ಬಂಟ್ವಾಳ:ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡದಿದ್ದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ವಿವಿಧ ಜಾತಿಯ ಸೊಳ್ಳೆ ಉತ್ಪತ್ತಿಗೊಂಡು ಮಲೇರಿಯಾ, ಡೆಂಗೆ ಮತ್ತಿತರ ರೋಗ ಹರಡಲು ಕಾರಣವಾಗುತ್ತದೆ. ಇದಕ್ಕಾಗಿ ಪ್ರತಿಯೊಬ್ಬರು ಕುಡಾ ಜಾಗೃತರಾಗಿ ಮನೆ ಮತ್ತು ತೋಟಗಳಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಪಂಜಿಕಲ್ಲು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಮ್‍ರಮೇಶ್ ಹೇಳಿದ್ದಾರೆ.

ತಾಲ್ಲೂಕಿನ ಅಮ್ಟಾಡಿ ಗ್ರಾಮದ ನಲ್ಕೆಮಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಮಲೇರಿಯಾ ಮಾಸಾಚರಣೆ ಮತ್ತು ಡೆಂಗೆ ಜ್ವರ ಮಾಹಿತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದೇ ವೇಳೆ ಸ್ಥಳೀಯ ಸುಮಾರು 65ಕ್ಕೂ ಮಿಕ್ಕಿ ಮಂದಿ ಮಾಹಿತಿ ಶಿಬಿರದಲ್ಲಿ ಪಾಲ್ಗೊಂಡು ಪರಿಸರ ಸ್ವಚ್ಛವಾಗಿಡುವ ಬಗ್ಗೆ ಭರವಸೆ ನೀಡಿದರು.
ಸ್ಥಳೀಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಭಾರತಿ ಚೌಟ, ಸದಸ್ಯರಾದ ಮೋಹಿನಿ, ರತಿ, ಹಿಇಯ ಆರೋಗ್ಯ ಸಹಾಯಕಿ ಲೀಲಾವತಿ, ಕಿಇಯ ಆರೋಗ್ಯ ಸಹಾಯಕಿ ಹೇಮಾ, ಕಿರಿಯ ಆರೊಗ್ಯ ಸಹಾಯಕ ರವಿ ಕುಮಾರ್ ಮತ್ತಿತರರು ಇದ್ದರು.
ಮುಖ್ಯಶಿಕ್ಷಕಿ ಅಪೋಲಿನ್ ಪಿಂಟೊ ಸ್ವಾಗತಿಸಿ, ವಂದಿಸಿದರು.
