಗಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಶಿಕ್ಷಣಾಧಿಕಾರಿ ತಿಳಿಸಿದರು.
mbd_aug3_3
ಅಳಿಯೂರು ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವ ನಂಬಿಕೆಯಿಂದ ಪೋಷಕರು ಮಕ್ಕಳನ್ನು ಕಳುಹಿಸುತ್ತಾರೆ. ಆದರೆ ಇತ್ತೀಚೆಗೆ ಇಂಗ್ಲೀಷ್ ಭಾಷಾ ಶಿಕ್ಷಕರನ್ನು ವರ್ಗಾಹಿಸಿರುವುದರಿಂದ, ವಿಷಯದಲ್ಲಿ ಮಕ್ಕಳು ಹಿನ್ನಡೆ ಸಾಧಿಸುವ ಆತಂಕ ಕಾಡುತ್ತಿದೆ. ಇಂಗ್ಲೀಷ್ ಶಿಕ್ಷಕರನ್ನು ನೀಡುವ ವ್ಯವಸ್ಥೆ ಮಾಡಿ ಎಂದು ಪೋಷಕರು ಒತ್ತಾಯಿಸಿದರು. ಈ ಹಿಂದೆ ಇದ್ದ ಶಿಕ್ಷಕಿ ಕೌನ್ಸಿಲ್‍ನಲ್ಲಿ ಬೇರೆ ಕಡೆಗೆ ವರ್ಗಾವಣೆಗೊಂಡಿದ್ದಾರೆ. ಆರ್‍ಟಿಇ ಕಾನೂನು ಪ್ರಕಾರ ಈಗಾಗಲೇ ಹೆಚ್ಚುವರಿಯಾಗಿ ಒಬ್ಬರು ನಲಿಕಲಿ ಶಿಕ್ಷಕಿಯನ್ನು ನೀಡಿದ್ದೇವೆ. ಅವರಿಗೆ ಸೂಕ್ತ ತರಬೇತಿ ನೀಡಿರುವುದರಿಂದ ಅವರಿಗೆ ಇಂಗ್ಲೀಷ್ ಪಠ್ಯವನ್ನು ಬೋಧಿಸಲು ಸಾಧ್ಯವಿದೆ. ಇದರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೀಡುವ ವ್ಯವಸ್ಥೆಯನ್ನು ಇಲಾಖೆಯ ಮುಖಾಂತರ ಮಾಡುವ ಪ್ರಯತ್ನ ಮಾಡುತ್ತೇವೆ ಶಿಕ್ಷಣಾಧಿಕಾರಿ ಮನವರಿಕೆ ಮಾಡಿದರು.

ಶಿಕ್ಷಣಾಧಿಕಾರಿಗಳಿಂದ ಬರುವ ಸೂಚನೆ, ಮಾಹಿತಿಗಳು ಪೋಷಕರಿಗೆ ತಲುಪಿಸುವ ಕೆಲಸವನ್ನು ಎಸ್‍ಡಿಎಂಸಿಯವರು ಮಾಡಬೇಕು. ನಾವು ಪ್ರತಿಭಟನೆ ಮಾಡುವುದು ಮಾತ್ರವಲ್ಲ. ಶಾಲೆಯ ಶ್ರಮದಾನ, ಅಭಿವೃದ್ಧಿ ಕೆಲಸಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರೋತ್ಸಾಹಿಸಬೇಕು ಎಂದು ಸ್ಥಳೀಯರಾದ ವಿಶ್ವನಾಥ್ ಸಲಹೆ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತ, ವಾಲ್ಪಾಡಿ ಪಂಚಾಯಿತಿ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಸದಸ್ಯ ಗಣೇಶ್ ಅಳಿಯೂರು, ಲಕ್ಷ್ಮಣ್ ಸುವರ್ಣ, ಸುಶೀಲ, ಎಸ್‍ಡಿಎಂಸಿ ಅಧ್ಯಕ್ಷ ಸುಕುಮಾರ್ ಜೈನ್, ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ವಲಯಾಧ್ಯಕ್ಷ ನಾಗೇಶ್, ಶಿವಾನಂದ ಪಾಂಡ್ರು ಮೊದಲಾದವರಿದ್ದರು. ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ಲಿಂಗಪ್ಪ ಅವರು ಶಾಲೆಯ ಬೇಡಿಕೆಯಗಳನ್ನು ಶಿಕ್ಷಣಾಧಿಕಾರಿಗಳ ಮುಂದಿಟ್ಟರು. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಆಗಮಿಸಿದರು.

By suddi9

Leave a Reply

Your email address will not be published. Required fields are marked *