ಬಂಟ್ವಾಳ: ಕಾಫಿಶಾಪ್ನಲ್ಲಿ ಪೋಟೋ ಕ್ಲಿಕ್ಕಿಸಿದರೆಂಬ ಅಪವಾದ ಹೊರಿಸಿ ನಿಷ್ಟಾವಂತ ಅಧಿಕಾರಿಯನ್ನು ಜಾತಿ ನಿಂದನೆಯ ಮೂಲಕ ಮಾನಸಿಕ ಹಿಂಸೆ ನೀಡಿ ಸರಿಯಾದ ನ್ಯಾಯ ಸಿಗದೆ ಹೋರಾಡುತ್ತಿರುವ ಎಡಿಜಿಪಿ ಡಾ. ರವೀಂದ್ರನಾಥರಿಗೆ ಸರ್ಕಾರ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ತುಂಗಪ್ಪ ಬಂಗೇರಾ ಗುರುವಾರ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒರ್ವ ಐಪಿಎಸ್ ಅಧಿಕಾರಿಯನ್ನು ದಲಿತ ಎನ್ನುವ ಕಾರಣಕ್ಕಾಗಿ ಅವರ ತೇಜೋವಧೆ ಮಾಡಲು ಸಹದ್ಯೋಗಿಗಳೇ ವೃತ್ತಿ ಮಾತ್ಸರ್ಯದಿಂದ ಇಲ್ಲ ಸಲ್ಲದ ಅಪವಾದ ಹೊರಿಸಿ ಡಾ. ರವಿಂದ್ರನಾಥರನ್ನು ಅಪರಾಧಿಯನ್ನಾಗಿ ಬಿಂಬಿಸಲಾಗುತ್ತಿದೆ. ಕಳೆದ ಮೇ 26ರಂದು ನಡೆದ ಈ ಪ್ರಕರಣ ದಿನದಿಂದ ದಿನಕ್ಕೆ ಕಗ್ಗಾಂಟಾಗುತ್ತಿದ್ದು ದಕ್ಷ ಅಧಿಕಾರಿ ನ್ಯಾಯ ಸಿಗಲು ಪರದಾಡುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿದರೂ ಪ್ರಕರಣವನ್ನು ಬಗೆಹರಿಸಲು ಸಾಧ್ಯವಾಗದೇ ಇರುವುದು ಸರ್ಕಾರದ ವೈಫಲ್ಯವನ್ನು ಸೂಚಿಸುತ್ತದೆ ಎಂದು ಆರೋಪಿಸಿದರು. ಪೊಲೀಸ್ ಅಧಿಕಾರಿಗಳ ಸಮಸ್ಯೆಯನ್ನು ಬಗೆಹರಿಸದ ಗೃಹಸಚಿವ ಕೆ.ಜಾರ್ಜ್ ತಕ್ಷಣ ರಾಜಿನಾಮೆ ನೀಡಬೇಕು ಎಂದು ಅವರು ಒತ್ತಯಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮಚ್ಚೇಂದ್ರ ಸಾಲ್ಯಾನ್, ಶಾಂತವೀರ ಪೂಜಾರಿ, ರತ್ನಕುಮಾರ್ ಚೌಟ, ಚಂದ್ರಶೇಖರ್ ಕುರಿಯಾಳ, ತಾ.ಪಂ.ಸದಸ್ಯರಾದ ರಮೇಶ್ ಕುಡ್ಮೇರ್, ವಿನಯನಾಯ್ಕ್ ಮತ್ತಿತರರು ಹಾಜರಿದ್ದರು.
