ಬಂಟ್ವಾಳ : ಕರ್ನಾಟಕ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿಪತ್ರ ಕರ್ತರ ಅನುಕೂಲಕ್ಕಾಗಿ ಸ್ವಂತ ಪತ್ರಿಕಾ ಭವನ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಎಲ್ಲಾ ರೀತಿಯ ನೆರವು ನೀಡಲು ಬದ್ಧವಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಣಿ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಬಂಟ್ವಾಳ ತಾಲೂಕು ಕಾರ್ಯ ನಿರತ ಪ್ರಕರ್ತರ ಸಂಘದ ಬಿ.ಸಿ.ರೋಡಿನಲ್ಲಿರುವ ಪ್ರೆಸ್ ಕ್ಲಬ್ಗೆ ಮಂಗಳವಾರ ಭೇಟಿ ನೀಡಿ ಈ ಸಂದರ್ಭದಲ್ಲಿ ಅವರು ಸಂಘದ ಪದಾಕಾರಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿದರು.ರಾಜ್ಯದಲ್ಲಿ ಪತ್ರಕರ್ತರನ್ನು ಸಂಘಟಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕು ಕೇಂದ್ರದಲ್ಲೂ ಪತ್ರಿಕಾ ಭವನ ನಿರ್ಮಿಸುವ ಉದ್ದೇಶವನ್ನು ಸಂಘ ಹೊಂದಿದ್ದು ಈ ದಿಸೆಯಲ್ಲಿ ಸರಕಾರಿಜಮೀನು ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ಅವರು ಸಲಹೆ ನೀಡಿದರು.
ಇದೇ ವೇಳೆ ಪತ್ರಕರ್ತರಿಗೆ ಮಾಸಾಶನ ಸೇರಿದಂತೆ ಲಭ್ಯವಿರುವ ಇತರ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದ ಅವರು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಪ್ರಸಕ್ತ ರಜತ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಂಡಿರುವ ಜನಪರ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಸಂಘವು ಮಾದರಿ ತಾಲೂಕು ಘಟಕವಾಗಿ ಕಾರ್ಯಚರಿಸುವುದು ಅಭಿನಂದನೀಯವಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಪತ್ರಕರ್ತರ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಯಿತು.
ಪ್ರೆಸ್ ಕ್ಲಬ್ ಉಪಾಧ್ಯಕ್ಷ ರತ್ನದೇವ್ ಪುಂಜಾಲಕಟ್ಟೆ ಸ್ವಾಗತಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ ,ಕೋಶಾಧಿಕಾರಿ ಸಂದೀಪ್ ಸಾಲ್ಯಾನ್,ಸದಸ್ಯರಾದ ಕಿಶೋರ್ ಪೆರಾಜೆ,ಯಾದವ ಅಗ್ರಬೈಲ್ ಮೊದಲಾದವರು ಉಪಸ್ಥಿತರಿದ್ದರು.

