ಬಂಟ್ವಾಳ: ಕರ್ನಾಟಕ ರಾಜ್ಯ ಪೊಲೀಸ್ ಸಿಬ್ಬಂದಿಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನಡೆಸಿರುವ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಬಂಟ್ವಾಳ ಪ್ರಖಂಡ ಬೆಂಬಲ ವ್ಯಕ್ತಪಡಿಸಿ ತಾಲೂಕು ಕಚೇರಿಯ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಪೊಲೀಸರ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿದೆ.
ಪೊಲೀಸ್ ಸಿಬ್ಬಂದಿಗಳ ಈ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಸರಕಾರವೇ ನೇರೆ ಹೊಣೆ. 21ನೆ ಶತಮಾನದಲ್ಲೂ ಜೀತಪದ್ಧತಿ ಇನ್ನೂ ಜೀವಂತವಾಗಿದೆಯೆಂದಾದರೆ ಇದಕ್ಕೆ ಸರಕಾರ ಮತ್ತು ಉನ್ನತ ಅಧಿಕಾರಿಗಳೇ ನೇರ ಹೊಣೆ. ಪೊಲೀಸ್ ಸಿಬ್ಬಂದಿಗಳ ಬೇಡಿಕೆಗಳನ್ನು ಪರಿಶೀಲಿಸಿ, ಇಲಾಖಾ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿ ಮುಷ್ಕರ ಮಾಡದಂತೆ ತಡೆಯಬೇಕಾದ ಸರಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಎಸ್ಮಾ ಜಾರಿ ಮಾಡಿರುವುದನ್ನು ಮನವಿಯಲ್ಲಿ ಖಂಡಿಸಲಾಗಿದೆ.
ರಾತ್ರಿ ಬೆಳಗಾಗುವುದರೊಳಗೆ ತಮ್ಮ ಸಂಬಳ ಹಾಗೂ ಇನ್ನಿತರ ಸೌಲಭ್ಯಗಳನ್ನು ದುಪ್ಪಟ್ಟುಗೊಳಿಸುವಲ್ಲಿ ಯಾವುದೇ ವಿರೋಧ ಇಲ್ಲದೆ ಒಮ್ಮತದಿಂದ ಸವಲತ್ತುಗಳನ್ನು ಪಡೆಯುವ ಜನಪ್ರತಿನಿಧಿಗಳಿಗೆ ಸರಕಾರಿ ನೌಕರರ ಅದರಲ್ಲೂ ಪೊಲೀಸ್ ಸಿಬ್ಬಂದಿಗಳ ಕಷ್ಟಗಳನ್ನು ಅರಿತು ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಬೇಕಾದುದು ಸರಕಾರದ ರಾಜನೀತಿ. ಸಿಬ್ಬಂದಿಗಳ್ಲಿರುವ ವೇತನ ತಾರತಮ್ಯ ಅವಧಿ ಮೀರಿದ ದುಡಿಮೆ, ಹಿರಿಯ ಅಧಿಕಾರಿಗಳ ಕಿರುಕುಳ, ಇಲಾಖೆಯಲ್ಲಿ ಜೀತಪದ್ಧತಿ, ಇಲಾಖಾ ಕೆಲಸಗಳಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಮುಂತಾದವುಗಳಿಂದ ಇಲಾಖೆಯನ್ನು ಮುಕ್ತಗೊಳಿಸಿ ಇಲಾಖೆಯ ಸಿಬ್ಬಂದಿಗಳಲ್ಲಿ ಆತ್ಮಸ್ಥರ್ಯವನ್ನು ತುಂಬಿ ಸಾಮಾಜಿಕ ಸಾಮರಸ್ಯವನ್ನು ಕಾಪಾಡುವಂತೆ ಆಗ್ರಹಿಸಲಾಯಿತು.
ಸಂಘಟನೆಯ ಪ್ರಮುಖರಾದ ಅರುಣ್ ಕುಮಾರ್ ಶೆಟ್ಟಿ ನುಳಿಯಾಲು ಗುತ್ತು, ಸರಪಾಡಿ ಅಶೋಕ್ ಶೆಟ್ಟಿ, ಭರತ್ ಕುಂಬೇಳು, ಗುರುರಾಜ್ ಬಂಟ್ವಾಳ, ಪ್ರದೀಪ್ ಅಜ್ಜಿಬೆಟ್ಟು ಮೊದಲಾದವರು ಮನವಿ ಸಲ್ಲಿಕೆಯ ನಿಯೋಗದಲ್ಲಿದ್ದರು. ಎಬಿಪಿವಿ ಬೆಂಬಲ: ಪೊಳೀಸರ ನ್ಯಾನಯುತ ಹೋರಾಟಕ್ಕೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಘಟಕದ ಮುಖಂಡರು ಬೆಂಬಲ ವ್ಯಕ್ತಪಡಿಸಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಪೊಲೀಸರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ. ಪ್ರಮುಖರಾದ ಪ್ರಣಮ್ ರಾಜ್, ಅಶ್ವತ್ ಕುಮಾರ್ ಮೊದಲಾದವರಿದ್ದರು ಇದ್ದರು.
ಹಾಗೇಗೆ ತಾಲೂಕಿನ ಸಾಮಾಜಿಕ ನ್ಯಾಯಪರ ಸಮಿತಿಯು ಕೂಡಾ ಪೊಲೀಸರ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದೆ. ಈ ಸಂದರ್ಭದಲ್ಲಿ ಅಧ್ಯಕ್ಷ ಕೃಷ್ಣಾ ಅಲ್ಲಿಪಾದೆ, ಉಪಾಧ್ಯಕ್ಷ ರಾಜಾ ಚಂಡ್ತಿಮಾರ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಸುವರ್ಣ ಕಾಯರ್ಮಾರ್, ಕೋಶಾಧಿಕಾರಿ ಆಯೂಬ್ ಜಿ.ಕೆ. ಗೂಡಿನಬಳಿ, ಸಮಿತಿಯ ಪ್ರಮುಖರಾದ ಪ್ರಭಾಕರ ದೈವಗುಡ್ಡೆ, ಟೂರಿಸ್ಟ್ ವ್ಯಾನ್ ಚಾಲಕರ ಸಂಘದ ಅಧ್ಯಕ್ಷ ಶೇಖ್ ಅಬ್ದುಲ್ ರಝಾಕ್ ಸಾಹೇಬ್, ನಾರಾಯಣಾ ನಾಯಕ್, ದ.ಕ.ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕ-ಮಾಲಕರ ಸಂಘದ ಅಧ್ಯಕ್ಷ ವಿನ್ಸೆಂಟ್ ರಾಡ್ರಿಗಸ್ ಪರ್ಲ, ಪುರುಷೋತ್ತಮ ನಾಟಿ, ಚಂದ್ರಶೇಖರ ಮಾಣಿಮಜಲು, ಹಾರೂನ್ ರಶೀದ್ ಬಂಟ್ವಾಳ, ಹುಸೈನಾರ್ ಪರ್ಲೀಯಾ ಉಪಸ್ಥಿತರಿದ್ದರು.
ಕರ್ತವ್ಯಕ್ಕೆ ಹಾಜರು: ಹಿರಿಯ ಪೊಲೀಸ್ ಅಧಿಕಾರಿಗಳ ಒತ್ತಡ ಹಾಗೂ ಸರಕಾರದ ಭರವಸೆಯ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಪ್ರತಿಭನೆಯಿಂದ ಹಿಂದಕ್ಕೆ ಸರಿದಿದ್ದು ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣೆಯಲ್ಲೂ ಎಂದಿನಂತೆ ಪೊಲೀಸ್ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಶುಕ್ರವಾರ ರಾತ್ರಿ ಜಿಲ್ಲಾ ಎಸ್ಪಿ ಅವರು ಠಾಣೆಗಳಿಗೆ ಆಗಮಿಸಿ ಪೊಲೀಸರ ಮನವೋಲಿಸಿದ್ದರು. ಅದರಂತೆ ಶನಿವಾರ ಪೊಲೀಸ್ ಸಿಬ್ಬಂದಿಗಳು ತಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಲ್ಲದೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೂ ಮುಂಜಾಗೃತ ಕ್ರಮವಾಗಿ ಹೊರ ರಾಜ್ಯದ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು.
