16ನೇ ಲೋಕಸಭೆಯ ಸಂಸದರ ಪ್ರತಿಜ್ಞಾ ವಿಧಿ ಪ್ರಕ್ರಿಯೆ ಸಂಸತ್ತಿನಲ್ಲಿ ಇಂದು ಬೆಳಗ್ಗೆ ಆರಂಭವಾಯಿತು. ಮೊದಲ ಬಾರಿಗೆ ಸಂಸದರಾದ ಪ್ರಧಾನಿ ನರೇಂದ್ರ ಮೋದಿಯವರು ಮೊದಲನೆಯವರಾಗಿ ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಎರಡನೆಯವರಾಗಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ, ಮೂರನೆಯವರಾಗಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಸಂಸದರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಆಡ್ವಾಣಿ ಹಾಗೂ ಸೋನಿಯಾ ಗಾಂಧಿ ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್ ಹಾಗೂ ಉಮಾಭಾರತಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಎಲ್ಲರ ಗಮನಸೆಳೆದರು.
ಕರ್ನಾಟಕದ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್, ಸಿದ್ದೇಶ್ ಕನ್ನಡದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿ ಸಂಸತ್ತಿನಲ್ಲಿ ಕನ್ನಡ ಅನುರಣಿಸುವಂತೆ ಮಾಡಿದರು.
ಹಂಗಾಮಿ ಸ್ಪೀಕರ್ ಕಮಲನಾಥ್ ಅವರು ಸಂಸದರಿಗೆ ಕರ್ತವ್ಯದ ಅರಿವು ಮೂಡಿಸುವ ಮಾತುಗಳನ್ನಾಡಿದ ಬಳಿಕ ಪ್ರತಿಜ್ಞಾ ವಿಧಿ ಸ್ವೀಕಾರಕ್ಕೆ ಅವಕಾಶ ಮಾಡಿಕೊಟ್ಟರು.
