ಬಂಟ್ವಾಳ: ವೀರಕಂಭ ಗ್ರಾ. ಪಂ. ವ್ಯಾಪ್ತಿಯಲ್ಲಿ ನೀರಿನ ಸಂಪರ್ಕ ಕಡಿತ ಮಾಡಿದ ಕುರಿತಾಗಿ ನಡೆಯುತ್ತಿದ್ದ ಪ್ರತಿಭಟನೆಯ ವರದಿಗೆ ಸಂಬಂಧಿಸಿ ಆಕ್ಷೇಪ ವ್ಯಕ್ತಪಡಿಸಿ ಪಕ್ಷವೊಂದರ ಮುಖಂಡ ಸಹಿತ ಪ್ರೇರಿತ ಗುಂಪೊಂದು ವಿಟ್ಲದ ಪತ್ರಕರ್ತರೋರ್ವರ ಮೇಲೆ ಹಲ್ಲೆಗೆ ಮುಂದಾದ ಘಟನೆಯನ್ನು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ.
ಮೇ.26 ರಂದು ವೀರಕಂಭ ಗ್ರಾ.ಪಂ ವ್ಯಾಪ್ತಿಯ ಕಲ್ಮಲೆಯಲ್ಲಿ ನೀರಿನ ಸಮಸ್ಯೆಗೆ ಸಂಬಂಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಇದರ ವರದಿಗೆಂದು ವಿಟ್ಲದ ಪತ್ರಕರ್ತರಾದ ವಿಷ್ಣುಗುಪ್ತ ಪುಣಚ, ಮಹಮ್ಮದ್ ಆಲಿ, ನಿಶಾಂತ್ ಬಿಲ್ಲಂಪದವು ತೆರಳಿದ್ದು, ವರದಿಗೆ ಬಂದದ್ದನ್ನೇ ಆಕ್ಷೇಪಿಸಿ ದೂರವಾಣಿ ಮೂಲಕ ಸ್ಥಳೀಯ ಕೆಲ ರಾಜಕೀಯ ನಾಯಕರು ತಕರಾರು ತೆಗೆದಿದ್ದಕ್ಕೆ ಎಲ್ಲರೂ ತಕ್ಕ ಉತ್ತರ ನೀಡಿದ್ದರು.
ಆದರೆ ಮಾರನೇ ದಿನ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿರುವುದನ್ನು ಪ್ರಶ್ನಿಸಿದ ಪಕ್ಷವೊಂದರ ಪ್ರೇರಿತ ಕೆಲವರು ವಿಟ್ಲದ ನಿರೀಕ್ಷಣಾ ಮಂದಿರದಲ್ಲಿ ಕಾರ್ಯಕ್ರಮವೊಂದರ ವರದಿ ಮಾಡುತ್ತಿದ್ದ ಸಮಯ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರ ಸಮ್ಮುಖದಲ್ಲಿ ವಿಜಯವಾಣಿ ಪತ್ರಿಕೆಯ ವರದಿಗಾರ ನಿಶಾಂತ್ ಬಿಲ್ಲಂಪದವು ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಹಲ್ಲೆಗೆ ಮುಂದಾಗಿದ್ದಾರೆ.
ಪೊಲೀಸ್ ಇಲಾಖೆಗೆ ಈ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೂ, ಸೂಕ್ತ ಬಂದೋಬಸ್ತು ಕಲ್ಪಿಸಿಲ್ಲ ಮತ್ತು ಘಟನೆಯ ಸಂದರ್ಭ ಠಾಣೆಯ ದೂರವಾಣಿಗೆ ಮಾಹಿತಿ ನೀಡಿದರು ಸ್ಥಳಕ್ಕಾಗಮಿಸಿಲ್ಲ. ಈ ಘಟನೆ ಪತ್ರಕರ್ತರ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದ್ದು, ಇದನ್ನು ಸಂಘ ಬಲವಾಗಿ ಖಂಡಿಸಿದೆ. ಇಂತಹಾ ಘಟನೆಗಳು ಪ್ರಜ್ಞಾವಂತ ಸಮಾಜಕ್ಕೆ ಕಪ್ಪು ಚುಕ್ಕೆಯಾಗಿದ್ದು, ಪೊಲೀಸ್ ಇಲಾಖೆ ಇಂತಹಾ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ರಾಜಕೀಯ ಪಕ್ಷಗಳ ನಾಯಕರೂ ಕೂಡ, ಪಕ್ಷಗಳ ಹೆಸರಿನಲ್ಲಿ ನಾಚಿಗೆಗೇಡಿನ ಕೆಲಸ ಮಾಡುವವರ ವಿರುದ್ದವೂ ನಿಗಾವಹಿಸುವಂತೆ ಸಂಘ ಮನವಿ ಮಾಡಿದೆ.
