ಮೂಡುಬಿದಿರೆ: ಇಲ್ಲಿನ ವಿಶೇಷ ತಹಸೀಲ್ದಾರ್ ಕಚೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ಕಂದಾಯ ನಿರೀಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿರುವ ಸೋಮಶೇಖರ್ ಮಯ್ಯ ಅವರನ್ನು ಶನಿವಾರ ತಹಸೀಲ್ದಾರ್ ಕಚೇರಿಯಲ್ಲಿ ಬೀಳ್ಕೊಡಲಾಯಿತು.
ಮೂಡುಬಿದಿರೆ ತಹಸೀಲ್ದಾರ್ ಮಹಮ್ಮದ್ ಇಸಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸೋಮಶೇಖರಯ್ಯ ಅವರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ಮಯ್ಯರವರ ಸಮರ್ಪಣಾ ಮನೋಭಾವ, ಪ್ರಾಮಾಣಿಕತೆ ಮೂಡುಬಿದಿರೆ ಜನತೆ ಲಭಿಸಿದೆ. ಅವರ ವೃತ್ತಿಪರತೆ ಗ್ರಾಮಕರಣಿಕ ಸಹಿತ ಕಂದಾಯ ಇಲಾಖೆಯ ಇತರ ಸಿಬ್ಬಂದಿಗಳಿಗೂ ಆದರ್ಶ. ಮಯ್ಯರವರು ಸಂಗೀತದಂತಹ ಪ್ರತಿಭೆ ಇರುವುದರಿಂದ ನಿವೃತ್ತಿ ಜೀವನವನ್ನು ಸಂತೃಪ್ತಿಯೊಂದಿಗೆ ಕಳೆಯಬಹುದು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸೋಮಶೇಖರ ಮಯ್ಯ, ಸರ್ಕಾರಿ ನೌಕರರು ಒತ್ತಡದಲ್ಲಿಯು ನಾಗರಿಕರಿಗೆ ಉತ್ತಮ ಸೇವೆಯನ್ನು ನೀಡಲು ಅವರಲ್ಲಿರುವ ನೈತಿಕ ಬಲವೇ ಕಾರಣ. ಮೂಡುಬಿದಿರೆ ಜನರು ತ್ಯಾಗಮಯಿಗಳು. ಅಧಿಕಾರಿಗಳಿಗೆ ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುವುದು ಇಲ್ಲಿನವರ ಹೆಚ್ಚುಗಾರಿಕೆ. ಪ್ರಾಮಾಣಿಕ, ದಕ್ಷ ನೌಕರರನ್ನು ಜನರು ಎಂದಿಗೂ ಮರೆಯಲ್ಲ. ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕೆಲಸ ಅಧಿಕಾರಿ ಹಾಗೂ ಸರ್ಕಾರಿ ನೌಕರರಿಂದಾಗಬೇಕು. ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಆಡಳಿತ ವ್ಯವಸ್ಥೆಯಿದ್ದಾಗ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದರು. ಉಪತಹಸೀಲ್ದಾರ್ ಅಬ್ದುಲ್ ರೆಹಮಾನ್, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಧರೆಗುಡ್ಡೆ ಪಂಚಾಯಿತಿ ಸದಸ್ಯ ಸುಭಾಶ್ಚಂದ್ರ ಚೌಟ, ಸುರೇಶ್, ಗೋಪಾಲ್, ಸಂತೋಷ್, ಪ್ರಕಾಶ್, ರಮಾನಂದ್, ಕುಂಟಾಡಿ ದಯಾನಂದ ಪೈ ಮಯ್ಯರವರ ಸೇವೆಯ ಕುರಿತು ಮಾತನಾಡಿದರು.ತಾ.ಪಂ ಸದಸ್ಯ ಪ್ರಶಾಂತ್ ಅಮೀನ್, ಸರ್ವೇ ಮೇಲ್ವಿಚಾರಕ ಗಿರೀಶ್ ಉಪಸ್ಥಿತರಿದ್ದರು. ಸಾದಿಯ ಕಾರ್ಯಕ್ರಮ ನಿರೂಪಿಸಿದರು.
