ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಮಾನವೀಯತೆಯ ಸತ್ವವನ್ನು ಉಳಿಸಿಕೊಂಡು ಮುನ್ನಡೆಯುತ್ತಿರುವುದು ಅಭಿನಂದನೀಯ ಎಂದು ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್. ಹೇಳಿದ್ದಾರೆ. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ರಜತ ವರ್ಷಾಚರಣೆಯ ಪ್ರಯುಕ್ತ ಬಂಟ್ವಾಳ ಉಪ ವಿಭಾಗದ ನೂತನ ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ರವೀಶ್ ಸಿ.ಆರ್. ಅವರು ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಯಾವುದೇ ವೃತ್ತಿಯಲ್ಲಿ ಸ್ವಾರ್ಥ ಮೇಳೈಸಬಾರದು. ಮನಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದಾಗ ನಮ್ಮ ಕೆಲಸ ದೇವರಿಗೆ ಪ್ರಿಯವಾಗುತ್ತದೆ, ಮತ್ತು ನಮ್ಮ ಕಾರ್ಯಕ್ಕೂ ಯಶಸ್ಸು ಖಂಡಿತ ಎಂದರು.
ತಮ್ಮ ಮಾತಿನುದ್ದಕ್ಕೂ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಸಾಲುಗಳನ್ನು ಉಲ್ಲೇಖಿಸಿದ ಅವರು ತಮ್ಮ ಕವಿ ಹೃದಯವನ್ನು ಬಿಚ್ಚಿಟ್ಟರು. ಟಿಆರ್‍ಪಿ ಹಾಗೂ ಪ್ರಸಾರದ ಭರಾಟೆಯ ಆತುರದ ಬ್ರೇಕಿಂಗ್ ಸುದ್ದಿಗಳು ಕೆಲವೆಡೆ ಸಾಮಾಜಿಕ ಅಶಾಂತಿಗೆ ಕಾರಣವಾಗುವ ಬಗ್ಗೆಯೂ ಪತ್ರಕರ್ತರು, ಮಾಧ್ಯಮಗಳು ಎಚ್ಚರವಾಗಿರಬೇಕು ಎಂದರು.
ಪೊಲೀಸ್, ಪತ್ರಕರ್ತರು, ಸಾರ್ವಜನಿಕರು ಸಾಮಾಜಿಕ ಸಾಮರಸ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದ ಅವರು, ಈ ನಿಟ್ಟಿನಲ್ಲಿ ಬಂಟ್ವಾಳ ಉಪ ವಿಭಾಗದ ವ್ಯಾಪ್ತಿಯ ವಿವಿಧೆಡೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ, ಬಂಟ್ವಾಳ ಪ್ರೆಸ್‍ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆ, ಉಪಾಧ್ಯಕ್ಷ ರತ್ನದೇವ್ ಪೂಂಜಾಲಕಟ್ಟೆ, ರಜತ ವರ್ಷಾಚರಣಾ ಸಮಿತಿಯ ಸಂಚಾಲಕ ವೆಂಕಟೇಶ್ ಬಂಟ್ವಾಳ, ಕೋಶಾಧಿಕಾರಿ ಕಿಶೋರ್ ಪೆರಾಜೆ, ಚಂದ್ರಶೇಖರ ಕಲ್ಮಲೆ, ಯಾದವ ಅಗ್ರಬೈಲು, ಇಮ್ತಿಯಾಝ್ ಶಾ ತುಂಬೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
