ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ರೂ 12ಕೋಟಿ ವೆಚ್ಛದಲ್ಲಿ ನಿರ್ಮಾಣಗೊಂಡ ಶಿಲಾಮಯ ಶ್ರೀರಾಮ ಮಂದಿರವು ಇದೇ 21ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಅವರು ಕಲ್ಲಡ್ಕದಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಅಂದು ಬೆಳಿಗ್ಗೆ ಗಂಟೆ 8.33 ರ ಶುಭ ಮುಹೂರ್ತದಲ್ಲಿ ಚಿತ್ರದುರ್ಗ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಪರಮ ಪೂಜ್ಯ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಮಂದಿರದಲ್ಲಿ ಶ್ರೀರಾಮಚಂದ್ರನ ಶಿಲಾಮಯ ವಿಗ್ರಹ ಸಹಿತ ಸೀತಾದೇವಿ, ಲಕ್ಷ್ಮಣ ಮತ್ತು ಕುಳಿತ ಭಂಗಿಯ ಹನುಮನ ವಿಗ್ರಹ ಪ್ರತಿಷ್ಠೆ ನೆರವೇರಿಸುವರು ಎಂದರು.
ಇದೇ 19ರಂದು ಸಂಜೆ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿಯಿಂದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.

ಇದೇ 20ರಂದು ಸಂಜೆ ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಸಂಸ್ಕಾರ ಭಾರತಿ ಪ್ರಾಂತ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಧಾರ್ಮಿಕ ಉಪನ್ಯಾಸ ನೀಡುವರು. ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ, ಸುನಿಲ್ ಕುಮಾರ್, ಎನ್.ವಿನಯ ಹೆಗ್ಡೆ ಮತ್ತಿತರ ಗಣ್ಯರು ಭಾಗವಹಿಸುವರು. ಅಂದು ರಾತ್ರಿ 9ಗಂಟೆಗೆ ಮಂಗಳೂರು ಸನಾತನ ನಾಟ್ಯಾಲಯ ತಂಡದಿಂದ ‘ರಾಷ್ಟ್ರದೇವೋಭವ’ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಇದೇ 21ರಂದು ಬೆಳಿಗ್ಗೆ ವಿಗ್ರಹ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಕೋಟಿ ತುಳಸಿ ಅರ್ಚನೆ, ಭಕ್ತರಿಂದ ವಿಗ್ರಹಕ್ಕೆ ಸ್ವತಃ ಸೀಯಾಳಾಭಿಷೇಕಕ್ಕೆ ಅವಕಾಶ ನೀಡಲಾಗಿದೆ.
ಅಂದು ಸಂಜೆ 5.30 ಗಂಟೆಗೆ ಕಲ್ಲಡ್ಕ ಶ್ರೀರಾಮ ವಿದ್ಯಾಲಯ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ರಾತ್ರಿ 7 ಗಂಟೆಗೆ ಜಿಲ್ಲೆಯ ‘ಯತಿ ಶ್ರೇಷ್ಠರ ಸಮಾಗಮ’ ಮತ್ತು ದಿಗ್ದರ್ಶನ, ರಾತ್ರಿ 9 ಗಂಟೆಗೆ ಬೆಂಗಳೂರಿನ ಪ್ರಭಾತ್ ಕಲಾವಿದರಿಂದ ‘ಧರ್ಮಭೂಮಿ’ ನೃತ್ಯ ರೂಪಕ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಇದೇ 22ರಂದು ಬೆಳಿಗ್ಗೆ ಬಾಲಗಣಪತಿ ಹೋಮ, ಸಂಜೆ ದುರ್ಗಾ ನಮಸ್ಕಾರ ಪೂಜೆ, ಮತ್ತು ಶ್ರೀರಾಮ ಶಿಶುಮಂದಿರ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಅಂದು ರಾತ್ರಿ ಗಂಟೆ 7.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕರಾದ ನಾರಾಯಣ ಸ್ವಾಮಿ ಎಸ್.ಅಂಗಾರ ಮತ್ತಿತರ ಗಣ್ಯರು ಭಾಗವಹಿಸುವರು.
ರಾತ್ರಿ 9ಗಂಟೆಗೆ ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಕಲಾವಿದರಿಂದ ಸಾಂಸ್ಕøತಿಕ ವೈಭವ ಕಾರ್ಯಕ್ರಮ ನಡೆಯಲಿದೆ.
ಇದೇ 23ರಂದು ಸಂಜೆ ಗಂಟೆ 5.30ರಿಂದ ಭಜನೆ, ದೀಪೋತ್ಸವ, ರಾತ್ರಿ 7ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ,ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶ್ರೀರಾಮುಲು, ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಮತ್ತಿತರ ಗಣ್ಯರು ಭಾಗವಹಿಸುವರು.
ರಾತ್ರಿ 9ಗಂಟೆಗೆ ಯುವ ಭಾಗವತ ಪಟ್ಲ ಸತೀಶ ಶೆಟ್ಟಿ ಕಲಾವಿದರ ಬಳಗದಿಂದ ‘ಶ್ರೀರಾಮ ಕಾರುಣ್ಯ’ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಅವರು ವಿವರಿಸಿದರು.
ವೈಶಿಷ್ಟ್ಯತೆ:
ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ಸುಮಾರು 100 ವರ್ಷಗಳ ಹಿಂದೆ ಆರಂಭಗೊಂಡ ಶ್ರೀರಾಮ ಮಂದಿರದಲ್ಲಿ ನಿರಂತರ ಭಜನೆ, ಕಳೆದ 55 ವರ್ಷಗಳಿಂದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ, ಸಾರ್ವಜನಿಕ ಗಣೇಶೋತ್ಸವ, ವರಮಹಾಲಕ್ಷ್ಮಿ ಪೂಜೆ ಮತ್ತಿತರ ಧಾರ್ಮಿಕ ಉತ್ಸವ ಸಹಿತ ಶ್ರೀರಾಮ ನಾಮ ತಾರಕ ಮಂತ್ರ ಜಪ ಮತ್ತಿತರ ಜನಪರ ಕಾರ್ಯಕ್ರಮಗಳು ನಡೆಯುತ್ತಿದೆ.
ಕಳೆದ 1973 ಮತ್ತು 1975ರಲ್ಲಿ ಜೀರ್ಣೋದ್ಧಾರಗೊಂಡ ಮಂದಿರದಲ್ಲಿ ಅಕ್ಕಿಗೇಟ್ ಚಳವಳಿ, ತುರ್ತು ಪರಿಸ್ಥಿತಿ, ಅಯೋಧ್ಯೆ ರಾಮಜನ್ಮ ಭೂಮಿ ಕರಸೇವೆ ಮತ್ತಿತರ ಸಂದರ್ಭದಲ್ಲಿ ಭಕ್ತರಿಗೆ ಆಶ್ರಯ ನೀಡಿದ್ದು, ಯಾವುದೇ ಜಾತಿ-ಭೇದವಿಲ್ಲದೆ ರಾಷ್ಟ್ರಭಕ್ತಿಗೆ ಪ್ರೇರಣಾ ಶಕ್ತಿ ಕೇಂದ್ರವಾಗಿ ಮಂದಿರವು ಬೆಳೆದಿದೆ. ಶ್ರೀರಾಮ ವಿದ್ಯಾಕೇಂದ್ರ ವೂ ಇಲ್ಲಿಂದಲೇ ಆರಂಭಗೊಂಡಿದೆ ಎಂದು ಅವರು ತಿಳಿಸಿದರು.
ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಿಂದ ಒಟ್ಟು 108 ಮೆಟ್ಟಿಲು ಹೊಂದಿರುವ ಮಂದಿರವು ರಸ್ತೆಯಿಂದ ಒಟ್ಟು 100 ಅಡಿ ಮೇಲ್ಮಟ್ಟದಲ್ಲಿ 39 ಅಡಿ ಎತ್ತರದ ಶಿಲಾಗೋಪುರ ರೂಪುಗೊಂಡಿದೆ ಎಂದು ಅವರು ವಿವರಿಸಿದರು.
ಸಮಿತಿ ಅಧ್ಯಕ್ಷ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಸಮಿತಿ ಕಾರ್ಯಾಧ್ಯಕ್ಷ ಜಿತೇಂದ್ರ ಎಸ್.ಕೊಟ್ಟಾರಿ, ವಿಶ್ವಸ್ಥ ಮಂಡಳಿ ಅಧ್ಯಕ್ಷ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಕಾರ್ಯದರ್ಶಿ ಕ.ಕೃಷ್ಣಪ್ಪ, ಪ್ರಮುಖರಾದ ಬಿ.ನಾರಾಯಣ ಸೋಮಯಾಜಿ, ಶ್ರೀಕರ ಪ್ರಭು, ವಿಕಾಸ್ ಪುತ್ತೂರು, ನಾಗೇಶ ಕಲ್ಲಡ್ಕ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
