ಬಂಟ್ವಾಳ: ಇಲ್ಲಿನ ಪುರಸಭೆಯಲ್ಲಿ ವಿಪಕ್ಷ ಸದಸ್ಯರು ಪ್ರಸ್ತಾಪಿಸುವ ಯಾವುದೇ ಸಮಸ್ಯೆಗಳಿಗೆ ಆಡಳಿತ, ಅಧಿಕಾರಿಗಳಿಂದ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಅತೃಪ್ತಗೊಂಡ ವಿಪಕ್ಷ ಬಿಜೆಪಿ ಸದಸ್ಯರು ಗುರುವಾರ ನಡೆದ ಸಾಮಾನ್ಯಸಭೆಯಲ್ಲಿ ಅಜೆಂಡದ ಮೇಲಿನ ಚರ್ಚೆಯಲ್ಲಿ ಪಾಲ್ಗೊಳ್ಳದೆ ಮೌನಕ್ಕೆ ಶರಣಾದ ಪ್ರಸಂಗ ನಡೆಯಿತು.ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಅವರು ಸಭಾಧ್ಯಕ್ಷತೆ ವಹಿಸಿದ್ದು, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ವೇದಿಕೆಯಲ್ಲಿದ್ದರು.ಸಭೆ ಆರಂಭಕ್ಕೆ ಮುನ್ನ ಸದಸ್ಯ ದೇವದಾಸ ಶೆಟ್ಟಿ ಅವರು ವಿ.ಪಿ. ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಚರಂಡಿ ಸೇರಿದಂತೆ ಕೆಲವು ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಕಳೆದ 2-3 ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದಿನ ಸಭೆಯಲ್ಲಿ 15 ದಿನಗಳ ಒಳಗಾಗಿ ಇದೆಲ್ಲವನ್ನು ಕಾರ್ಯಗತಗೊಳಿಸುವ ಮಾತುಕೊಟ್ಟಿದ್ದರೂ ಅದು ಈಡೇರಿಲ್ಲ ಎಂದು ಅಧ್ಯಕ್ಷ ರಾಮಕೃಷ್ಣ ಆಳ್ವರನ್ನು ಭೇಟಿಯಾಗಿ ತಮ್ಮ ಅಸಮಾಧಾನ ತೋಡಿಕೊಂಡರು. ಈ ಸಂದರ್ಭದಲ್ಲಿ ಅಧ್ಯಕ್ಷರು ಮುಂದಿನ ಒಂದು ವಾರದ ಒಳಗಾಗಿ ಇದೆಲ್ಲವನ್ನು ಕಾರ್ಯಗತಗೊಳಿಸುವ ಭರವಸೆಯನ್ನು ನೀಡಿದರು.
2

3
ಇದಕ್ಕೆ ಪ್ರತಿಕ್ರಿಯಿಸಿದ ಶೆಟ್ಟಿ ಅವರು ನಿಮ್ಮ ಭರವಸೆ ಈಡೇರುವುದು ಅನುಮಾನವಿದೆ. ತಾವು ಈಗಾಗಲೇ ಪುರಸಭೆಯ ಉಪಹಾರ, ಗೌರವಧನ ಸ್ವೀಕರಿಸುವುದಿಲ್ಲ. ಈ ಸಾಮಾನ್ಯ ಸಭೆಯ ಯಾವುದೇ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಿಲ್ಲ ಎಂದು ತಮ್ಮ ಅಸಮಾಧಾನವನ್ನು ತೋಡಿಕೊಂಡರು. ಅದರಂತೆ ಸಭೆ ಆರಂಭವಾದ ಬಳಿಕ ಮುಕ್ತಾಯದ ವರೆಗೂ ಬಿಜೆಪಿ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳದೆ ಮೌನಕ್ಕೆ ಶರಣಾಗಿದ್ದರು. ಈ ನಡುವೆ ಬಿ.ಸಿ.ರೋಡಿನ ಪ್ರಾರ್ಥನಾ ಮಂದಿರಕ್ಕೆ ತೆರಿಗೆ ವಿನಾಯಿತಿ ನೀಡುವ ಕುರಿತ ಮನವಿಗೆ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಪುರಸಭೆ ಇಲ್ಲಿ ನಡೆದುಕೊಳ್ಳದಿರುವುದಕ್ಕೆ ಸದಸ್ಯ ಗೋವಿಂದ ಪ್ರಭು ಅವರು ಆಕ್ಷೇಪ ವ್ಯಕ್ತಪಡಿಸಿ ತಮ್ಮ ವಿರೋಧವನ್ನು ದಾಖಲಿಸಿದರು.
ದಾರಿದೀಪ ಅವ್ಯವಸ್ಥೆ-ಸದಸ್ಯರ ಆಕ್ರೋಶ:

ಕಳೆದ ಮೇ ತಿಂಗಳಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಿಂದ ವಿದ್ಯುತ್ ಕಂಬಗಳು ಹಾನಿಗೀಡಾಗಿ ದಾರಿದೀಪಗಳು ಕೆಟ್ಟು ಹೋದರೂ ಇನ್ನು ಕೂಡಾ ದುರಸ್ಥಿ ಮಾಡದಿರುವ ಬಗ್ಗೆ ಆಡಳಿತ ಪಕ್ಷದ ಸದಸ್ಯರೇ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾಮಾನ ನಡೆಯಿತು.ರಾಷ್ಟ್ರೀಯ ಹೆದ್ದಾರಿ ಪಾಣೆಮಂಗಳೂರು ಸೇತುವೆಯ ದಾರಿದೀಪಗಳು ಇನ್ನು ಕೂಡಾ ಉರಿಯದಿರುವ ಬಗ್ಗೆ ಸದಸ್ಯೆ ಚಂಚಲಾಕ್ಷಿ ಅಸಮಾಧಾನ ಹೊರ ಹಾಕಿದಾಗ ಇದಕ್ಕೆ ಧ್ವನಿ ಗೂಡಿಸಿದ ಸದಸ್ಯರಾದ ಗಂಗಾಧರ, ಪ್ರವೀಣ ಬಿ., ಜಸಿಂತ, ಸಂಜೀವಿನಿ ಅವರು ದಾರಿ ದೀಪ ನಿರ್ವಹಣೆ ಗುತ್ತಿಗೆದಾರರು ಸದಸ್ಯರ ದೂರವಾಣಿಗೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ದಾರಿ ದೀಪ ನಿರ್ವಹಣೆ ಗುತ್ತಿಗೆದಾರರ ಅವಧಿ ಮುಕ್ತಾಯದ ಹಂತದಲ್ಲಿದೆ. ಈ ಬಗ್ಗೆ ಹೊಸ ಟೆಂಡರ್ ಕರೆಯಲಾಗುತ್ತಿದೆ ಎಂದರು. ಶಾಸಕರು, ಸಂಸದರ ವೇತನ ಸರಕಾರ ಹೆಚ್ಚಿಸುತ್ತಿದೆ. ಹಾಗೆಯೇ ಪುರಸಭಾ ಸದಸ್ಯರ ಗೌರವ ಧನವನ್ನು ಹೆಚ್ಚಿಸುವಂತೆ ಕೈಗೊಂಡ ನಿರ್ಣಯಕ್ಕೆ ಸ್ಪಂದನೆ ದೊರಕಿದೆಯೇ ಎಂದು ಸದಸ್ಯ ಗಂಗಾಧರ್ ಪ್ರಶ್ನಿಸಿದಾಗ ನಿರ್ಣಯವನ್ನು ಸರಕಾರಕ್ಕೆ ರಮಾನಿಸಲಾಗಿದೆ ಎಂದು ಮುಖ್ಯಾಧಿಕಾರಿ ಸುಧಾಕರ್ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ವಾಸು ಪೂಜಾರಿ ಶೀಘ್ರದಲ್ಲೇ ರಾಜ್ಯದ ವಿವಿಧ ಪುರಸಭೆ, ನಗರ ಪಂಚಾಯತ್, ಪಾಲಿಕೆ, ನಗರ ಸಭೆ ಸದಸ್ಯರನ್ನೊಳಗೊಂಡ ನಿಯೋಗವನ್ನು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಈ ಕುರಿತ ಅಹವಾಲು ಮಂಡಿಸಲಿದ್ದಾರೆ. ಆಗ ನಮ್ಮ ಪುರಸಭೆಯಿಂದಲೂ ಕೈ ಜೋಡಿಸಿದರೆ ಉತ್ತಮ ಎಂದರು. ಇದಕ್ಕೆ ಅಧ್ಯಕ್ಷರು ಸಹ ಮತ ವ್ಯಕ್ತಪಡಿಸಿದರು.

ಲೆಕ್ಕ ಪತ್ರ ಕೇಳಿದ ಸದಸ್ಯ:

ಸಭೆ ಮುಕ್ತಾಯದ ಹಂತ ತಲುಪುತ್ತಿದ್ದಂತೆ ಕಲಾಪಕ್ಕೆ ಹಾಜರಾದ ಆಡಳಿತ ಪಕ್ಷದ ಸದಸ್ಯ ಸದಾಶಿವ ಬಂಗೇರ ಅವರು  ವಿಪಕ್ಷ ಸದಸ್ಯರಂತೆ ಆಡಳಿತ ಪಕ್ಷದ ವಿರುದ್ಧವೇ ಮುಗಿಬಿದ್ದರು. ಸಜಿಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ನಿರ್ಮಾಣ ಹಂತದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ 2011-12ನೆ ಸಾಲಿನಲ್ಲಿ 13ನೆ ಹಣಕಾಸಿನಡಿ ಕಾದಿರಿಸಲಾದ 68.40 ಲಕ್ಷ ರೂಪಾಯಿ ಅನುದಾನದಲ್ಲಿ ಕಾಮಗಾರಿ ನಡೆದಿದೆಯೇ? ಇಲ್ಲದಿದ್ದರೆ ಆ ಹಣ ಯಾವ ಖಾತೆಯಲ್ಲಿ ಜಮೆಯಾಗಿದೆ? ಕಾಮಗಾರಿಯಾಗಿದ್ದರೆ ಎಷ್ಟು ಖರ್ಚಾಗಿದೆ?  ಎಂದು ನೇರವಾಗಿ ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು. ಈ ವಿಚಾರದಲ್ಲಿ ಸುದೀರ್ಘ ಎರಡು ತಾಸುಗಳ ಕಾಲ ಚರ್ಚೆ ನಡೆಯಿತು. ಒಂದು ಹಂತದಲ್ಲಿ ಸದಸ್ಯ ಮುಹಮ್ಮದ್ ಶರೀಫ್ ಅವರು ಇಂತಹ ಪ್ರಶ್ನೆಗಳಿದ್ದರೆ ಮೊದಲೇ ಲಿಖಿತ ರೂಪದಲ್ಲಿ ಕೊಡಬೇಕು. ಸಭೆಯ ಕೊನೆಗಳಿಗೆಯಲ್ಲಿ ಬಂದು ಇಂಥಹ ಪ್ರಶ್ನೆ ಕೇಳುವುದು ಸರಿಯಲ್ಲ ಎಂದು ಬಂಗೇರ ಅವರಿಗೆ ಟಾಂಗ್ ಕೊಟ್ಟರು.

ಇದರಿಂದ ಕುಪಿತರಾದ ಸದಾಶಿವ ಬಂಗೇರ ಇದು ಸಾಮಾನ್ಯ ಸಭೆಯಾಗಿದ್ದು ಸಾರ್ವಜನಿಕ ಹಿತದೃಷ್ಟಿಯಿಂದ ಮಾಹಿತಿ ಕೇಳುವುದು ನನ್ನ ಹಕ್ಕು. ಕೇಳಿದ ಮಾಹಿತಿ ಸ್ಪಷ್ಟ ಉತ್ತರ ಕೊಡುವುದು ಅಧಿಕಾರಿಗಳ ಕರ್ತವ್ಯ. ಇಲ್ಲದಿದ್ದರೆ  ಲಿಖಿತವಾಗಿ ಕೊಡಿ ಎಂದು ಅಬ್ಬರಿಸಿದರು. ಇದೇ ವೇಳೆ ಮುಖ್ಯಾಧಿಕಾರಿ ನೀಡಿದ ಉತ್ತರದಿಂದ ಅವರು ತೃಪ್ತರಾಗಲಿಲ್ಲ. ಕೊನೆಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸುಧಾಕರ್ ಅವರು ಈ ಕುರಿತ ಎಲ್ಲ ಲೆಕ್ಕಪತ್ರದ ದಾಖಲೆಯನ್ನು ಲಿಖಿತ ರೂಪದಲ್ಲಿ ಮುಂದಿನ ಸಭೆಗೆ ಒದಗಿಸಲಾಗುವುದು ಎಂದು ಚರ್ಚೆಗೆ ತೆರೆ ಎಳೆದರು.ಮುಹಮ್ಮದ್ ಇಕ್ಬಾಲ್, ಮುನೀಶ್ ಅಲಿ, ಬಿ.ಮೋಹನ್, ವಸಂತಿ ಚಂದಪ್ಪ, ಯಾಸ್ಮೀನ್, ಜಗದೀಶ್ ಕುಂದರ್, ನಾಮನಿರ್ದೇಶಕ ಸದಸ್ಯರು ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *