ತನ್ನನ್ನು ತಾನು ಅರಿತುಕೊಳ್ಳುವುದೇ-ಯೋಗ “ಪರಮಪೂಜ್ಯ ಶ್ರೀ ರಾಜಶೇಖರಾನಂದ “ಸ್ವಾಮೀಜಿ
ಕೈಕಂಬ:ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಶಾಂತಿವನ ಟ್ರಸ್ಟ್(ರಿ) ಧರ್ಮಸ್ಥಳದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಸಹಯೋಗದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಯೋಗ ಶಿಕ್ಷಕರ ವಿಶೇಷ ಪುನಶ್ಚೇತನ ಯೋಗ ಶಿಬಿರ ಎಸ್.ಡಿ.ಎಂ. ಮಂಗಳಜ್ಯೋತಿ ಶಾಲಾ ಸಭಾಂಗಣದಲ್ಲಿ ಪರಮ ಪೂಜ್ಯ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಯೋಗವು ಮಾನವನ ಬದುಕನ್ನು ಸುಗಮಗೊಳಿಸಿ ಸುಖ ಮತ್ತು ಸಂತೋಷದ ಜೀವನ ನಡೆಸಲು ಸಹಕಾರಿಯಾಗಿದೆ. ತನ್ನ ಬದುಕಿನ ಕರ್ತವ್ಯದಲ್ಲಿ ನಿಷ್ಠೆ, ಸಮಯಪ್ರಜ್ಞೆ ಮತ್ತು ಏಕಾಗ್ರತೆಯನ್ನು ಮೈಗೂಡಿಸಿಕೊಂಡು ತನ್ನನ್ನು ತಾನು ಅರಿತುಕೊಳ್ಳಲು ಯೋಗ ಮಾರ್ಗವು ಪೂರಕವಾಗಿದೆ. ಅನೇಕ ಒತ್ತಡಗಳ ಬದುಕಿನಿಂದ ಮನುಷ್ಯ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಇದನ್ನು ಮೀರಿ ನಿಲ್ಲಲು ಯೋಗ ಅಭ್ಯಾಸ ಅಗತ್ಯವಾಗಿದೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಎಳವೆಯಲ್ಲೆ ಇದರ ಅಭ್ಯಾಸವನ್ನು ಮಾಡಿಸಿದರೆ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸದೃಡವಾಗಲು ಸಾಧ್ಯ ಎಂದರು.
ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಯೋಗ ವಿಭಾಗದ ಅಧ್ಯಕ್ಷರಾದ ಡಾ.ಕೆ.ಕೃಷ್ಣ ಶರ್ಮ,ಯೋಗ ಶಿಕ್ಷಕ ಪುಂಡರೀಕಾಕ್ಷ ಭಟ್, ದೈಹಿಕ ಶಿಕ್ಷಕ ಪರಿವಿಕ್ಷಣಾಧಿಕಾರಿ ಲಿಲ್ಲಿ ಡೈಸ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಡೊನಾಲ್ಡ್ ಲೋಬೋ, ಆಡಳಿತಾಧಿಕಾರಿ ಗಣೇಶ್ ಭಟ್, ದ.ಕ. ಗುರುಯೋಗ ಸಂಘದ ಅಧ್ಯಕ್ಷ ಚೆನ್ನಕೇಶವ ಡಿ.ಆರ್, ಉಡುಪಿ ಗುರುಯೋಗ ಸಂಘಧ ಅಧ್ಯಕ್ಷ ನರೇಂದ್ರ ಕಾಮತ್, ಮುಖ್ಯೋಪಾಧ್ಯಾಯರಾದ ಅಶೋಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಭಾ ಅಧ್ಯಕ್ಷತೆಯನ್ನು ಪ್ರೋ.ಎ.ರಾಜೇಂದ್ರ ಶೆಟ್ಟಿ ವಹಿಸಿದ್ದರು. ಯೋಗ ನಿರ್ದೇಶಕರಾದ ಶಶಿಕಾಂತ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಯೋಗ ಸಂಘಟಕ ಶೇಖರ್‍ಕಡ್ತಲ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ದ.ಕ.ಜಿಲ್ಲಾ 150 ಯೋಗ ಶಿಕ್ಷಕರು ಭಾಗವಹಿಸಿದ್ದು 2 ದಿನಗಳ ಸನಿವಾಸ ತರಬೇತಿ ನಡೆಯಲಿದೆ. ಕಟೀಲು ಕಾಲೇಜಿನ ಪ್ರಾಂಶುಪಾಲರಾದ ಬಾಲಕೃಷ್ಣ ಶೆಟ್ಟಿಯವರಿಂದ ಜೀವನ ಮೌಲ್ಯಗಳ ಬಗ್ಗೆ ಉಪನ್ಯಾಸವಿದೆ. ರಾತ್ರಿ ಸಾಂಸ್ಕ್ರತಿಕ ಕಾರ್ಯಕ್ರಮವಿದ್ದು ಬಿ.ಸಿ.ರಾವ್ ಶಿವಪುರ ಇವರಿಂದ “ಹರಿಕಥಾ ಕಲಾಕ್ಷೇಪ ನಡೆಯಲಿದೆ.





