ಬಂಟ್ವಾಳ; ಗಾಳಿಮಳೆಯಿಂದ ಹಾನಿಗೊಳಗಾದ ತಾಲೂಕಿನ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ನಡೆಸಲಾಗಿದ್ದು, ತಕ್ಷಣಕ್ಕೆ ಬಿಡುಗಡೆಯಾಗಿರುವ 15 ಲಕ್ಷ ಮೊತ್ತದ ಪರಿಹಾರವನ್ನು ತುರ್ತಾಗಿ ವಿತರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಬಿ.ಸಿ.ರೋಡಿನ ತಮ್ಮ ಕಛೇರಿಯಲ್ಲಿ ಮಳೆಯಿಂದ ಹಾನಿಗೊಳಗಾದ 161 ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದ ಸಚಿವರು, ಬಿರುಗಾಳಿಯಿಂದಾಗಿ ಸುಮಾರು 2 ಕೋಟಿಗೂ ಅಧಿಕ ನಷ್ಟವಾಗಿದ್ದು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ, ಜಿ.ಪಂ. ಇಂಜಿನಿಯರ್ ವಿಭಾಗ, ಮೆಸ್ಕಾಂ ಹಾಗೂ ಕೃಷಿ ಇಲಾಖೆ ಕಾಯೋನ್ಮುಖವಾಗಿದ್ದು, ಕಂದಾಯ ಇಲಾಖೆ ಹೆಚ್ಚುವರಿ ಗ್ರಾಮಕರಣಿಕರನ್ನು ನಿಯೋಜಿಸಿ ಪರಿಹಾರ ಕಾರ್ಯದಲ್ಲಿ ನಿರತವಾಗಿದೆ ಎಂದ ಅವರು, ಮೂರುದಿನಗಳ ಒಳಗಾಗಿ ಎಲ್ಲಾ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಕಮಲಾಕ್ಷಿ , ಪದ್ಮಶೇಖರ ಜೈನ್, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಬೂಡಾ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯೆ ಗಾಯತ್ರಿ ರವೀಂದ್ ಸಫಲ್ಯ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪುರಸಭಾ ಸದಸ್ಯರಾದ ಪ್ರವೀಣ್, ಗಂಗಾಧರ್, ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಯಶೋಧರ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿ, ವಂದಿಸಿದರು




