ಬಂಟ್ವಾಳ, ಜೂ. 1: ಬಿ.ಸಿ.ರೋಡ್ ಉಪ ನೋಂದಾಣಿ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಅಂತರ್ಜಾಲ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ನೋಂದಾಣಿ ಕೆಲಸ ನಡೆಯದೆ ಸಾರ್ವಜನಿಕರು ಪರದಾಡುವಂತಾಯಿತು.
ಇಲ್ಲಿನ ಉಪ ನೋಂದಾಣಿ ಕಚೇರಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸಲು ಕೆಎಸ್‍ಒನ್ ಎಂಬ ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಮಂಗಳವಾರ ಬೆಳಗ್ಗೆಯಿಂದ ಕಚೇರಿಯ ಕಂಪ್ಯೂಟರ್‍ಗಳಿಗೆ ಅಂತರ್ಜಾಲ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ನೋಂದಾಣಿ ಕೆಲಸಕ್ಕೆ ತೊಡಕುಂಟಾಯಿತು. ನೋಂದಾಣಿ ಕೆಲಸಕ್ಕೆಂದು ಬಂದ ಸಾರ್ವಜನಿಕರು ತನ್ನ ಕೆಲಸ ಡೆಯದ ಕಾರಣ ತೊಂದರೆ ಅನುಭವಿಸಿದರು. ಕಚೇರಿಯ ಹೊರ ಭಾಗದಲ್ಲಿ ಕೂತು ಕಾಲ ಕಳೆದರು.

ಸಾರ್ವಜನಿಕರ ದೂರಿನ ಮೇರೆಗೆ ಉಪ ನೋಂದಾಣಿ ಕಚೇರಿಗೆ ಭೇಟಿ ನೀಡಿದ ಪತ್ರಕರ್ತರೊಂದಿಗೆ ಮಾತನಾಡಿದ ಕಚೇರಿಯ ಅಧಿಕಾರಿಯೊಬ್ಬರು, ವಿವಿಧ ನೋಂದಾಣಿ ಕೆಲಸ ಮಾಡಬೇಕಾದರೆ ಅಂತರ್ಜಾಲ ಅತ್ಯಗತ್ಯವಾಗಿದ್ದು, ಆದರೆ ಇಂದು ಬೆಳಗ್ಗೆಯಿಂದ ಅಂತರ್ಜಾಲ ಸಂಪರ್ಕ ಕಡಿತಗೊಂಡಿರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಕ್ಕೆ ಅಡ್ಡಿಯಾಗಿದೆ. ಅಂತರ್ಜಾಲ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಕೆಎಸ್‍ಒನ್ ಸಂಸ್ಥೆಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ದೂರು ನೀಡಲಾಗಿದೆ. ಈ ಸಂದರ್ಭದಲ್ಲಿ ಜನರೇಟರ್‍ಗೆ ಹಾಕಲು ಡೀಸಿಲ್ ಇಲ್ಲದಿರುವುದರಿಂದ ಸರ್ವರ್ ಆಫ್ ಆಗಿದ್ದು ಹಾಗಾಗಿ ಅಂತರ್ಜಾಲ ಸಂಪರ್ಕ ಕಡಿತಗೊಂಡಿದೆ. ಆದಷ್ಟು ಬೇಗ ಜನರೇಟರ್‍ಗೆ ಡೀಸಿಲ್ ತುಂಬಿಸಿ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗುವುದು ಎಂದು ಸಂಸ್ಥೆಯವರು ತಿಳಿಸಿದ್ದಾರೆ ಎಂದರು.
ನೋಂದಾಣಿ ಕಚೇರಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸುವ ಜವಾಬ್ದಾರಿ ಜಿಲ್ಲಾಡಳಿತದ್ದಾಗಿದ್ದು ಜಿಲ್ಲಾಡಳಿತದ ಪರವಾಗಿ ತಾಲೂಕು ಮಟ್ಟದಲ್ಲಿ ಆಯಾಯ ತಾಲೂಕಿನ ತಹಶೀಲ್ದಾರರು ಅದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತದಿಂದ ಅಂತರ್ಜಾಲ ಸಂಪರ್ಕ ಕಲ್ಪಸುವ ಕೆಎಸ್‍ಒನ್ ಸಂಸ್ಥೆಗೆ ಸಂದಾಯವಾಗಬೇಕಿದ್ದ ಹಣ ತುಂಬಾ ಸಮಯದಿಂದ ಬಾಕಿ ಇರುವುದರಿಂದ ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಬಿ.ಸಿ.ರೋಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಎಸ್‍ಒನ್ ಸಂಸ್ಥೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ ಎಂದು ಉಪ ನೋಂದಾಣಿ ಕಚೇರಿಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಉಪ ನೋಂದಾಣಿ ಕಚೇರಿಯಲ್ಲಿ ಪ್ರತಿ ದಿನ ಸುಮಾರು 40ರಷ್ಟು ನೋಂದಾಣಿಗಳು ನಡೆಯುತ್ತದೆ. ಆದರೆ ಅಧಿಕಾರಿಗಳು ಹಾಗೂ ಅಂತರ್ಜಾಲ ಸಂಸ್ಥೆಯವರ ಹಗ್ಗಜಗ್ಗಾಟದಿಂದಾಗಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯ ನಡೆಯದೆ ಪರದಾಡಿದರು. ನೋಂದಾಣೆಗೆಂದು ಬೆಳಗ್ಗೆ ಉಪ ನೋಂದಾಣಿ ಕಚೇರಿಗೆ ಆಗಮಿಸಿದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳು ನಡೆಯದೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗೆ ವಾಪಸಾದರು.
