ವಿಟ್ಲ: ರಾತ್ರಿ ವಿದ್ಯುತ್ ಸಮಸ್ಯೆ ನಿರಂತರವಾಗಿ ಬರುವುದು ಹೇಗೆ.. ಯಾವ ಕಾರಣಕ್ಕೆ ರಾತ್ರಿ ದುರಸ್ಥಿ ಕಾರ್ಯಕ್ಕೆ ಮುಂದಾಗುತ್ತಿಲ್ಲ.. ಲೈನ್ ಮ್ಯಾನ್‍ಗಳಿಗೆ ಬೆಳಗಾಗುವುದು ಎಷ್ಟು ಗಂಟೆಗೆ.. ದೂರು ನೀಡಿದರೂ ದುರಸ್ಥಿ ನಡೆಸದಿರುವುದೇಕೆ.. ತೊಂದರೆ ಬಗ್ಗೆ ಹೇಳಲು ಕರೆ ಮಾಡಿದರೂ ದೂರು ತೆಗೆಯದಿರುವ ಉದ್ದೇಶವೇನು.. ಸಮಸ್ಯೆ ಹೇಳಲು ಲೈನ್ ಮ್ಯಾನ್‍ಗೆ ಕರೆ ಮಾಡಬೇಕಾದರೆ ಇಲ್ಲಿ ಕಛೇರಿ ಯಾಕೆ ಇದೆ..ಇದು ಪಡಿಬಾಗಿಲು ಮೆಸ್ಕಾಂ ವಿಟ್ಲ ಉಪವಿಭಾಗದ ಉಕ್ಕುಡ ಶಾಖಾ ಕಛೇರಿ ಮುಂದೆ ಸತತ ವಿದ್ಯುತ್ ಕಡಿತ ವಿರೋಧಿಸಿ ದಿಡೀರ್ ಆಗಿ ಶನಿವಾರ ಬೆಳ್ಳಂಬೆಳಗ್ಗೆ ಸ್ಥಳೀಯ ನಾಗರೀಕರು ನಡೆಸಿದ ಮೌನ ಪ್ರತಿಭಟನೆಯ ಸಂದರ್ಭ ಅಧಿಕಾರಿಗಳ ಮುಂದೆ ಬಂದ ಪ್ರಶ್ನೆಗಳ ಸರಮಾಲೆ..
ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪ್ರಶಾಂತ್ ಪಕಳ ಮಾತನಾಡಿ ಜನರ ಸಮಸ್ಯೆ ಸರಿಯಾದ ರೀತಿಯಲ್ಲಿ ಸ್ಪಂದಿಸಿದರೆ ಪ್ರತಿಭಟನೆಯಂತಹ ಸಮಸ್ಯೆಗಳು ಬರುವುದಿಲ್ಲ. ನಿರಂತರವಾಗಿ ಸಮಸ್ಯೆ ಬರಲು ಕಾರಣವೇನೆಂಬುದನ್ನು ಹುಡುಕಿ ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆದೇಶಿದರು.ಮೆಸ್ಕಾಂ ಉಕ್ಕುಡ ಶಾಖಾಧಿಕಾರಿ ಆನಂದ್ ಮಾತನಾಡಿ ಗೆಲ್ಲುಗಳನ್ನು ನಿರಂತರವಾಗಿ ತೆಗೆಯುವ ಕಾರ್ಯ ಮಾಡುತ್ತಿದ್ದೇವೆ. ವಿದ್ಯುತ್ ಲೈನ್‍ಗಳಿಗೆ ಮರದ ಗೆಲ್ಲು ತಾಗಿ ಬರುವ ಸಮಸ್ಯೆ ಅಲ್ಲ. ವಿದ್ಯುತ್ ಲೈನ್‍ಗಳಲ್ಲಿ ಬಳಸಿದ ಸಾಮಾಗ್ರಿಗಳಲ್ಲಿ ನಿರಂತರ ಸಮಸ್ಯೆ ಬರುತ್ತಿರುವುದರಿಂದ ಲೈನ್ ಟ್ರಿಪ್ ಆಗುತ್ತಿದೆ. ಲೈನ್ ಮ್ಯಾನ್‍ಗಳನ್ನು ಕಳುಹಿಸಿ ದುರಸ್ಥಿ ಕಾರ್ಯವನ್ನು ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಮೆಸ್ಕಾಂ ವಿಟ್ಲ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ್ ಜೋಷಿ ಮಾತನಾಡಿ ಶನಿವಾರ ರಾತ್ರಿಯಿಂದ ಕರ್ತವ್ಯ ನಿರ್ವಹಿಸಲು ಉಕ್ಕುಡ ಶಾಖೆಗೆ ವಾಹನ ನೀಡಲಾಗುತ್ತಿದೆ. ಜನರ ಬೇಡಿಕೆಯಂತೆ ಇಬ್ಬರು ಲೈನ್ ಮ್ಯಾನ್ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಎಂ ಎಸ್ ಮಹಮ್ಮದ್ ಮಾತನಾಡಿ ಅಧಿಕಾರಿಗಳ ಮಾತು ಕೇಳದ ಲೈನ್‍ಮ್ಯಾನ್ ಗಳು ಜನರ ಮಾತು ಕೇಳಲು ಸಾಧ್ಯವಿಲ್ಲ. ಲೈನ್ ಮ್ಯಾನ್‍ಗಳಲ್ಲಿ ಜನರು ಬಿಡಿ, ಜನಪ್ರತಿನಿಧಿಗಳು ಮಾತನಾಡುವುದೇ ಕಷ್ಟದ ಪರಿಸ್ಥಿತಿ. ಇಲಾಖೆಗೆ ಕಷ್ಟ ಇರುವುದು ಗೊತ್ತಿದೆಯಾದರೂ, ಮಾತಿನ ಮೂಲಕ ಸಮಸ್ಯೆಯನ್ನು ಪರಿಹರಿಸಬಹುದು. ಜನರ ಬೇಡಿಯನ್ನು ತಕ್ಷಣ ಈಡೇರಿಸಿದಾಗ ಇಲಾಖೆಯ ಮೇಲೆ ಗೌರವ ಹೆಚ್ಚಾಗುತ್ತದೆ. ಮತ್ತೆ ಸತ್ಯಾಗ್ರಹ, ಜನರು ಕಛೇರಿ ಮುಂದೆ ಸೇರುವ ಪ್ರಕ್ರಿಯೆ ನಡೆಯದಂತೆ ಇಲಾಖೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ತಾಲೂಕು ಪಂಚಾಯಿತಿ ಸದಸ್ಯ ಪದ್ಮನಾಭ ನಾಯ್ಕ ಅಳಿಕೆ, ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ ಕುಕ್ಕೆಬೆಟ್ಟು, ಸದಸ್ಯ ಅಬ್ದುಲ್ ಕರೀಂ ಕುದ್ದುಪದವು, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ್ ಎಂ ವಿಟ್ಲ, ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಯಕ್, ಚಂದ್ರಶೇಖರ್ ಅಳಿಕೆ, ಅಶ್ವಿನಿ ಕೃಷ್ಣಮೂರ್ತಿ ವಾರಣಾಸಿ ಮತ್ತಿತರರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *